ಬೆಂಗಳೂರು: ಕೇಂದ್ರ ಸರ್ಕಾರದ ರಾಜ್ಯಕ್ಕೆ ಅನ್ಯಾಯ ಮಾಡುತ್ತಿದ್ದರೂ ರಾಜ್ಯ ಬಿಜೆಪಿ ನಾಯಕರು ಸುಮ್ಮನೆ ಕೂತಿರುವುದು ದುರಂತ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ವಿರುದ್ಧ ಸರಣಿ ಟ್ವೀಟ್ ಮಾಡುವ ಮೂಲಕ ಪ್ರತಿಕ್ರಿಯಿಸಿರುವ ಅವರು, ಕರ್ನಾಟಕಕ್ಕೆ ವಿಶೇಷ ಅನುದಾನ ನೀಡದಿರುವ ಬಗ್ಗೆ ನಿರ್ಮಲಾ ಸೀತಾರಾಮನ್ ನೀಡಿರುವ ಕಾರಣ ಸಮರ್ಥನೀಯವಲ್ಲ. ಅವರು ತಪ್ಪು ವ್ಯಾಖ್ಯಾನವನ್ನು ನೀಡಿ ಜನರ ದಾರಿ ತಪ್ಪಿಸುತ್ತಿದ್ದಾರೆ. ತಮ್ಮ ತಪ್ಪನ್ನು ಮುಚ್ಚಿ ಹಾಕಲು ಅವರು ಯತ್ನಿಸುತ್ತಿದ್ದಾರೆ ಎಂದು ಕಿಡಿ ಕಾರಿದ್ದಾರೆ.
15ನೇ ಹಣಕಾಸು ಆಯೋಗ ರಾಜ್ಯಕ್ಕೆ 5,495 ಕೋಟಿ ರೂ. ವಿಶೇಷ ಅನುದಾನದ ಶಿಫಾರಸು ಮಾಡಿತ್ತು. ಆದರೆ ಕರ್ನಾಟಕದಿಂದ ಆಯ್ಕೆಯಾದ ನಿರ್ಮಲಾ ಸೀತಾರಾಮನ್ ಅದನ್ನು ತಿರಸ್ಕರಿಸಿದರು. 2020-21ನೇ ಸಾಲಿನಲ್ಲಿ ತನ್ನ ಪರಿಷ್ಕೃತ ಕೇಂದ್ರದ ತೆರಿಗೆ ಪಾಲು 28,591 ಕೋಟಿ ರೂ. ಆಗಿತ್ತು. 15ನೇ ಹಣಕಾಸು ಆಯೋಗ ಅಂದಾಜಿಸಿದ್ದು 31,180 ಕೋಟಿ ರೂ. ಇದು ಕರ್ನಾಟಕಕ್ಕೆ ವಿಶೇಷ ಅನುದಾನ ನೀಡಲು ಪ್ರಮುಖ ಕಾರಣವಾಗಿದೆ. ಆದರೆ ನಿರ್ಮಲಾ ಸೀತಾರಾಮನ್ ಅವರು ವಿಶೇಷ ಅನುದಾನವನ್ನು ಆದಾಯ ಕೊರತೆಗಾಗಿನ ಅನುದಾನ ಎಂದು ತಪ್ಪಾಗಿ ಬಿಂಬಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕರ್ನಾಟಕ ಸರ್ಕಾರ 2020-21ರ ತನ್ನ ಪರಿಷ್ಕೃತ ಅಂದಾಜಿನಲ್ಲಿ 19,485 ಕೋಟಿ ರೂ. ಆದಾಯ ಕೊರತೆ ಆಗಬಹುದು ಎಂದು ಅಂದಾಜಿಸಿತ್ತು. ಆದರೆ ಈಗ ರಾಜ್ಯ ಸರ್ಕಾರ ನಿರ್ಮಲಾ ಸೀತಾರಾಮನ್ಗೆ ಹೆಚ್ಚುವರಿ ಆದಾಯದ ಲೆಕ್ಕವನ್ನು ತೋರಿಸಿದೆ. ನಿರ್ಮಲಾ ಸೀತಾರಾಮನ್ರ ಆದಾಯ ಕೊರತೆಯ ಸಮರ್ಥನೆಯನ್ನು ಪರಿಗಣಿಸಿದರೂ ಕರ್ನಾಟಕಕ್ಕೆ 5,495 ಕೋಟಿ ರೂ. ವಿಶೇಷ ಅನುದಾನ ಸಿಗಬೇಕಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಕರ್ನಾಟಕಕ್ಕೆ ವಿಶೇಷ ಅನುದಾನ ಮಾತ್ರವಲ್ಲ ಜಿಎಸ್ಟಿ ಪರಿಹಾರ ಮೊತ್ತವನ್ನೂ ನಿರಾಕರಿಸಲಾಗಿದೆ. ಈ ಬಗ್ಗೆ ಸಿಎಂ ಆಗಲಿ, ಬಿಜೆಪಿ ಸಂಸದರಾಗಲಿ ಪ್ರತಿಭಟಿಸಿಲ್ಲ. ಇದರಿಂದ ಕರ್ನಾಟಕದ ಸಂಪತ್ತು ಬರಿದಾಗಿದೆ ಎಂದು ಆರೋಪಿಸಿದ್ದಾರೆ.
ತೈಲ ಬೆಲೆ ಏರಿಕೆಗೆ ಕೇಂದ್ರ ಸರ್ಕಾರ ಹೇರಿರುವ ಅಧಿಕ ಕರವೇ ಕಾರಣವಾಗಿದೆ. ಕೇಂದ್ರ ಸರ್ಕಾರ 3.45 ರೂ. ನಿಂದ 31.84 ರೂ.ಗೆ ಡೀಸೆಲ್ ಮೇಲಿನ ಕರವನ್ನು ಹೆಚ್ಚಿಸಿದ್ದರೆ, ಪೆಟ್ರೋಲ್ ಮೇಲಿನ ಕರವನ್ನು 9.21 ರೂ.ನಿಂದ 32.98 ರೂ.ಗೆ ಹೆಚ್ಚಿಸಿದೆ ಎಂದು ಆರೋಪಿಸಿದ್ದಾರೆ.