ಬೆಂಗಳೂರು: ಸಿದ್ದರಾಮಯ್ಯ ಬಯ್ಯೋದರಲ್ಲಿ, ಜಗಳ ಬಿಡಿಸೋದ್ರಲ್ಲಿ ಕಾಂಗ್ರೆಸ್-ಜೆಡಿಎಸ್ ನಡುವೆ ಪಂಚಾಯ್ತಿ ಮಾಡೋದರಲ್ಲಿ ಬ್ಯುಸಿಯಾಗಿದ್ದಾರೆ ಎಂದು ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ ಲೇವಡಿ ಮಾಡಿದ್ದಾರೆ.
ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಮುಖ್ಯಮಂತ್ರಿಯವರು ಮಂಡ್ಯಕ್ಕೆ ಸೀಮಿತರಾಗಿದ್ದಾರೆ. ಮುಖ್ಯಮಂತ್ರಿಯಾಗಿರುವ ಕಾರಣಕ್ಕೆ ಸಿಗುವ ಆಡಳಿತಾತ್ಮಕ ಮಾಹಿತಿಗಳನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಿದ್ದಾರೆ. ದೇಶದ ಎಲ್ಲೆಡೆ ಐಟಿ ರೇಡ್ಗಳಾಗುತ್ತಿವೆ. ಅದರ ಬಗ್ಗೆ ಚಕಾರ ಎತ್ತಲ್ಲ. ಕೇವಲ ಮಂಡ್ಯದಲ್ಲಿ ನಡೆದ ಐಟಿ ರೇಡ್ ವಿರುದ್ಧ ಪ್ರತಿಭಟನೆ ಮಾಡುತ್ತಾರೆ. ಈಗ ಗುತ್ತಿಗೆದಾರರ ಬಳಿ ಹತ್ತು ಕೋಟಿ ಸಿಕ್ಕಿದೆಯಲ್ಲಾ ಅದಕ್ಕೆ ಸಿಎಂ ಏನು ಹೇಳುತ್ತಾರೆ ಎಂದು ಪ್ರಶ್ನಿಸಿದರು.
ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ಕಾಂಗ್ರೆಸ್ ನಾಯಕರು ಹೆದರಿ ಪಲಾಯನ ಮಾಡುತ್ತಿದ್ದಾರೆ. ಅಮೇಥಿಯಲ್ಲಿ ಟೆಂಪಲ್ ರನ್ ಮಾಡಿದ ರಾಹುಲ್ ಗಾಂಧಿ ವಯನಾಡಿನಲ್ಲಿ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಕಾಂಗ್ರೆಸ್ ಬಾವುಟಗಳೇ ಇರಲಿಲ್ಲ. ಪಾಕ್ ಧ್ವಜ ಹೋಲುವ ರಾಜಕೀಯ ಪಕ್ಷದ ಧ್ವಜಗಳೇ ಇದ್ದವು ಎಂದು ಆರೋಪಿಸಿದರು.
ಇದೇ ವೇಳೆ ಹುಬ್ಬಳ್ಳಿಯಲ್ಲಿ ವಿನಯ್ ಕುಲಕರ್ಣಿಯವರು ನಾವು ರಾಹುಲ್ ಗಾಂಧಿ ಹೆಸರು ಹೇಳಲ್ಲ, ನೀವು ಮೋದಿ ಹೆಸರು ಹೇಳಬೇಡಿ. ನಾಯಕರ ಹೆಸರು ಹೇಳದೆ ಮತ ಕೇಳೋಣ ಎಂದಿದ್ದಾರೆ. ರಾಹುಲ್ ಗಾಂಧಿ ಹೆಸರು ಹೇಳಿದ್ರೇ ವೋಟ್ ಬರಲ್ಲ. ಆದರೆ, ಮೋದಿ ಹೆಸರು ಹೇಳಿದ್ರೇ ವೋಟ್ ಡಬ್ಬಲ್ ಆಗುತ್ತೆ. ಹಾಗಾಗಿ ನಾವು ನರೇಂದ್ರ ಮೋದಿಯವರ ಹೆಸರು ಹೇಳೇ ಮತ ಕೇಳುತ್ತೇವೆ ಎಂದು ತಿರುಗೇಟು ನೀಡಿದರು.