ಬೆಂಗಳೂರು/ಕೋಲಾರ: ಮುಂಬರುವ ವಿಧಾನಸಭಾ ಚುನಾವಣೆ ಪ್ರಚಾರ ಸಂದರ್ಭದಲ್ಲಿ ಬಳಕೆಗಾಗಿ ಸಿದ್ದಗೊಂಡಿರುವ ವಿಶೇಷ ವಾಹನದ ಪರೀಕ್ಷಾರ್ಥ ಸಂಚಾರಕ್ಕೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಭಾನುವಾರ ಚಾಲನೆ ನೀಡಿದರು. ಈ ವಾಹನದ ಮೂಲಕ ಅವರು ಕೋಲಾರಕ್ಕೆ ಆಗಮಿಸಿದ್ದಾರೆ.
ಕೋಲಾರ ನಗರದ ಶಕ್ತಿ ದೇವಾಲಯಕ್ಕೆ ಆಗಮಿಸಿದ ಸಿದ್ದರಾಮಯ್ಯ, ಕೋಲಾರಮ್ಮನಿಗೆ ಪೂಜೆ ಸಲ್ಲಿಸಿದರು. ಅರ್ಚಕರಿಂದ ಸಿದ್ದರಾಮಯ್ಯ ಅವರಿಗೆ ಪೂರ್ಣಕುಂಭ ಸ್ವಾಗತ ಕೋರಿದ್ದು ಜಿಲ್ಲಾ ಮುಖಂಡರು ಬರಮಾಡಿಕೊಂಡರು. ಮಾಜಿ ಸ್ಪೀಕರ್ ರಮೇಶ್ ಕುಮಾರ್, ಕೃಷ್ಣಬೈರೇಗೌಡ, ಶಾಸಕ ಶರತ್ ಬಜ್ಜೇಗೌಡ, ಶಾಸಕ ನಂಜೇಗೌಡ, ಎಂಎಲ್ಸಿ ಅನಿಲ್ ಕುಮಾರ್ ಸೇರಿದಂತೆ ಕಾಂಗ್ರೇಸ್ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.
ವಾಹನದ ಪರೀಕ್ಷಾರ್ಥ ಸಂಚಾರ: 2023ರ ವಿಧಾನಸಭೆ ಚುನಾವಣೆಯಲ್ಲಿ ಇದೇ ವಾಹನದಲ್ಲಿ ಸಿದ್ದರಾಮಯ್ಯ ಪ್ರಚಾರ ಕಾರ್ಯಕ್ಕೆ ತೆರಳಲಿದ್ದಾರೆ. ಕೆಲ ತಿಂಗಳ ಹಿಂದೆ ಈ ವಾಹನ ಸಜ್ಜಾಗಿದ್ದು, ಪ್ರಾಯೋಗಿಕ ಸಂಚಾರ ಮಾಡಿರಲಿಲ್ಲ. ಇಂದು ಕೋಲಾರಕ್ಕೆ ಕಾರ್ಯಕ್ರಮವೊಂದಕ್ಕೆ ತೆರಳುವ ಮೂಲಕ ವಾಹನದ ಪರೀಕ್ಷಾರ್ಥ ಸಂಚಾರವನ್ನು ಮಾಡಲಾಯಿತು. ಶಿಡ್ಲಘಟ್ಟ ಶಾಸಕ ಮುನಿಯಪ್ಪ, ಭೈರತಿ ಸುರೇಶ್, ಎಂ ಆರ್ ಸೀತರಾಮ್ ಜೊತೆ ಸಿದ್ದರಾಮಯ್ಯ ಪ್ರಯಾಣ ಬೆಳೆಸಿದರು.
ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ತಾವು ಸ್ಪರ್ಧಿಸಲು ಕೋಲಾರ ವಿಧಾನಸಭೆ ಕ್ಷೇತ್ರವನ್ನು ಸಹ ಆಯ್ಕೆಯ ಪಟ್ಟಿಯಲ್ಲಿ ಇರಿಸಿಕೊಂಡಿರುವ ಸಿದ್ದರಾಮಯ್ಯ, ಇಂದು ಈ ವಿಚಾರವಾಗಿ ಮಹತ್ವದ ನಿರ್ಧಾರ ಕೈಗೊಳ್ಳುವ ನಿಟ್ಟಿನಲ್ಲಿ ಸಭೆ ನಡೆಸಲಿದ್ದಾರೆ.
ಹಲವು ಕಡೆಯಿಂದ ಆಹ್ವಾನ: ವಿಶೇಷವಾದ ಬಸ್ಸಿನಲ್ಲಿ ಅಧೀಕೃತವಾಗಿ ಪ್ರವಾಸ ಶುರು ಮಾಡಿದ ಸಿದ್ದರಾಮಯ್ಯ ತೆರಳುವ ಮುನ್ನ ಮಾಧ್ಯಮಗಳ ಜೊತೆ ಮಾತನಾಡಿ, ಎಲ್ಲರೂ ಒಟ್ಟಾಗಿ ಹೋಗಬೇಕು. ಅದಕ್ಕಾಗಿ ಬಸ್ಸಿನಲ್ಲಿ ಹೋಗ್ತಿದ್ದೇವೆ. ಕೋಲಾರದವರು ನನ್ನನ್ನು ಕರೀತಿದ್ದಾರೆ. ಅಲ್ಲಿ ಶ್ರೀನಿವಾಸ್ ಗೌಡ ನಿಲ್ಲಲ್ಲ, ಅದಕ್ಕೆ ನೀವು ನಿಲ್ಲಿ ಅಂತಿದ್ದಾರೆ. ಅನೇಕ ಕಡೆಗಳಲ್ಲೂ ಕರೀತಿದ್ದಾರೆ. ಅದಕ್ಕಾಗಿ ಅಲ್ಲಿ ಪರಿಶೀಲನೆ ಮಾಡಲು ಕೋಲಾರಕ್ಕೆ ಹೋಗ್ತಿದ್ದೇನೆ. ಅಂತಿಮವಾಗಿ ಹೈಕಮಾಂಡ್ ಯಾವ ತೀರ್ಮಾನ ಮಾಡುತ್ತದೋ ಅಲ್ಲಿ ಸ್ಪರ್ಧೆ ಮಾಡ್ತೀನಿ ಎಂದರು.
ಇದನ್ನೂ ಓದಿ: ಟಿಪ್ಪು ಪ್ರತಿಮೆ ಸ್ಥಾಪಿಸುವ ತನ್ವೀರ್ ಸೇಠ್ ಹೇಳಿಕೆಗೆ ಸಿದ್ದರಾಮಯ್ಯ ಬೆಂಬಲ.. ಡಿಕೆಶಿ ಮೌನ
ಬಾದಾಮಿ, ವರುಣಾ, ಚಾಮರಾಜಪೇಟೆಯಲ್ಲೂ ಸ್ಪರ್ಧೆಗೆ ಒತ್ತಡ ಇದೆ. ಆದರೆ ಕೋಲಾರದಲ್ಲಿ ಜಾಸ್ತಿ ಒತ್ತಡ ಇದೆ. ಅದಕ್ಕಾಗಿ ನಾನು ಇಂದು ಅಲ್ಲಿಗೆ ಹೋಗ್ತಿದ್ದೇನೆ. ಇಂದು ಅಲ್ಲಿನ ಸ್ಥಳೀಯ ನಾಯಕರ ಜೊತೆ ಚರ್ಚಿಸಿ ಸೂಕ್ತ ತೀರ್ಮಾನ ಮಾಡ್ತೀನಿ ಎಂದು ತಿಳಿಸಿದರು. ನಿನ್ನೆಯಷ್ಟೇ ಚಿಕ್ಕಬಳ್ಳಾಪುರ ವಿಧಾನಸಭೆ ಕ್ಷೇತ್ರದ ಮುಖಂಡರ ಸಭೆ ನಡೆಸಿರುವ ಸಿದ್ದರಾಮಯ್ಯ ಅಲ್ಲಿಂದ ಡಾ ಕೆ ಸುಧಾಕರ್ ವಿರುದ್ಧ ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಕ್ಷಾ ರಾಮಯ್ಯರನ್ನು ಕಣಕ್ಕಿಳಿಸಲು ಮುಖಂಡರಿಂದ ಮಾಹಿತಿ ಕಲೆ ಹಾಕಿದ್ದಾರೆ ಎಂದು ತಿಳಿದುಬಂದಿದೆ.