ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಜರುಗುವ 21ನೇ ಚಿತ್ರಸಂತೆಗೆ ಚಾಲನೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಈ ಬಾರಿಯ ಚಿತ್ರಸಂತೆಯನ್ನು ಬಾಹ್ಯಾಕಾಶ ವಿಜ್ಞಾನಿಗಳಿಗೆ ಸಮರ್ಪಣೆ ಮಾಡಲಾಗಿದೆ ಎಂದು ತಿಳಿಸಿದರು. ಬಳಿಕ, ಚಿತ್ರಕಲಾ ಪರಿಷತ್ ಆವರಣದಲ್ಲಿ ಇರುವ ಸ್ಟಾಲ್ಗಳನ್ನು ವೀಕ್ಷಿಸಿದರು. ಇದಕ್ಕೂ ಮುನ್ನ, ಸಿಎಂಗೆ ಡೊಳ್ಳು ಕುಣಿತ, ತಮಟೆ ವಾದ್ಯಗಳ ಮೂಲಕ ಅದ್ಧೂರಿ ಸ್ವಾಗತ ಕೋರಲಾಯಿತು.
ನಂತರ ಮಾತನಾಡಿದ ಸಿಎಂ, ಚಿತ್ರಸಂತೆಯನ್ನು ಅತ್ಯಂತ ಸಂತೋಷದಿಂದ ಉದ್ಘಾಟಿಸಿದ್ದೇನೆ. ಚಿತ್ರಕಲಾ ಪರಿಷತ್ 2003ರಿಂದ ಚಿತ್ರಸಂತೆಯನ್ನು ಆಚರಣೆ ಮಾಡ್ತಿದೆ. 2013ರಿಂದ 2018ರವರೆಗೆ ನಾನು ಉದ್ಘಾಟನೆ ಮಾಡಿದ್ದೇನೆ. ಈ ಬಾರಿಯೂ ಮಹಾರಾಷ್ಟ್ರಕ್ಕೆ ಹೋಗುವ ಕಾರ್ಯಕ್ರಮ ಇದ್ದರೂ ಬಂದಿದ್ದೇನೆ. ಸುಮಾರು 3ರಿಂದ 4 ಲಕ್ಷ ಜನ ಕಾರ್ಯಕ್ರಮದಲ್ಲಿ ಭಾಗವಹಿಸ್ತಾರೆ. 22 ರಾಜ್ಯದಿಂದ 1,600 ಕಲಾವಿದರು ಭಾಗವಹಿಸೋದು ಸಂತಸದ ವಿಚಾರ ಎಂದರು.
50 ಲಕ್ಷ ರೂ ಅನುದಾನ: ಬಿ.ಎಲ್.ಶಂಕರ್ ಎರಡು ಬೇಡಿಕೆ ಇಟ್ಟಿದ್ದಾರೆ. ಸರ್ಕಾರ ಇದಕ್ಕೆ ಸಹಾಯ ನೀಡುತ್ತದೆ. ಈ ಬಾರಿ ಪರಿಷತ್ಗೆ 50 ಲಕ್ಷ ರೂ. ನೀಡುತ್ತೇನೆ. ಚಿತ್ರಕಲೆ ಪರವಾಗಿ ನಮ್ಮ ಸರ್ಕಾರವಿದೆ ಎಂದು ಹೇಳಿದರು.
ಇದನ್ನೂ ಓದಿ: ಕಲಾಸಕ್ತರ ಕಣ್ಮನ ತಣಿಸಿದ ಚಿತ್ರಸಂತೆ
ಅನುದಾನದ ಬೇಡಿಕೆ: ಇದೇ ವೇಳೆ ಮಾತನಾಡಿದ ಚಿತ್ರಕಲಾ ಪರಿಷತ್ ಅಧ್ಯಕ್ಷ ಬಿ.ಎಲ್.ಶಂಕರ್, "ಸಾಂಪ್ರದಾಯಿಕ ಚಿತ್ರಕಲೆ ಬೆಳೆಸಲು ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಚಿತ್ರಕಲಾ ಸಂತೆ ಕಾಲೇಜಿಗೆ ಹೆಚ್ಚು ಸಹಾಯಧನ ನೀಡಬೇಕು. ಜೊತೆಗೆ, ಚಿತ್ರಕಲಾ ಪರಿಷತ್ ಸಂಸ್ಥೆಯನ್ನು ಅನುದಾನಕ್ಕೆ ಒಳಪಡಿಸಬೇಕು" ಎಂದು ಮನವಿ ಮಾಡಿದರು.
1,500 ಕಲಾವಿದರು ಭಾಗಿ: ಚಿತ್ರಸಂತೆಗೆ 22 ರಾಜ್ಯಗಳಿಂದ 1500ಕ್ಕೂ ಹೆಚ್ಚು ಕಲಾವಿದರು ಭಾಗಿಯಾಗಿದ್ದಾರೆ. ಈ ಪೈಕಿ 205 ವಿಶೇಷಚೇತನರು ಅರ್ಜಿ ಹಾಕಿದ್ದರು. ಅರ್ಜಿ ಹಾಕಿದ ಎಲ್ಲಾ ವಿಶೇಷಚೇತನ ಕಲಾವಿದರಿಗೂ ಅವಕಾಶ ನೀಡಲಾಗಿದೆ.