ಬೆಂಗಳೂರು: ರಾಜ್ಯದಲ್ಲಿ ಈಗ ಕೊರೊನಾ ಹೆಚ್ಚಾಗಿದ್ದು, ಲಾಕ್‌ಡೌನ್ ಅವಶ್ಯಕತೆಯಿದೆ. ಆದರೆ ಆಗ ಅಕಾಲಿಕವಾಗಿ ಲಾಕ್‌ಡೌನ್ ಮಾಡಿದರು. ಅದರಿಂದ ಆರೋಗ್ಯವೂ ಹೋಯಿತು, ಆರ್ಥಿಕತೆಯೂ ಹಾಳಾಯ್ತು. ಯಾವುದೇ ಸಿದ್ಧತಾ ಕ್ರಮ ತೆಗೆದುಕೊಳ್ಳದೇ ಲಾಕ್‌ಡೌನ್ ಮಾಡಿದ್ದರು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಕಾಂಗ್ರೆಸ್ ಭವನದಲ್ಲಿ ಮಾತನಾಡಿದ ಅವರು, ಹಾಗೆ ನೋಡಿದ್ರೆ ಲಾಕ್ ಡೌನ್ ಈಗ ಮಾಡಬೇಕಿತ್ತು. ಆಗ ಏಕಾಏಕಿ ಲಾಕ್ ಡೌನ್ ಮಾಡಿ ಆರ್ಥಿಕತೆ ಹಾಳು ಮಾಡಿದರು. ಈಗ ದಿನೇ ದಿನೆ ಕೊರೊನಾ ಸೋಂಕು ಹೆಚ್ಚಾಗುತ್ತಿದೆ. ಆಗ ಲಾಕ್ ಡೌನ್ ಮಾಡುವ ಬದಲು ಈಗ ಮಾಡಬೇಕಿತ್ತು. ತಜ್ಞರು ಹೇಳುವ ಪ್ರಕಾರ ಆಗಸ್ಟ್ ವರೆಗೆ ರಾಜ್ಯದಲ್ಲಿ ಕೊರೊನಾ ಪ್ರಕರಣ ಹೆಚ್ಚಳವಾಗಲಿದೆ. ಹೀಗಾಗಿ ಈಗ ಲಾಕ್‌ಡೌನ್ ಮಾಡಬೇಕಾಗಿದೆ. ಆದರೆ ಈಗ ಲಾಕ್‌ಡೌನ್ ಮಾಡಿದರೆ ಆರ್ಥಿಕತೆ ಹಾಳಾಗುತ್ತೆ ಅಂತಾ ಸರ್ಕಾರ ಹೇಳ್ತಿದೆ ಎಂದರು.
ಬೆಂಗಳೂರು ಶಾಸಕರ ಬದಲಿಗೆ ಮೊದಲು ಸರ್ವಪಕ್ಷಗಳ ಸಭೆ ಕರೆಯಬೇಕಿತ್ತು. ಅಲ್ಲಿ ಅವರ ತಪ್ಪು ಏನು ಎಂಬುದನ್ನು ಹೇಳುತ್ತೇವೆ. ಕೊರೊನಾ ತಡೆಯುವಲ್ಲಿ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ. ಹೀಗಾಗಿ ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚಾಗಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಸಿಎಂ ಯಡಿಯೂರಪ್ಪ ಇಬ್ಬರು ಕೊರೊನಾ ಸೋಂಕು ತಡೆಯುವಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಿದರು.
ಈಗ ಶಾಸಕರನ್ನು ಕರೆದರೆ ಪ್ರಯೋಜನ ಇಲ್ಲ:
ಸರ್ಕಾರ ಎಲ್ಲಾ ವಿಚಾರದಲ್ಲೂ ವಿಫಲವಾಗಿದೆ. ಎರಡು ತಿಂಗಳ ಲಾಕ್‌ಡೌನ್ ವೇಳೆ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಬೇಕಾಗಿತ್ತು. ಈಗ ಕೊರೊನಾ ಪ್ರಕರಣ ಹೆಚ್ಚಾದ ಸಂದರ್ಭದಲ್ಲಿ ಶಾಸಕರ ಸಭೆ ಕರೆದು ಏನು ಪ್ರಯೋಜನ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪ್ರಶ್ನಿಸಿದರು.
ಕನಕಪುರದಲ್ಲಿ ನಾಗರಿಕರ ಬಳಿ ಚರ್ಚಿಸಿ ಒಂದು ತೀರ್ಮಾನ ಕೈಗೊಂಡರೆ, ಅದ್ಯಾವುದೋ ಡಿಸಿಎಂ ಅಂತೆ, ಹೂ ಈಸ್ ಡಿ.ಕೆ. ಶಿವಕುಮಾರ್ ಅಂದಿದ್ದರು. ಹಾಗಂದವರು ಈಗ ಏಕೆ ಶಾಸಕರನ್ನು ಕರೆಯುತ್ತಿದ್ದಾರೆ ಎಂದು ಡಿಸಿಎಂ ಅಶ್ವತ್ಥ್ ನಾರಾಯಣ್ ಗೆ ಟಾಂಗ್ ಕೊಟ್ಟರು.
ಕೊರೊನಾ ಸಂಬಂಧ ವಿಶೇಷ ಅಧಿವೇಶನ ಕರೆಯಿರಿ ಎಂದು ಈಗಾಗಲೇ ಸರ್ಕಾರವನ್ನು ಒತ್ತಾಯ ಮಾಡಿದ್ದೇವೆ. ಆದರೆ ಸರ್ಕಾರ ಯಾವುದನ್ನೂ ಗಣನೆಗೆ ತೆಗೆದುಕೊಳ್ಳುತ್ತಿಲ್ಲ ಎಂದು ಡಿಕೆಶಿ ಕಿಡಿಕಾರಿದರು.