ಬೆಂಗಳೂರು: ಮಂಡ್ಯದಲ್ಲಿ ವ್ಯಕ್ತಿಯಿಂದ ಅತ್ಯಾಚಾರಕ್ಕೆ ಒಳಗಾಗಿ ಹತ್ಯೆಗೀಡಾದ ಬಾಲಕಿ ಕುಟುಂಬಕ್ಕೆ ಸಾಂತ್ವನ ತಿಳಿಸಿರುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕಾಮುಕನಿಗೆ ಕಠಿಣ ಶಿಕ್ಷೆ ಆಗಲಿ ಎಂದು ಒತ್ತಾಯಿಸಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಮಂಡ್ಯ ಜಿಲ್ಲೆಯ ಮಳವಳ್ಳಿಯಲ್ಲಿ ಪುಟ್ಟ ಬಾಲಕಿ ಅತ್ಯಾಚಾರ ಮಾಡಿ ಕೊಲೆ ಮಾಡಿರುವುದು ಅತ್ಯಂತ ಹೇಯ ಕೃತ್ಯ. ಇಂತಹ ಸ್ಥಿತಿ ಮತ್ತಾವ ಕಂದಮ್ಮನಿಗೂ ಬಾರದಿರಲಿ. ಬಾಲಕಿಯ ಕುಟುಂಬದ ಜೊತೆ ಮಾತನಾಡಿ, ಸಾಂತ್ವನ ಹೇಳುವ ಪ್ರಯತ್ನ ಮಾಡಿದ್ದೇನೆ. ಪೊಲೀಸರು ಯಾವುದೇ ಒತ್ತಡಕ್ಕೆ ಈಡಾಗದೆ, ಪ್ರಕರಣದ ನಿಷ್ಪಕ್ಷಪಾತ ತನಿಖೆ ನಡೆಸಿ ಆರೋಪಿಗೆ ಗರಿಷ್ಠ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಮಂಡ್ಯದ ಮಳವಳ್ಳಿಯಲ್ಲಿ ಮಂಗಳವಾರ ಟ್ಯೂಷನ್ಗೆ ಬಂದ 10 ವರ್ಷದ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಮಾಡಿ, ಕೊಲೆ ಮಾಡಿ ಮೈಸೂರು ರಸ್ತೆಯ ಮಯೂರ ಬೇಕರಿ ಹಿಂಭಾಗದ ನಿರ್ಮಾಣ ಹಂತದ ಮನೆಯ ಕಟ್ಟಡದಲ್ಲಿನ ಸಂಪ್ನಲ್ಲಿ ಎಸೆಯಲಾಗಿತ್ತು. ಟ್ಯೂಷನ್ ಸೆಂಟರ್ನಲ್ಲಿ ಕೆಲಸಕ್ಕಿದ್ದವನೇ ಆರೋಪಿಯಾಗಿದ್ದು, ಪೊಲೀಸರು ಬಂಧಿಸಿ ಕ್ರಮ ಕೈಗೊಂಡಿದ್ದಾರೆ.
ಬಾಲಕಿ ಮೇಲೆ ಅತ್ಯಾಚಾರ, ಹತ್ಯೆ ಖಂಡಿಸಿ ಆಕೆಯ ಶವವಿಟ್ಟು ಕುಟುಂಬಸ್ಥರು ಹಾಗೂ ಸಾರ್ವಜನಿಕರು ಪಟ್ಟಣದ ಅನಂತರಾಮ್ ವೃತ್ತದ ಬಳಿ ಪ್ರತಿಭಟನೆ ನಡೆಸಿದ್ದಾರೆ. ಬಾಲಕಿಯ ಶವವನ್ನು ತೆರೆದ ವಾಹನದಲ್ಲಿಟ್ಟು, ಪಟ್ಟಣದಲ್ಲಿ ಮೆರವಣಿಗೆ ನಡೆಸಿದ ಸಾರ್ವಜನಿಕರು ಮಳವಳ್ಳಿಪುರ ಪೊಲೀಸ್ ಠಾಣೆಯ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನೆಯಲ್ಲಿ ಸಾವಿರಾರು ಜನ ಭಾಗವಹಿಸಿ, ಕೂಡಲೇ ಆರೋಪಿಗೆ ಗಲ್ಲು ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದರು. ಈ ಘಟನೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲೂ ಕೂಡ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಇದನ್ನೂ ಓದಿ: ಮಳವಳ್ಳಿಯಲ್ಲಿ ಬಾಲಕಿ ಮೇಲೆ ಅತ್ಯಾಚಾರ, ಹತ್ಯೆ ಪ್ರಕರಣ: ಶವವಿಟ್ಟು ಪ್ರತಿಭಟನೆ