ಬೆಂಗಳೂರು: ನಗರದ ಅರಮನೆ ಮೈದಾನದಲ್ಲಿ ತಮ್ಮ ಅಭಿಮಾನಿಗಳು ಆಯೋಜಿಸಿದ್ದ ಹುಟ್ಟುಹಬ್ಬ ಸಮಾರಂಭಕ್ಕೆ ಆಗಮಿಸುವಂತೆ ಸಿಎಂ ಯಡಿಯೂರಪ್ಪ ಮಾಡಿದ ದೂರವಾಣಿ ಕರೆಗೆ ಬೆಲೆಕೊಟ್ಟು ಮಾಜಿ ಸಿಎಂ ಸಿದ್ದರಾಮಯ್ಯ ಆಗಮಿಸಿದ್ದರು.
ಇಂದು 78 ನೇ ವಸಂತಕ್ಕೆ ಕಾಲಿಟ್ಟ ಸಿಎಂ ಬಿ ಎಸ್ ಯಡಿಯೂರಪ್ಪ ರಾಜ್ಯದ ಎಲ್ಲಾ ಪಕ್ಷದ ಹಿರಿಯ ನಾಯಕರಿಗೂ ಸಮಾರಂಭಕ್ಕೆ ಆಗಮಿಸುವಂತೆ ದೂರವಾಣಿ ಮೂಲಕ ಕರೆ ಮಾಡಿ ಆಹ್ವಾನಿಸಿದ್ದರು. ಆದ್ರೆ ಜೆಡಿಎಸ್ ಪಕ್ಷದ ಬಹುತೇಕ ನಾಯಕರು ಅನುಪಸ್ಥಿತರಾಗಿದ್ದರೆ ಕಾಂಗ್ರೆಸ್ನ ಕೆಲ ನಾಯಕರು ಕಾರ್ಯಕ್ರಮದಿಂದ ದೂರವೇ ಉಳಿದಿದ್ದರು. ಆದರೆ ರಾಜಕೀಯ ಹಾಗೂ ವೈಯಕ್ತಿಕ ಕಾರ್ಯಕ್ರಮ ಪ್ರತ್ಯೇಕ ಎನ್ನುವುದನ್ನು ಕಾರ್ಯಕ್ರಮಕ್ಕೆ ಆಗಮಿಸುವ ಮೂಲಕ ಹಾಗೂ ತಮ್ಮ ಭಾಷಣದ ಮೂಲಕವೂ ಸಿದ್ದರಾಮಯ್ಯ ವ್ಯಕ್ತಪಡಿಸಿದರು.
ಹುಟ್ಟುಹಬ್ಬದ ದಿನವಾದ ಇಂದು ಸಿದ್ದರಾಮಯ್ಯಗೆ ಸ್ವತಃ ಯಡಿಯೂರಪ್ಪ ಬೆಳಗ್ಗೆ ಕರೆ ಮಾಡಿ ಸಮಾರಂಭಕ್ಕೆ ಆಗಮಿಸುವಂತೆ ಕೋರಿದ್ದರು. ಸಿಎಂ ಕರೆ ಸ್ವೀಕರಿಸಿದ ತಕ್ಷಣ ಮನೆಗೆ ಬರ್ತಿದ್ದೀನಿ ಎಂದು ಸಿದ್ದರಾಮಯ್ಯ ಹೇಳಿದ್ದರು.
ಸಿದ್ದರಾಮಯ್ಯ ನೀಡಿದ ಭರವಸೆಯಂತೆ ಸಂಜೆ ಸಮಾರಂಭದಲ್ಲಿ ಪಾಲ್ಗೊಂಡು ಸುದೀರ್ಘ ಭಾಷಣ ಕೂಡ ಮಾಡಿ ಬಿಎಸ್ವೈ ಹುಟ್ಟುಹಬ್ಬಕ್ಕೆ ಶುಭ ಕೋರಿದ್ದಾರೆ. ಈ ಸಂದರ್ಭ ಯಾವುದೇ ರೀತಿ ರಾಜಕೀಯ ವೈಷಮ್ಯವನ್ನು ವ್ಯಕ್ತಪಡಿಸದೆ ಸಮಾರಂಭದಲ್ಲಿ ಪಾಲ್ಗೊಂಡ ಸಿದ್ದರಾಮಯ್ಯ ರಾಜ್ಯ ರಾಜಕಾರಣದಲ್ಲಿ ಮತ್ತೊಮ್ಮೆ ಮೇರು ವ್ಯಕ್ತಿತ್ವ ಉಳ್ಳವರು ಎನ್ನುವುದನ್ನು ತೋರಿಸಿಕೊಟ್ಟರು.