ಬೆಂಗಳೂರು: ರಾಷ್ಟ್ರೀಯ ನಾಯಕರನ್ನು ಭೇಟಿ ಮಾಡಿ ಸಮಾಲೋಚಿಸಲು ನಗರದಿಂದ ಪ್ರಯಾಣ ಬೆಳೆಸಿರುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ರಾತ್ರಿ ದೆಹಲಿ ತಲುಪಿದ್ದಾರೆ.
ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಇಂದು ಸಂಜೆ ದೆಹಲಿಗೆ ಪ್ರಯಾಣ ಬೆಳೆಸಿದರು. ರಾತ್ರಿ ಕರ್ನಾಟಕ ಭವನ ತಲುಪಿದ್ದು, ಈ ವೇಳೆ ರಾಜ್ಯದ ಕೆಲ ನಾಯಕರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದರು. ಮಾಜಿ ಸಚಿವರಾದ ಎಂ.ಆರ್. ಸೀತಾರಾಂ, ವಿನಯಕುಮಾರ್ ಸೊರಕೆ, ಎಐಸಿಸಿ ಕಾರ್ಯದರ್ಶಿ ಐವಾನ್ ಡಿಸೋಜಾ ಅವರು ದೆಹಲಿಯ ಕರ್ನಾಟಕ ಭವನದಲ್ಲಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.
ಇನ್ನೊಂದೆಡೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸಹ ಕೆಲ ನಾಯಕರನ್ನು ಭೇಟಿಯಾಗಿ ಚರ್ಚಿಸಿದ್ದು, ನಾಳೆ ಮಧ್ಯಾಹ್ನ ಉಭಯ ನಾಯಕರು ರಾಷ್ಟ್ರೀಯ ನಾಯಕರ ಜೊತೆ ವಿಶೇಷ ಸಭೆ ನಡೆಸಲಿದ್ದಾರೆ. ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಜೊತೆ ರಾಜ್ಯ ನಾಯಕರು ಚರ್ಚೆ ನಡೆಸಲಿದ್ದಾರೆ.
ಪಕ್ಷ ಸಂಘಟನೆ, ಬಲವರ್ಧನೆ ಹಾಗೂ ಮುಂಬರುವ ದಿನಗಳಲ್ಲಿ ಕೆಪಿಸಿಸಿ ವಿವಿಧ ಸಮಿತಿಗಳಿಗೆ ಅಧ್ಯಕ್ಷರು ಪದಾಧಿಕಾರಿಗಳ ನೇಮಕ, ವಿವಿಧ ಜಿಲ್ಲೆಯ ಕಾಂಗ್ರೆಸ್ ಅಧ್ಯಕ್ಷರ ಬದಲಾವಣೆ ಸೇರಿದಂತೆ ಹಲವು ಮಹತ್ವದ ವಿಚಾರಗಳ ಕುರಿತು ಚರ್ಚಿಸಲಿದ್ದಾರೆ. ಅತ್ಯಂತ ಪ್ರಮುಖವಾಗಿ ಮುಂಬರುವ ದಿನಗಳಲ್ಲಿ ಎದುರಾಗುವ ವಿಧಾನಸಭೆ ಉಪ ಚುನಾವಣೆ, ಸ್ಥಳೀಯ ಸಂಸ್ಥೆಗಳ ಹಾಗೂ ಬಿಬಿಎಂಪಿ ಚುನಾವಣೆ ಜೊತೆಗೆ ಮುಂಬರುವ ವಿಧಾನಸಭೆ ಚುನಾವಣೆಗೆ ಪಕ್ಷದ ಸ್ಪರ್ಧೆ ಹಾಗೂ ಗೆಲುವಿನ ವಿಚಾರವಾಗಿ ಚರ್ಚಿಸಲಿದ್ದಾರೆ.
ಮುಂಬರುವ ದಿನಗಳಲ್ಲಿ ಪಕ್ಷವನ್ನ ಒಗ್ಗಟ್ಟಾಗಿ ಮುನ್ನಡೆಸುವ ನಿಟ್ಟಿನಲ್ಲಿ ಸಿದ್ದರಾಮಯ್ಯ ಹಾಗೂ ಡಿಕೆಶಿಗೆ ರಾಷ್ಟ್ರೀಯ ನಾಯಕರು ಒಂದಷ್ಟು ಸಲಹೆ ಸೂಚನೆ ನೀಡಿ ಕಳುಹಿಸುವ ಸಾಧ್ಯತೆ ಇದೆ.
ಇದನ್ನೂ ಓದಿ: ರಾಜ್ಯ ರಾಜಕೀಯದಲ್ಲಿ ಮಹತ್ತರ ಬೆಳವಣಿಗೆ.. ಇಂದು ದಿಲ್ಲಿಗೆ ಹಾರಲಿದ್ದಾರೆ ಸಿದ್ದರಾಮಯ್ಯ, ಡಿಕೆಶಿ