ಬೆಂಗಳೂರು: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ತಾವು ಸ್ಪರ್ಧೆ ಮಾಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡರು ಸ್ಪಷ್ಟಪಡಿಸಿದ್ದಾರೆ. ಪಕ್ಷದ ಕಚೇರಿ ಜೆಪಿ ಭವನದಲ್ಲಿ ಇಂದು ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ನನಗೆ 91 ವರ್ಷ ವಯಸ್ಸು ಆಯ್ತು. ಆ ಪ್ರಶ್ನೆ ಈಗ ಉದ್ಭವಿಸುವುದಿಲ್ಲ. ಲೋಕಸಭೆ ಚುನಾವಣೆಯಲ್ಲಿ ಎಲ್ಲಿ ಅಭ್ಯರ್ಥಿಯನ್ನ ಹಾಕಬೇಕು, ಯಾವಾಗ ಹಾಕಬೇಕು ಎಂದು ಆಮೇಲೆ ತೀರ್ಮಾನ ಮಾಡುತ್ತೇವೆ ಎಂದಿದ್ದಾರೆ.
ಜಿಲ್ಲಾ ಪಂಚಾಯತ್, ತಾಲೂಕ್ ಪಂಚಾಯತ್ ಚುನಾವಣೆ ಹಾಗೂ ಬಿಬಿಎಂಪಿ ಚುನಾವಣಾ ಸಿದ್ಧತೆ ಬಗ್ಗೆ ಜೆಡಿಎಸ್ ಗಮನಹರಿಸಲಿದೆ. ಆನಂತರ ಲೋಕಸಭೆ ಚುನಾವಣೆ ಬರಲಿದ್ದು, ಆಗ ಯಾರು ಸ್ಪರ್ಧೆ ಮಾಡುತ್ತಾರೆ ಎಂಬುದರ ಬಗ್ಗೆ ಪಕ್ಷ ನಿರ್ಧಾರ ಮಾಡುತ್ತದೆ. ಕ್ಷೇತ್ರಗಳಲ್ಲಿ ನಮ್ಮ ಸ್ವಂತ ಶಕ್ತಿ ಮೇಲೆ ಸ್ಪರ್ಧೆ ಮಾಡಬೇಕು ಎಂಬ ಬಗ್ಗೆ ಪಕ್ಷ ತೀರ್ಮಾನ ಮಾಡುತ್ತಿದೆ. ಜೆಡಿಎಸ್ ಸದ್ಯಕ್ಕೆ ಲೋಕಸಭೆ ಚುನಾವಣೆಗಿಂತ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ ಬಿಬಿಎಂಪಿ ಚುನಾವಣೆ ಸಿದ್ಧತೆ ಬಗ್ಗೆ ಆದ್ಯತೆ ನೀಡಲಿದೆ ಎಂದರು.
ಹೆಚ್ಡಿಡಿ ಕಿಡಿ: ರಾಷ್ಟ್ರದಲ್ಲಿ ಬಿಜೆಪಿಯೊಂದಿಗೆ ಪ್ರತ್ಯಕ್ಷವಾಗಿ ಆಗಲಿ ಅಥವಾ ಪರೋಕ್ಷವಾಗಿ ಆಗಲಿ ಕೈಜೋಡಿಸದಿರುವ ಯಾವುದಾದರೂ ಒಂದು ಪಕ್ಷವಿದ್ದರೆ ತೋರಿಸಿ, ಆ ಬಳಿಕ ವಿರೋಧ ಪಕ್ಷಗಳ ಒಗ್ಗಟ್ಟಿನ ಬಗ್ಗೆ ಮಾತನಾಡುವೆ ಎಂದು ಹೇಳಿದರು. ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ವಿರೋಧ ಪಕ್ಷಗಳನ್ನು ಒಗ್ಗೂಡಿಸುವ ಪ್ರಯತ್ನ ಮಾಡುತ್ತಿದ್ದು, ಜೆಡಿಎಸ್ ಬೆಂಬಲ ನೀಡಲಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ದೊಡ್ಡ ಗೌಡರು, ಎಲ್ಲಾ ಪಕ್ಷಗಳು ಬಿಜೆಪಿಯೊಂದಿಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಕೈಜೋಡಿಸಿದ್ದು, ಇದರಲ್ಲಿ ಕಾಂಗ್ರೆಸ್ನ ಕೆಲವು ನಾಯಕರೂ ಸೇರಿದ್ದಾರೆ ಎಂದು ಆರೋಪಿಸಿದರು.
ನಾನು ಮನೆಯಲ್ಲಿ ಕೂರುವುದಿಲ್ಲ: ಎರಡು ಬಾರಿ ಕಾಂಗ್ರೆಸ್ ಜೊತೆ ಲೋಕಸಭೆ ಚುನಾವಣೆಯಲ್ಲಿ ಹೊಂದಾಣಿಕೆ ಮಾಡಿಕೊಂಡಿದ್ದೆವು. ಜಿಲ್ಲಾ ಹಾಗೂ ತಾಲ್ಲೂಕು ಮತ್ತು ಬಿಬಿಎಂಪಿ ಚುನಾವಣೆಗೆ ಸಿದ್ಧತೆ ಮಾಡುವುದರ ಜೊತೆಗೆ ಪಕ್ಷ ಸಂಘಟನೆಗೆ ಆದ್ಯತೆ ನೀಡಲಾಗುವುದು. ನಾನು ಕೂಡ ಮನೆಯಲ್ಲಿ ಕೂರುವುದಿಲ್ಲ ರಾಜ್ಯ ಪ್ರವಾಸ ಕೈಗೊಂಡು ಪಕ್ಷಕ್ಕೆ ಶಕ್ತಿ ತುಂಬುವ ಕೆಲಸ ಮಾಡುತ್ತೇನೆ. ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಹಲವು ಕಡೆ ಪ್ರಚಾರ ಕೈಗೊಂಡಿದ್ದೆ. ಈಗಲೂ ಅದೇ ಉತ್ಸಾಹದಲ್ಲಿ ಪಕ್ಷ ಸಂಘಟನೆಗೆ ಶ್ರಮಿಸುವುದಾಗಿ ಹೇಳಿದರು.
ಚುನಾವಣೆಗೆ ಮುನ್ನ ಎಲ್ಲ ವರ್ಗದವರನ್ನೂ ಗಮನದಲ್ಲಿಟ್ಟುಕೊಂಡು ಸಮಸ್ತವಾದ ಪ್ರಣಾಳಿಕೆಯನ್ನು ನೀಡಿದ್ದೆವು. ಕುಡಿಯುವ ನೀರಿನ ವ್ಯವಸ್ಥೆ, ಎಲ್ಲ ಹಳ್ಳಿಗಳಿಗೂ ಸಿಗಬೇಕೆಂದು ಯೋಜನೆ ರೂಪಿಸಿದ್ದೆವು. ಜಿಲ್ಲಾ, ತಾಲ್ಲೂಕು ಹಾಗೂ ಗ್ರಾಮ ಪಂಚಾಯಿತಿಯ ಮಟ್ಟದಲ್ಲಿ ನಮಗೆ ಸಾಕಷ್ಟು ಶಕ್ತಿ ಕೊಟ್ಟಿದ್ರು. ಕಾಂಗ್ರೆಸ್‌ನವರ ಯೋಜನೆ ಯಾವ ರೀತಿ ಜಾರಿಗೊಳಿಸುತ್ತಾರೆ ಎಂದು ನಾನು ಮಾತನಾಡುವುದಿಲ್ಲ. ಆದರೆ, ಮುಂದೆ ಬಿಬಿಎಂಪಿ ಚುನಾವಣೆ ಬರುತ್ತಿದೆ. ಅದರಲ್ಲಿ ಯಾವ ರೀತಿಯ ಹೋರಾಟ ಮಾಡಬೇಕು. ನಮ್ಮ ಶಾಸಕರು, ಸೋತ ಅಭ್ಯರ್ಥಿಗಳು, ಮತ್ತು ನಾನು ಸುಮ್ಮನೆ ಕುಳಿತುಗೊಳ್ಳುವುದಿಲ್ಲ. ನನಗೆ 91 ವರ್ಷವಾಗಿದೆ. ಆದರೂ ನಾನು ಪಕ್ಷದ ಕೆಲಸ ಮಾಡುತ್ತೇನೆ. ಪಕ್ಷ ಕಟ್ಟಲು ನೂರಾರು ಯುವಕರು ಮುಂದಾಗಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ನಮಗೆ ಹಿನ್ನಡೆಯಾಗಿದ್ದರು ಜನರು ನಮ್ಮೊಂದಿಗೆ ಇದ್ದಾರೆ. ಯುವಕರು ತುಂಬಾ ಉತ್ಸಾಹದಲ್ಲಿದ್ದು, ತಂಡ ತಂಡವಾಗಿ ನಮ್ಮ ಮನೆಗೆ ಬಂದು ಪಕ್ಷ ಬೆಳೆಸುತ್ತೇವೆ ಎಂದು ಉತ್ಸಾಹ ತೋರುತ್ತಿದ್ದಾರೆ. ಹೀಗಾಗಿ ಚುನಾವಣೆಯಲ್ಲಿ ಸೋತವರು ಹಾಗೂ ಗೆದ್ದವರು ಯಾರು ಕೂಡ ನಿರಾಶರಾಗಬಾರದು. ಮುಂಬರುವ ಲೋಕಸಭೆಗೆ ತಯಾರು ಮಾಡಬೇಕಾಗುತ್ತದೆ ಎಂದು ಗೌಡರು ಧೈರ್ಯ ತುಂಬಿದರು.
ಬಿಬಿಎಂಪಿ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ, ಎಲ್ಲ ಮುಖಂಡರನ್ನು ಸೇರಿಸಿಕೊಂಡು ಹೋಗ್ತೇವೆ. ನಾವು ಎರಡು ಬಾರಿ ಸೆಕ್ಯುಲರ್ ಪಾರ್ಟಿಗೆ ಬೆಂಬಲ ಕೊಟ್ವಿ, ಅದು ಎಷ್ಟರ ಮಟ್ಟಿಗೆ ಫಲಪ್ರದವಾಗಿದೆ ಎಂಬ ಚರ್ಚೆ ಈಗ ಮಾಡುವುದಿಲ್ಲ. ಮುಂದೆ ಬಿಬಿಎಂಪಿ ಚುನಾವಣೆಗೆ ಹೇಗೆ ತಯಾರಿ ಆಗಬೇಕೆಂದು ಚರ್ಚೆ ಮಾಡುತ್ತೇವೆ. ಎಲ್ಲಿ ಅಭ್ಯರ್ಥಿಯನ್ನು ಹಾಕದೆ ಇದ್ದರೂ, ಆ ಪ್ರದೇಶದಲ್ಲೂ ನಮ್ಮವರು ಸಮರ್ಥರಿದ್ದಾರೆ ಎನ್ನುವುದನ್ನು ಗುರುತಿಸುತ್ತೇವೆ ಎಂದರು.
ಹೊಸ ತಂಡ ರಚನೆ: ಒಂದು ಹೊಸ ತಂಡವನ್ನು ರಚಿಸಲಾಗುವುದು. ಅದರಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ, ಮಾಜಿ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ಸೇರಿದಂತೆ 9 ರಿಂದ 15 ಮಂದಿ ಇರುತ್ತಾರೆ. ದಿನಕ್ಕೆ ಎರಡು ಲೋಕಸಭೆ ಕ್ಷೇತ್ರ ಭೇಟಿ ಮಾಡಿ ಪರಿಶೀಲನೆ ಮಾಡುತ್ತೇವೆ. ಶಾಸಕಾಂಗ ಪಕ್ಷದ ನಾಯಕರು ಎಲ್ಲರನ್ನೂ ತಿಳಿಸುತ್ತಾರೆ. ನಾನೂ ಕೂಡ ಎಲ್ಲೆಲ್ಲಿ ಪ್ರವಾಸ ಮಾಡಬೇಕೆಂದು ಪಕ್ಷ ಹೇಳುತ್ತದೆಯೋ ಅಲ್ಲೆಲ್ಲ ಪ್ರಚಾರ ಮಾಡುತ್ತೇನೆ. ನಮ್ಮ ಕಾರ್ಯಕರ್ತರೇ ನಮಗೆ ಶಕ್ತಿ. ಪ್ರಾದೇಶಿಕ ಪಕ್ಷದ ಶಕ್ತಿಯನ್ನು ಉಳಿಸಿಕೊಂಡು ಬೆಳೆಸಿಕೊಂಡು ಹೋಗಬೇಕು ಎಂದು ಹೆಚ್ ಡಿ ದೇವೇಗೌಡ ಸಲಹೆ ನೀಡಿದರು.
ಇದನ್ನೂ ಓದಿ: ತುಟಿಗೆ ತುಪ್ಪ ಸವರುವವರನ್ನು ನೋಡಿದ್ದೆ. ಹಣೆಗೆ ತುಪ್ಪ ಸವರುವವರನ್ನು ನೋಡಿರಲಿಲ್ಲ: ಕುಮಾರಸ್ವಾಮಿ ಟೀಕೆ