ಬೆಂಗಳೂರು: ಸಾರ್ವತ್ರಿಕ ಚುನಾವಣೆ ವೇಳೆ ತುರ್ತು ಪರಿಸ್ಥಿತಿ, ಬರ ನಿರ್ವಹಣೆಯಂತಹ ಕೆಲಸ ಹೊರತುಪಡಿಸಿ ಇತರೆ ಅಭಿವೃದ್ಧಿ ಕಾರ್ಯಗಳು, ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಅವಕಾಶವಿಲ್ಲ ಹಾಗಾಗಿ ಯಾವುದೇ ಕಾಮಗಾರಿ ಕೈಗೆತ್ತಿಕೊಳ್ಳದಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಚುನಾವಣಾ ಆಯೋಗಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಪತ್ರ ಬರೆದಿದ್ದಾರೆ.
ದೇಶದ ಹಲವೆಡೆ ಇನ್ನೂ ಲೋಕಸಭಾ ಚುನಾವಣೆ ನಡೆಯುತ್ತಿದೆ. ಆದರೆ, ರಾಜ್ಯದಲ್ಲಿ ಚುನಾವಣೆ ಮುಗಿದಿದೆ ಎಂದು ನೀತಿ ಸಂಹಿತೆ ಸಡಿಲಿಕೆ ಮಾಡಿ ಮೂಲಭೂತ ಸೌಲಭ್ಯಗಳಿಗೆ ಸಂಬಂಧಿಸಿದ ಅಭಿವೃದ್ಧಿ ಕಾಮಗಾರಿಗಳು, ಯೋಜನೆಗಳು, ಇತರೆ ಕಾಮಗಾರಿಗಳ ಟೆಂಡರ್ ಪ್ರಕ್ರಿಯೆಗೆ ಚುನಾವಣಾ ಆಯೋಗ ಅನುಮತಿ ನೀಡಿದೆ ಎಂದು ರಾಜ್ಯ ಸರ್ಕಾರ ಹೇಳಿಕೆ ನೀಡಿದೆ. ಒಂದು ಸಾರಿ ಸಾರ್ವತ್ರಿಕ ಚುನಾವಣೆ ಘೋಷಣೆಯಾದರೆ ಅದರ ನೀತಿ ಸಂಹಿತೆ ಫಲಿತಾಂಶದವರೆಗೂ ಇರುತ್ತದೆ. ಬರ, ಪ್ರಕೃತಿ ವಿಕೋಪ ಸೇರಿದಂತೆ ತುರ್ತು ಪರಿಸ್ಥಿತಿಯಲ್ಲಿ ಮಾತ್ರ ರಾಜ್ಯ ಸರ್ಕಾರ ಕಾಮಗಾರಿಗಳನ್ನ ಕೈಗೊಳ್ಳಬಹುದು ಅಷ್ಟೇ ಆದರೂ ಚುನಾವಣಾ ಆಯೋಗ ಅನುಮತಿ ನೀಡಿದೆ ಎನ್ನಲಾಗಿದೆ ಈ ಬಗ್ಗೆ ಚುನಾವಣಾ ಆಯೋಗ ಸ್ಪಷ್ಟನೆ ನೀಡಬೇಕು ಎಂದು ಚುನಾವಣಾ ಆಯೋಗಕ್ಕೆ ಯಡಿಯೂರಪ್ಪ ಪತ್ರ ಬರೆದಿದ್ದಾರೆ.
ಒಂದು ವೇಳೆ ನೀತಿ ಸಂಹಿತೆ ಸಡಿಲಿಸಿ ಯೋಜನೆಗಳಿಗೆ ಅನುಮತಿ ನೀಡಿದ್ದರೆ ಕೂಡಲೇ ಚುನಾವಣಾ ಆಯೋಗ ಅಭಿವೃದ್ಧಿ ಕಾಮಗಾರಿಗಳನ್ನ ಕೈಗೊಳ್ಳಲು ನೀಡಿರುವ ಅನುಮತಿಯನ್ನ ವಾಪಸ್ ಪಡೆಯಬೇಕು. ಸಾರ್ವತ್ರಿಕ ಚುನಾವಣಾ ಪ್ರಕ್ರಿಯೆ ಮುಗಿಯವ ತನಕ ನೀತಿ ಸಂಹಿತೆ ಜಾರಿಯಲ್ಲಿ ಇರಬೇಕು ನೀತಿ ಸಂಹಿತೆ ಬಗ್ಗೆ ರಾಜ್ಯ ಸರ್ಕಾರಕ್ಕೆ ಕಟ್ಟುನಿಟ್ಟಿನ ಸೂಚನೆ ಕೊಡಬೇಕು ಎಂದು ಪತ್ರದ ಮೂಲಕ ಯಡಿಯೂರಪ್ಪ ಮನವಿ ಮಾಡಿದ್ದಾರೆ.