ಬೆಂಗಳೂರು: ಸಿನಿಮೀಯ ಶೈಲಿಯಲ್ಲಿ ಬಂದ ನಾಲ್ವರು ದರೋಡೆಕೋರರ ತಂಡ ಹಾಡಹಗಲೇ ಜ್ಯುವೆಲ್ಲರಿ ಅಂಗಡಿ ಮಾಲೀಕನ ಮೇಲೆ ಗುಂಡು ಹಾರಿಸಿ ದರೋಡೆ ಮಾಡಿರುವ ಘಟನೆ ಬ್ಯಾಡರಹಳ್ಳಿ ಠಾಣಾ ವ್ಯಾಪ್ತಿಯ ಪೈಪ್ ಲೈನ್ ರಸ್ತೆಯಲ್ಲಿ ನಡೆದಿದೆ. ಇಂದು ಬೆಳಗ್ಗೆ 10:45ರ ಸುಮಾರಿಗೆ ಘಟನೆ ನಡೆದಿದ್ದು, ಶಾಪ್ ಮಾಲೀಕ ಮನೋಜ್ ಲೋಹರ್ (30) ಮೇಲೆ ಗುಂಡು ಹಾರಿಸಿರುವ ದುಷ್ಕರ್ಮಿಗಳು 1 ಕೆ.ಜಿ ತೂಕದ ಚಿನ್ನಾಭರಣದೊಂದಿಗೆ ಪರಾರಿಯಾಗಿದ್ದಾರೆ.
ಬೆಳಗ್ಗೆ 2 ದ್ವಿಚಕ್ರ ವಾಹನಗಳಲ್ಲಿ ಮಾರಕಾಸ್ತ್ರಗಳ ಸಹಿತ ಬ್ಯಾಡರಹಳ್ಳಿ ವ್ಯಾಪ್ತಿಯ ವಿನಾಯಕ ಜ್ಯುವೆಲ್ಲರಿ ಶಾಪ್ ಬಳಿ ಬಂದ ಆರೋಪಿಗಳು, ಮಾಲೀಕ ಮನೋಜ್ ನನ್ನು ಬೆದರಿಸಿ ದರೋಡೆಗೆ ಯತ್ನಿಸಿದ್ದಾರೆ. ಮನೋಜ್ ತಡೆಯುವ ಪ್ರಯತ್ನ ಮಾಡಿದಾಗ ಆತನ ತೊಡೆಗೆ ಗುಂಡು ಹಾರಿಸಿ, ಶಾಪ್ನಲ್ಲಿದ್ದ ಒಂದು ಕೆ.ಜಿಯಷ್ಟು ಚಿನ್ನಾಭರಣ ದೋಚಿದ್ದಾರೆ.
ಬಂಗಾರ ದೋಚಿದ ಬಳಿಕ ಪರಾರಿಯಾಗಲು ಯತ್ನಿಸಿದ್ದ ಆರೋಪಿಗಳನ್ನು ಮನೋಜ್ ತಡೆಯಲು ಯತ್ನಿಸಿದ್ದಾರೆ. ಆಗ ಎಚ್ಚೆತ್ತ ದುಷ್ಕರ್ಮಿಗಳು ತಾವು ತಂದಿದ್ದ ಒಂದು ಬೈಕ್ ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾರೆ. ಸ್ಥಳಕ್ಕೆ ಬ್ಯಾಡರಹಳ್ಳಿ ಠಾಣಾ ಪೊಲೀಸರು ಭೇಟಿ ನೀಡಿದ್ದಾರೆ. ಗಾಯಾಳು ಮನೋಜ್ ನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಾಲೀಕನಿಗೆ ಸುಳ್ಳು ಹೇಳಿ ಚಿನ್ನ ದೋಚಿದ್ದ ಸೇಲ್ಸ್‌ಮ್ಯಾನ್: ಚಿನ್ನ ಕೊಂಡೊಯ್ಯುತ್ತಿದ್ದ ಬ್ಯಾಗ್ ಅನ್ನು ಯಾರೋ ಅಪರಿಚಿತರು ಕದ್ದೊಯ್ದರು ಎಂದು ಜ್ಯುವೆಲ್ಲರಿ ಮಾಲೀಕನಿಗೆ ಸುಳ್ಳು ಹೇಳಿ ಒಂದು ಕೆಜಿ ಚಿನ್ನ ದೋಚಿದ್ದ ಸೇಲ್ಸ್‌ಮ್ಯಾನ್ ಅನ್ನು ಇತ್ತೀಚೆಗೆ ಪೊಲೀಸರು ಬಂಧಿಸಿದ್ದರು.
ಹಲಸೂರು ಗೇಟ್ ಠಾಣಾ ವ್ಯಾಪ್ತಿಯಲ್ಲಿ ಅಭಿಷೇಕ್ ಅನ್ನುವವರು ಚಿನ್ನದ ಮಳಿಗೆಯಲ್ಲಿ ರಾಜಸ್ತಾನ ಮೂಲದ ಲಾಲ್ ಸಿಂಗ್ ಎಂಬಾತ ಏಳು ತಿಂಗಳುಗಳಿಂದ ಕೆಲಸ ಮಾಡುತ್ತಿದ್ದನು. ಸೇಲ್ಸ್ ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದ ಈತ ಮಾಲೀಕರ ನಂಬಿಕೆ ಗಳಿಸಿದ್ದನು. ಈ ನಂಬಿಕೆಯಿಂದಲೇ ಮಾಲೀಕ ಅಭಿಷೇಕ್ ಅವರು ಲಾಲ್ ಸಿಂಗ್ ಕೈಯಲ್ಲಿ ಆಂಧ್ರಪ್ರದೇಶದ ನಲ್ಲೂರಿನಲ್ಲಿರುವ ಎರಡು ಜ್ಯುವೆಲ್ಲರಿ ಶಾಪ್ ಮಾಲೀಕರಿಗೆ ಕೊಟ್ಟು ಬರುವಂತೆ 1.262 ಕೆಜಿ ತೂಕದ ಚಿನ್ನಾಭರಣವನ್ನು ಕೊಟ್ಟಿದ್ದರು.
ಚಿನ್ನ ತೆಗೆದುಕೊಂಡವನೇ ಬೆಂಗಳೂರಿನಲ್ಲಿರುವ ತನ್ನ ಸಹಚರರಿಗೆ ವಿಷಯ ತಿಳಿಸಿ ಚಿನ್ನ ದೋಚುವ ಪ್ಲ್ಯಾನ್ ಮಾಡಿದ್ದನು. ಮಾಲೀಕನಿಗೆ ಪೋನ್ ಮಾಡಿ, ನೆಲ್ಲೂರಿನ ಕಾಳಹಸ್ತಿ ಬಳಿ ಯಾರೋ ಅಪರಿಚಿತರು ಗನ್ ತೋರಿಸಿ, ಹಲ್ಲೆ ಮಾಡಿ ಚಿನ್ನ ಕದ್ದೊಯ್ದರು ಎಂದು ಹೇಳಿ, ನಂತರ ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದನು. ಆದರೆ ಮಾಲೀಕ ಅಭಿಷೇಕ್ ಲಾಲ್ ಸಿಂಗ್ ಫೋನ್ ಸ್ವಿಚ್ ಆಫ್ ಬರುತ್ತಿರುವುದು ಕಂಡು, ತಾವೇ ಕಾಳಹಸ್ತಿಗೆ ತೆರಳಿ ಲಾಲ್ ಸಿಂಗ್ನನ್ನು ಪತ್ತೆ ಹಚ್ಚಿ ಬೆಂಗಳೂರಿಗೆ ಕರೆತಂದಿದ್ದರು. ನಂತರ ಪೊಲೀಸರಿಗೆ ದೂರು ನೀಡಿದ್ದರು. ಅನುಮಾನಗೊಂಡು ಲಾಲ್ ಸಿಂಗ್ನಮ್ಮು ಪೊಲೀಸರು ವಿಚಾರಣೆಗೊಳಪಡಿಸಿದಾಗ, ನಿಜ ಒಪ್ಪಿಕೊಂಡಿದ್ದನು. ಆರೋಪಿ ಲಾಲ್ ಸಿಂಗ್ ಹಾಗೂ ಆತನ ಸಹಚರನನ್ನು ಬಂದಿಸಿರುವ ಪೊಲೀಸರು, ಆತನಿಂದ 1.262 ಕೆಜಿ ತೂಕದ ಚಿನ್ನವನ್ನು ವಂಶಪಡಿಸಿಕೊಂಡಿದ್ದರು.
ಇದನ್ನೂ ಓದಿ: ಬೆಂಗಳೂರು: ಅಂಗಡಿ ಮಾಲೀಕನಿಗೆ ಸುಳ್ಳು ಹೇಳಿ 1 ಕೆ.ಜಿಗೂ ಹೆಚ್ಚು ಚಿನ್ನ ದೋಚಿದ್ದ ಸೇಲ್ಸ್‌ಮ್ಯಾನ್ ಸೆರೆ