ಬೆಂಗಳೂರು: ಚಿತ್ರದುರ್ಗದ ಮುರುಘಾಮಠದ ಶಿವಮೂರ್ತಿ ಮುರುಘರಾಜೇಂದ್ರ ಶರಣರು, ಶಾಖಾ ಮಠ ಹಾಗೂ ವಿವಿಧ ಸಮುದಾಯದ ಸ್ವಾಮೀಜಿಗಳು ಇಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿ ಮಾಡಿದರು.
ಸಿಎಂ ಭೇಟಿ ನಂತರ ಮಾತನಾಡಿದ ಮುರುಘಾಮಠದ ಶ್ರೀಗಳು, ಚಿತ್ರದುರ್ಗ ಅಭಿವೃದ್ಧಿ ವಂಚಿತ ಜಿಲ್ಲೆಯಾಗಿದೆ. ಸಾಕಷ್ಟು ವರ್ಷಗಳಿಂದ ಅಭಿವೃದ್ಧಿ ಕುಂಠಿತಗೊಂಡಿದೆ. ಹಾಗಾಗಿ ಈ ಬಾರಿಯ ರಾಜ್ಯ ಬಜೆಟ್ ನಲ್ಲಿ ಚಿತ್ರದುರ್ಗಕ್ಕೆ ವಿಶೇಷ ಪ್ಯಾಕೇಜ್ ಅನ್ನು ಘೋಷಿಸಬೇಕು ಎಂದು ಮುಖ್ಯಮಂತ್ರಿಗೆ ಮನವಿ ಮಾಡಿರುವುದಾಗಿ ತಿಳಿಸಿದರು.
900 ವರ್ಷಗಳ ಹಿಂದೆ ವಚನ ಚಳಚಳಿ ಆರಂಭಗೊಂಡಿತ್ತು. ಸಾಮಾಜಿಕ ನ್ಯಾಯದ ಪರವಾಗಿ ಬಸವಾದಿ ಶರಣರು ಇಂತಹ ಚಳವಳಿ ಆರಂಭಿಸಿದ್ದರು. ಅಂದಿನ ದಿನಮಾನಗಳಲ್ಲಿ 700 ಅಮರ ಗಣಂಗಳನ್ನು ಅವರು ಪೋಣಿಸಿದ್ದರು. ಅದನ್ನು 21 ನೇ ಶತಮಾನದಲ್ಲಿ ಮತ್ತೊಮ್ಮೆ ಸಾಕಾರಗೊಳಿಸಬೇಕು, ಸಾಕ್ಷೀಕರಿಸಬೇಕು ಎನ್ನುವ ಉದ್ದೇಶದಿಂದ ಅಸಂಖ್ಯ ಪ್ರಮತಾಗಣಮೇಳವನ್ನು ಎಲ್ಲಾ ಸಮುದಾಯದ ಸ್ವಾಮೀಜಿಗಳು ಬಸವ ಸಂಘಟನೆಗಳು ಸೇರಿಕೊಂಡು ಫೆಬ್ರವರಿ 16 ರಂದು ಚಿತ್ರದುರ್ಗದ ನಂದಿ ಮೈದಾನದಲ್ಲಿ ಸಂಘಟನೆ ಮಾಡುತ್ತಿದ್ದೇವೆ. ಈ ಕಾರ್ಯಕ್ರಮಕ್ಕೆ ಆಗಮಿಸುವಂತೆ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಆಹ್ವಾನಿಸಿದ್ದೇವೆ ಎಂದು ಮುರುಘ ಶರಣರು ತಿಳಿಸಿದರು.