ಬೆಂಗಳೂರು: ಕಳೆದ ನಾಲ್ಕು ವರ್ಷದಿಂದ ಆಚರಿಸಿಕೊಂಡು ಬರುತ್ತಿರುವ ಟಿಪ್ಪು ಜಯಂತಿಯನ್ನು ಬಿಜೆಪಿ ಸರ್ಕಾರ ರದ್ದು ಮಾಡಿರುವುದು ಖಂಡನೀಯ. ಇದು ಸಂವಿಧಾನ ವಿರೋಧಿ ನೀತಿ ಎಂದು ಜೆಡಿಎಸ್ ಶಾಸಕ ಶಿವಲಿಂಗೇಗೌಡ ಹೇಳಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಶಿವಲಿಂಗೇಗೌಡ, ಟಿಪ್ಪು ಜಯಂತಿ ರದ್ದು ಮಾಡಿರುವುದು ಸಂವಿಧಾನ ಬಾಹಿರ. ಕೇವಲ ರಾಜಕಾರಣ ಇಚ್ಚಾಶಕ್ತಿಯಿಂದ ಮಾಡಿದ ಕುತಂತ್ರ ಇದಾಗಿದೆ. ಅಂದು ಮಹಾತ್ಮ ಗಾಂಧೀಜಿ ರಾಷ್ಟ್ರವನ್ನು ಜಾತ್ಯಾತೀತ ರಾಷ್ಟ್ರ ಎಂದು ಕರೆದು ಹೋಗಿದ್ದಾರೆ. ಈ ದೇಶದಲ್ಲಿ ಯಾರೆಲ್ಲ ವಾಸಿಸುತ್ತಿದ್ದಾರೋ ಅವರೆಲ್ಲ ಸರ್ವಸಮಾನರು ಎಂದು ಉಲ್ಲೇಖಿಸಿದ್ದಾರೆ ಎಂದರು.
ಜಾತ್ಯಾತೀತ ತತ್ವದ ಆಧಾರದ ಮೇಲೆ ಸ್ವತಂತ್ರ ಭಾರತದ ಇತಿಹಾಸವನ್ನು ನಾವು ಬೆಳೆಸಿಕೊಂಡು ಬಂದಿದ್ದೀವಿ. ಹಿಂದೆ ಸಿದ್ದರಾಮಯ್ಯನವರ ಸರ್ಕಾರದಲ್ಲಿ 34 ಜಯಂತಿಗಳನ್ನ ಆಚರಣೆ ಮಾಡುವಂತಹ ಕಾನೂನನ್ನು ಜಾರಿಗೆ ತಂದಿದ್ದರು. ಅದರಲ್ಲಿ ಇವತ್ತು ಒಂದು ಜನಾಂಗದ ಹಿತಾಸಕ್ತಿಯನ್ನು ಕಾಯುವ ಟಿಪ್ಪು ಜಯಂತಿಯನ್ನು ರದ್ದು ಮಾಡಿದ್ದಾರೆ. ಇದು ಸಂವಿಧಾನ ಬಾಹಿರ. ಜೆಡಿಎಸ್ ಇದನ್ನು ಖಂಡಿಸಲಿದೆ ಎಂದರು.