ಬೆಂಗಳೂರು: ಶಿರೂರು ಮಠದ ಆಸ್ತಿ ವಿವಾದ ಹಾಗೂ ಹಣಕಾಸು ಅವ್ಯವಹಾರಕ್ಕೆ ಸಂಬಂಧಿಸಿದಂತೆ ಸೋದೆ ಮಠದ ಪೀಠಾಧಿಪತಿ ವಿಶ್ವವಲ್ಲಭತೀರ್ಥ ಸ್ವಾಮೀಜಿ ವಿರುದ್ಧ ದಾಖಲಿಸಲಾಗಿದ್ದ ಕ್ರಿಮಿನಲ್ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
ಈ ಕುರಿತು ಶಿರೂರು ಮಠದ ಭಕ್ತ ಸಮಿತಿಯ ಕಾರ್ಯದರ್ಶಿ ಪಿ. ಲತವ್ಯ ಆಚಾರ್ಯ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಎಸ್. ವಿಶ್ವಜಿತ್ ಶೆಟ್ಟಿ ಅವರಿದ್ದ ಪೀಠ, ಪ್ರಾಥಮಿಕ ವಾದ ಆಲಿಸಿದ ಬಳಿಕ ಅರ್ಜಿ ವಜಾಗೊಳಿಸಿ ಆದೇಶಿಸಿತು.
ಮಠದ ಆಸ್ತಿ ದುರ್ಬಳಕೆ ಸೇರಿದಂತೆ ಸಾಕಷ್ಟು ಆರ್ಥಿಕ ಅವ್ಯವಹಾರ ನಡೆದಿದೆ ಎಂದು ಅರ್ಜಿದಾರರು ಆರೋಪಿಸಿದ್ದರು. ಇದೇ ವಿಚಾರವಾಗಿ ದಾಖಲಾಗಿದ್ದ ದೂರನ್ನು ಉಡುಪಿಯ ಜೆಎಂಎಫ್ ನ್ಯಾಯಾಲಯ ರದ್ದುಪಡಿಸಿತ್ತು, ಆ ಬಳಿಕ 2021ರ ಮಾರ್ಚ್ 23ರಂದು ಹೈಕೋರ್ಟ್‍ನಲ್ಲಿ ಕ್ರಿಮಿನಲ್ ಅರ್ಜಿ ದಾಖಲಿಸಲಾಗಿತ್ತು.
ವಿಶ್ವವಲ್ಲಭತೀರ್ಥ ಸ್ವಾಮೀಜಿ ಹಾಗೂ ಸ್ವಾಮೀಜಿಯವರ ಪರ ಕಾನೂನು ಅಧಿಕಾರ ಹೊಂದಿದ್ದ ರತ್ನಕುಮಾರ್ ಅವರನ್ನು ಕ್ರಿಮಿನಲ್ ಅರ್ಜಿಯಲ್ಲಿ ಪ್ರತಿವಾದಿಯಾಗಿ ಮಾಡಲಾಗಿತ್ತು.