ಬೆಂಗಳೂರು: ತುಮಕೂರು ಜಿಲ್ಲೆಯ ಶಿರಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಸಂಬಂಧ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಜೊತೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಇಂದು ದೂರವಾಣಿ ಮೂಲಕ ಚರ್ಚೆ ನಡೆಸಿದ್ದಾರೆ.
ಶಿರಾ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಶಾಸಕ ಸತ್ಯನಾರಾಯಣ ನಿಧನದಿಂದ ತೆರವಾಗಿರುವ ಕ್ಷೇತ್ರಕ್ಕೆ ಯಾವುದೇ ವೇಳೆ ಉಪ ಚುನಾವಣೆ ಘೋಷಣೆಯಾಗುವ ಸಾಧ್ಯತೆಯಿದೆ. ಕ್ಷೇತ್ರವನ್ನು ಗೆಲ್ಲಲು ಬಿಜೆಪಿ ಪ್ರಯತ್ನಿಸುತ್ತಿದ್ದರೆ, ತಾನು ಕಳೆದುಕೊಂಡ ಕ್ಷೇತ್ರವನ್ನು ಮರಳಿ ಪಡೆಯಲು ಕಾಂಗ್ರೆಸ್ ಶ್ರಮಿಸುತ್ತಿದೆ. ಅನುಕಂಪದ ಅಲೆಯಲ್ಲಿ ಶತಾಯಗತಾಯ ಈ ಕ್ಷೇತ್ರವನ್ನು ಮರಳಿ ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಜೆಡಿಎಸ್ ಲೆಕ್ಕಾಚಾರ ನಡೆಸುತ್ತಿದೆ.
ಕೆಲ ನಾಯಕರು ಜಾತಿವಾರು ಲೆಕ್ಕಾಚಾರ ಹಾಕುತ್ತಿದ್ದರೆ, ಮತ್ತೆ ಕೆಲವರು ಇಂದಿನ ಪ್ರಭಾವದ ಮೇಲೆ ಈ ಚುನಾವಣೆ ಎದುರಿಸುವ ತವಕದಲ್ಲಿದ್ದಾರೆ. ಒಟ್ಟಾರೆ ಮೂರು ಪಕ್ಷಗಳಿಗೂ ಉಪಚುನಾವಣೆ ಪ್ರತಿಷ್ಠೆಯಾಗಿ ಪರಿಣಮಿಸಿದೆ. ಗೆಲ್ಲುವ ನಿಟ್ಟಿನಲ್ಲಿ ಸಾಕಷ್ಟು ಪ್ರಯತ್ನವನ್ನು ಈ ಮೂರೂ ಪಕ್ಷಗಳು ಮಾಡುತ್ತಿವೆ.
ಸದ್ಯ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿರುವ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಕೂಡ ಈ ಚುನಾವಣೆಯನ್ನು ಪ್ರತಿಷ್ಠೆಯಾಗಿ ಪರಿಗಣಿಸಿದ್ದಾರೆ. ತಾವು ಅಧಿಕಾರ ವಹಿಸಿಕೊಂಡ ನಂತರ ಬರಲಿರುವ ಮೊದಲ ಚುನಾವಣೆ ಇದಾಗಿದ್ದು, ಗೆಲ್ಲುವ ಮೂಲಕ ತಮ್ಮ ಅಧಿಕಾರದ ಶುಭಾರಂಭ ಮಾಡುವ ತವಕದಲ್ಲಿದ್ದಾರೆ. ಇದೇ ನಿಟ್ಟಿನಲ್ಲಿ ಮಹತ್ವದ ಚರ್ಚೆ ನಡೆಸುವ ಸಲುವಾಗಿ ಇಂದು ಸಿದ್ದರಾಮಯ್ಯ ಅವರಿಗೆ ಕರೆ ಮಾಡಿದ ಡಿಕೆಶಿ ಸುದೀರ್ಘ ಚರ್ಚೆ ನಡೆಸಿದ್ದಾರೆ.
ಸುಮಾರು 20 ನಿಮಿಷಕ್ಕೂ ಹೆಚ್ಚು ಕಾಲ ಉಭಯ ನಾಯಕರು ಶಿರಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಬಗ್ಗೆ ಚರ್ಚೆ ಮಾಡಿದ್ದಾರೆ. ತುಮಕೂರು ಜಿಲ್ಲೆಯ ಕಾಂಗ್ರೆಸ್ನ ಪ್ರಮುಖ ನಾಯಕ ಕೆ ಎನ್ ರಾಜಣ್ಣ ಬಂಡಾಯ ಮುನ್ಸೂಚನೆ ಕೊಡ್ತಿರುವುದರಿಂದ ನಮ್ಮ ಸಂಭವನೀಯ ಅಭ್ಯರ್ಥಿ ಹಾಗೂ ಮಾಜಿ ಸಚಿವ ಟಿ ಬಿ ಜಯಚಂದ್ರ ಅವರನ್ನು ಕರೆಸಿ ಸಮಸ್ಯೆ ಬಗೆಹರಿಸುವ ಬಗ್ಗೆ ಚರ್ಚೆ ನಡೆಸಲು ದೂರವಾಣಿ ಸಂಭಾಷಣೆಯಲ್ಲಿ ರಾಜ್ಯ ನಾಯಕರು ನಿರ್ಧರಿಸಿದ್ದಾರೆ. ಈಗಾಗಲೇ ಉಪಚುನಾವಣೆಗೆ ಬಿಜೆಪಿ ಪ್ರಚಾರ ಶುರು ಮಾಡಿದೆ. ದೇವಾಲಯಗಳಿಗೆ ಹಣ ಬಿಡುಗಡೆ ಮಾಡಿ ಚುನಾವಣಾ ರಾಜಕೀಯವನ್ನು ಆರಂಭಿಸಿದೆ ಎಂಬ ವಿಚಾರವನ್ನು ಉಭಯ ನಾಯಕರು ಚರ್ಚಿಸಿದ್ದಾರೆ. ಮುಂದಿನ ವಾರ ಬೆಂಗಳೂರಲ್ಲಿ ಸಭೆ ಕರೆಯುವ ಬಗ್ಗೆ ನಿರ್ಧಾರ ಕೈಗೊಂಡಿದ್ದಾರೆ ಎಂಬ ಮಾಹಿತಿ ಇದೆ.