ಬೆಂಗಳೂರು: ನಗರದಲ್ಲಿ ಕುರಿಗಾಹಿಗಳ ಧರಣಿ ನಡೆದಿದ್ದು, ಪ್ರತಿಭಟನೆಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸಾಥ್ ನೀಡಿದರು. ಮೌರ್ಯ ಸರ್ಕಲ್ನಲ್ಲಿ ನಡೆದ ಕುರಿಗಾಹಿಗಳ ಪ್ರತಿಭಟನೆಯಲ್ಲಿ ರಾಜ್ಯ ಕುರಿ, ಮೇಕೆ ಸಾಕಣೆದಾರರು ಭಾಗವಹಿಸಿದ್ದರು.
ಶಿರಾ ತಾಲೂಕಿನ ಕುಂಟನಹಟ್ಟಿ ಗ್ರಾಮದ ಚಿತ್ತಣ್ಣ ಎಂಬುವವರಿಗೆ ಸೇರಿದ ಸುಮಾರು 200 ಕುರಿಗಳು ವಿಷಾಹಾರ ಸೇವಿಸಿ ಸಾವನ್ನಪ್ಪಿದೆ. ಈ ಸಂಬಂಧ ಪರಿಹಾರ ನೀಡುವಂತೆ ವಿಪಕ್ಷ ನಾಯಕ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ.
ಸಿಎಂಗೆ ಬರೆದಿರುವ ಪತ್ರದಲ್ಲಿ "ಇಂತಹ ದುರಂತಗಳಿಂದ ಪಶುಪಾಲಕರಿಗೆ ತೊಂದರೆ ಆಗುತ್ತದೆ. ದುರಂತ ನಡೆದಾಗ ಪರಿಹಾರ ನೀಡಲು ಅನುಗ್ರಹ ಯೋಜನೆ ನಾನು ಮಾಡಿದ್ದೆ. ನಿಮ್ಮ ಸರ್ಕಾರ ಈ ಯೋಜನೆಯನ್ನು ನಿಲ್ಲಿಸಿದೆ. ಈ ಯೋಜನೆ ಜಾರಿ ಮಾಡಿ 50 ಕೋಟಿ ಮೀಸಲಿಟ್ಟರೆ ಸಾಕು. ಅದರಿಂದ ಬಡ ಪಶುಪಾಲಕರಿಗೆ ನೆರವಾಗುತ್ತದೆ" ಎಂದು ಸಿದ್ದರಾಮಯ್ಯ ಬರೆದಿದ್ದಾರೆ.
ಬೆಂಗಳೂರಿನಲ್ಲಿ ಕುರಿಗಾಹಿಗಳ ಪ್ರತಿಭಟನೆ ಹಿನ್ನೆಲೆ ಮೌರ್ಯ ಸರ್ಕಲ್ನಿಂದ ಫ್ರೀಡಂ ಪಾರ್ಕ್ವರೆಗೆ ಜಾಥಾ ನಡೆಯಿತು. ಪ್ರತಿಭಟನೆ ಜಾಥಾದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಭಾರಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಒಬ್ಬ ಡಿಸಿಪಿ, ಇಬ್ಬರು ಎಸಿಪಿ, ಐದು ಜನ ಪೋಲಿಸ್ ಇನ್ಸ್ಪೆಕ್ಟರ್, ಹತ್ತು ಸಬ್ ಇನ್ಸ್ಪೆಕ್ಟರ್, 150 ಪೊಲೀಸ್ ಕಾನ್ಸ್ಟೆಬಲ್ ಮತ್ತು 30 ಡಬ್ಲ್ಯೂಪಿಸಿ ನಿಯೋಜನೆಗೊಂಡಿದ್ದರು.