ಬೆಂಗಳೂರು : ಎಲ್ಲರನ್ನೂ ಒಳಗೊಳ್ಳುವುದೇ ಹಿಂದೂ. ಹಿಂದುತ್ವ ಬದುಕಿನ ಕ್ರಮ. ಅದು ಯಾರೊಬ್ಬರಿಗೂ ಸೇರುವುದಿಲ್ಲ. ಸ್ವಾಮಿ ವಿವೇಕಾನಂದರ ಹಿಂದುತ್ವವನ್ನು ನಾವು ಒಪ್ಪುತ್ತೇವೆ. ಆದರೆ ಇಂದಿನವರ ಹಿಂದುತ್ವವನ್ನು ಒಪ್ಪಲ್ಲ. ನನ್ನ ಕೃತಿಯಲ್ಲಿಯೂ ಇದನ್ನೇ ಹೇಳಿದ್ದೇನೆ ಎಂದು ಬಿಜೆಪಿ ವಿರುದ್ಧ ಕೇಂದ್ರದ ಮಾಜಿ ಸಚಿವ ಶಶಿ ತರೂರ್ ಪರೋಕ್ಷ ವಾಗ್ದಾಳಿ ನಡೆಸಿದರು.
ಶಶಿ ತರೂರ್ ಅವರ ಇಂಗ್ಲಿಷ್ ಕೃತಿ 'ವೈ ಐ ಆ್ಯಮ್ ಎ ಹಿಂದೂ' ಕೃತಿಯ ಕನ್ನಡ ಅವತರಣಿಕೆ ಪ್ರೊ.ಕೆ. ಈ ರಾಧಾಕೃಷ್ಣ ಅನುವಾದಿತ 'ನಾನು ಯಾಕೆ ಹಿಂದೂ' ಕೃತಿ ಬಿಡುಗಡೆ ಮಾಡಲಾಯಿತು. ನಗರದ ಲ್ಯಾವೆಲ್ಲ ರಸ್ತೆಯಲ್ಲಿರುವ ರೋಟರಿ ಕ್ಲಬ್ನಲ್ಲಿಂದು ನಡೆದ ಸರಳ ಸಮಾರಂಭದಲ್ಲಿ ಶಶಿ ತರೂರ್, ನಿವೃತ್ತ ಲೋಕಾಯುಕ್ತ ನ್ಯಾ.ಸಂತೋಷ್ ಹೆಗ್ಡೆ, ಸಚಿವ ಹೆಚ್.ಕೆ.ಪಾಟೀಲ್, ಜ್ಞಾನಪೀಠ ಪುರಸ್ಕೃತ ಸಾಹಿತಿ ಚಂದ್ರಶೇಖರ ಕಂಬಾರ, ನಾಡೋಜ ಹಂಪ ನಾಗರಾಜಯ್ಯ, ಕಮಲಾ ಹಂಪನಾ ಕೃತಿ ಬಿಡುಗಡೆಗೊಳಿಸಿದರು.
ನಂತರ ಮಾತನಾಡಿದ ಶಶಿ ತರೂರ್, ನನ್ನ ಸತ್ಯವನ್ನು ನೀವು ಗೌರವಿಸಿ. ನಿಮ್ಮ ಸತ್ಯವನ್ನು ನಾವು ಗೌರವಿಸುತ್ತೇವೆ ಎನ್ನುವುದೇ ಹಿಂದುತ್ವ. ಹಿಂದೂ ಧರ್ಮದಲ್ಲಿ ದೇವರು ನಿರ್ಗುಣ ತತ್ವದ ನಿರಾಕಾರಣಿ, ಅವನಿಗೆ ಹುಟ್ಟು, ಸಾವು, ಆಕಾರ ಇಲ್ಲ. ಆತ ನಿರ್ಮೋಹಿ, ಆಸೆ, ಆಕಾಂಕ್ಷೆ, ಮೋಕ್ಷ ಯಾವುದೂ ಇಲ್ಲ. ಆತ ಎಲ್ಲೆಡೆಯೂ ಆವರಿಸಿರುವ ಸರ್ವಾಂತರ್ಯಾಮಿ. ಈ ವಿಚಾರ ಬರೀ ಹಿಂದೂ ಧರ್ಮದಲ್ಲಿ ಮಾತ್ರ ಅಲ್ಲ, ಇಸ್ಲಾಂ ಧರ್ಮದಲ್ಲಿಯೂ ಇದೆ. ಹಾಗಾದರೆ ಹಿಂದೂ ಯಾರು? ಹಿಂದುತ್ವ ಎಲ್ಲಿದೆ ಎಂದು ಅವರು ಪ್ರಶ್ನಿಸಿದರು.
ಕೆಲವರು ಗರ್ವದಿಂದ ನಾನೊಬ್ಬ ಹಿಂದೂ ಎನ್ನುತ್ತಾರೆ. ಹಿಂದೂ ಎಂದರೆ ವಿದೇಶಿಗರಿಗೆ ಗೊತ್ತಾಗುತ್ತಾ? ಅವರೆಲ್ಲಾ ನಮ್ಮನ್ನು ಇಂಡಿಯನ್ಸ್ ಎಂದು ಕರೆಯುತ್ತಾರೆ. ಹಾಗಾದರೆ, ಇಂಡಿಯನ್ಸ್ ಯಾರು?. ಸಿಂಧೂಯಿಂದ ಇಂಡಸ್ ವ್ಯಾಲಿ ಆಗಿ ಇಂಡಿಯನ್ ಆಗಿದ್ದೇವೆ. ಆದರೆ ಆಡಳಿತ ಪಕ್ಷದ ನಾಯಕರು ಇಂಡಿಯಾ ಪದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ಇಂಡಿಯಾ ಪದ ಬದಲು ಭಾರತ್ ಪದ ಬಳಕೆಗೆ ಮುಂದಾಗಿರುವ ಬಿಜೆಪಿ ವಿರುದ್ಧ ಪರೋಕ್ಷ ಟೀಕೆ ಮಾಡಿದರು.
400 ಪುಟಗಳಷ್ಟು 'ನಾನು ಯಾಕೆ ಹಿಂದೂ' ಎಂದು ಬರೆದಿದ್ದೇನೆ. ಧಾರ್ಮಿಕ ಆಚರಣೆಯ ಕಟ್ಟುಪಾಡುಗಳ ಪಾಲನೆಯ ಕಡ್ಡಾಯತೆ ಇಲ್ಲಿಲ್ಲ. ವೇದ, ಉಪನಿಷತ್ತು ಗೀತೆಯ ಸಾರದಲ್ಲಿ ಏನಿದೆಯೋ, ಹಿಂದೂ ಧರ್ಮದ ಬಗ್ಗೆ ನಾನೇನು ಅರ್ಥ ಮಾಡಿಕೊಂಡಿದ್ದೇನೋ ಅದನ್ನು ಕೃತಿಯಲ್ಲಿ ಬರೆದಿದ್ದೇನೆ. ಜಾತ್ಯತೀತತೆ ಎಂದರೆ ಧರ್ಮ ನಿರಪೇಕ್ಷಿತವಾದದು ಎಂದು ಪ್ರತಿಪಾದಿಸಿದರು.
ಕೃತಿ ಬಿಡುಗಡೆ ಮಾಡಿ ಮಾತನಾಡಿದ ನ್ಯಾ.ಸಂತೋಷ್ ಹೆಗ್ಡೆ, ಕೃತಿ ಓದಿದ ನಂತರ ಹಿಂದೂ ಧರ್ಮದ ಬಗ್ಗೆ ಬಹಳ ಮಾಹಿತಿ ಸಿಕ್ಕಿತು. ಶಶಿ ತರೂರ್ ಯಾಕೆ ಹಿಂದೂ ಧರ್ಮದಲ್ಲಿದ್ದೇನೆ ಎನ್ನುವುದಕ್ಕೆ ವಿವರಣೆ ನೀಡಿದ್ದಾರೆ. ಧರ್ಮದ ನ್ಯೂನತೆಯ ಬಗೆಗೂ ಚರ್ಚೆ ಮಾಡಿದ್ದಾರೆ. ಬಹಳಷ್ಟು ವಿಚಾರದಲ್ಲಿ ಸರಿ ಎನ್ನುವುದು ನನ್ನ ಅಭಿಪ್ರಾಯ. ಧರ್ಮದ ವಿಚಾರದ ಚರ್ಚೆ ಮಾಡುವವರು ಓದುವ ಕೃತಿ ಇದು. ಉತ್ತಮ ವಿಚಾರಗಳನ್ನು ಪ್ರಸ್ತಾಪಿಸಿದ್ದಾರೆ ಎಂದರು.
ಸಚಿವ ಹೆಚ್.ಕೆ.ಪಾಟೀಲ್ ಮಾತನಾಡಿ, ನಾನು ಹಿಂದೂ ಹೌದೋ ಅಲ್ಲವೋ ಮುಖ್ಯ ಅಲ್ಲ, ಹಿಂದೂ ಧರ್ಮದ ಚರ್ಚೆ, ವಾದ-ವಿವಾದ ಮಾಡಿ, ದೊಡ್ಡ ಸಮಸ್ಯೆ ಸೃಷ್ಟಿ ಮಾಡುವುದು ಇಂದಿನ ಅವಶ್ಯಕತೆ ಅಲ್ಲ. ಗಾಂಧಿ, ವಿವೇಕಾನಂದರ ಕಲ್ಪನೆ ಏನಿತ್ತು ಅದು ಮುಖ್ಯ. ಗಣೇಶ, ಎಲ್ಲಮ್ಮ ಸೇರಿ ಎಲ್ಲ ದೇವರುಗಳು ಇರಬಹುದು. ಆದರೆ ನೂಕಾಚೆ ನೂರು ದೇವರುಗಳ ಎನ್ನುವ ಕುವೆಂಪು ಆಶಯದಂತೆ ಎಲ್ಲ ಜೀವಿಗಳಲ್ಲಿ ದೇವನಿದ್ದಾನೆ ಎನ್ನುವ ಕಲ್ಪನೆ, ಗಾಂಧಿಯ ಶ್ರದ್ಧೆ ಅಳವಡಿಸಿಕೊಂಡು ಬದುಕು ನಡೆಸಿದರೆ ಶ್ರೇಷ್ಠ ಬದುಕು ನಡೆಸಬಹುದು. ಅದರ ಅಗತ್ಯತೆ ಇಂದು ಇದೆ. ಇಂತಹ ವಿಚಾರ ಚರ್ಚೆ ಮಾಡಲು ಈ ಸಂದರ್ಭ ಸರಿಯಾದದ್ದಾಗಿದೆ. ಧರ್ಮ, ಜಾತಿ ಹೆಸರಲ್ಲಿ ದ್ವೇಷ ಬಿತ್ತುವ ಕೆಲಸ ನಡೆದಿದೆ. ಅದನ್ನು ನಿವಾರಣೆ ನೀಡುವ ವೇದಿಕೆ ಇದಾಗಲಿ ಎಂದರು.
ಕೃತಿಯ ಅನುವಾದಕ ಪ್ರೊ.ರಾಧಾಕೃಷ್ಣ ಮಾತನಾಡಿ, ಶಶಿ ತರೂರ್ ತಮ್ಮ ಕೃತಿಯಲ್ಲಿ ಭಾರತೀಯ ಧರ್ಮದ ಪರಂಪರೆಯನ್ನು ಎತ್ತಿ ಹಿಡಿದಿದ್ದಾರೆ. ಬಸವಾದಿ ಶರಣರು, ಶಂಕರಾಚಾರ್ಯರ ಕುರಿತು ಹಿಂದೂ ಧರ್ಮಕ್ಕೆ ಏನಾಗಿದೆ ಎಂದು ಹೇಳುತ್ತಾ ಯಾವುದೇ ಪೂರ್ವಾಗ್ರಹ ಪೀಡಿತ ದೃಷ್ಟಿಕೋನ ಇಲ್ಲದೆ ಲೆಕ್ಕಪರಿಶೋಧಕರ ರೀತಿ ಅಚ್ಚುಕಟ್ಟಾಗಿ ಪ್ರಸ್ತಾಪಿಸಿದ್ದಾರೆ. ಮೊಘಲ್ ಸಂಸ್ಕೃತಿ, ಬ್ರಿಟಿಷ್ ಆಳ್ವಿಕೆಯಲ್ಲಿ ಏನಾಯಿತು ಎನ್ನುವುದು ಸೇರಿದಂತೆ ದ್ವೈತ, ಅದ್ವೈತದ ಕುರಿತು ಕೃತಿಯಲ್ಲಿ ಸ್ಪಷ್ಟವಾಗಿ ಮಾಹಿತಿ ನೀಡಿದ್ದಾರೆ. ದೆಹಲಿ ವಿಮಾನ ನಿಲ್ದಾಣದಲ್ಲಿ ಪುಸ್ತಕ ನೋಡಿದೆ, ಓದಿದೆ. ಆಸಕ್ತಿ ಹೆಚ್ಚಾದ ಹಿನ್ನಲೆಯಲ್ಲಿ ಕನ್ನಡಕ್ಕೆ ಅನುವಾದ ಮಾಡಿದೆ. ಭಾರತೀಯ ಸಂಸ್ಕೃತಿಯ ವಿದ್ಯಾರ್ಥಿ ರೀತಿ ಕೃತಿಯನ್ನು ಅನುವಾದ ಮಾಡಿದ್ದೇನೆ ಎಂದು ಹೇಳಿದರು.
ಜ್ಞಾನಪೀಠ ಪುರಸ್ಕೃತ ಸಾಹಿತಿ ಚಂದ್ರಶೇಖರ ಕಂಬಾರ ಮಾತನಾಡಿ, ನಮ್ಮ ದೇಶದ ಅತ್ಯುತ್ತಮ ಚಿಂತಕ ಶಶಿ ತರೂರ್. ಅವರು ಮೂಲಭೂತವಾದ ಚಿಂತನೆ ನಡೆಸುತ್ತಾರೆ. ಸಂಬಂಧಗಳ ಬಗ್ಗೆ ಸೂಕ್ಷ್ಮವಾಗಿ ಆಲೋಚನೆ ಮಾಡುತ್ತಾರೆ. ದೇಶದ ಬಗೆಗೂ ಅದ್ಭುತವಾಗಿ ಹೇಳಿದ್ದಾರೆ. ತರೂರ್ ಪ್ರತಿಭೆ ಮತ್ತೊಬ್ಬರಲ್ಲಿ ಸಿಗಲ್ಲ. ಅವರಿಗೆ ಶುಭ ಕೋರುತ್ತೇನೆ ಎಂದರು.
ಇದನ್ನೂ ಓದಿ: 'ಎಂಪವರಿಂಗ್ ಇಂಡಿಯಾ' ಪುಸ್ತಕ ಲೋಕಾರ್ಪಣೆಗೊಳಿಸಿದ ಇನ್ಫೋಸಿಸ್ ಸಂಸ್ಥಾಪಕ ನಾರಾಯಣಮೂರ್ತಿ