ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ಉಪಚುನಾವಣೆಗೆ ಬಿಜೆಪಿ 14 ಕ್ಷೇತ್ರಗಳಲ್ಲಿ ಅನರ್ಹ ಶಾಸಕರಿಗೆ ಟಿಕೆಟ್ ನೀಡಿದೆ. ಆದರೆ ಶಿವಾಜಿನಗರ ಕ್ಷೇತ್ರದಲ್ಲಿ ಅನರ್ಹ ಶಾಸಕ ರೋಷನ್ ಬೇಗ್ ಅವರಿಗೆ ಟಿಕೆಟ್ ಕೊಟ್ಟಿಲ್ಲ. ಶಿವಾಜಿನಗರದಲ್ಲಿ ಅವರು ಸೋಲುತ್ತಾರೆ ಎಂಬ ಭಯದಿಂದ ಟಿಕೆಟ್ ಕೊಟ್ಟಿಲ್ಲ ಎಂದು ಜೆಡಿಎಸ್ ವಿಧಾನಪರಿಷತ್ ಸದಸ್ಯ ಶರವಣ ಹೇಳಿದ್ದಾರೆ.
ಶಿವಾಜಿನಗರ ಕ್ಷೇತ್ರದಲ್ಲಿ ಜೆಡಿಎಸ್ನಿಂದ ಉಪಚುನಾವಣೆಗೆ ಸ್ಪರ್ಧಿಸಿರುವ ತನ್ವೀರ್ ಅಹ್ಮದ್ ಉಲ್ಲಾ ಅವರ ಪರ ವಾರ್ಡ್ ನಂಬರ್ 110 ಸಂಪಂಗಿ ರಾಮನಗರದಲ್ಲಿ ಶರವಣ ಮತಯಾಚನೆ ಮಾಡಿದರು. ಈಟಿವಿ ಭಾರತ ಜೊತೆ ಮಾತನಾಡಿ, ಶಿವಾಜಿನಗರದಲ್ಲಿ ರೋಶನ್ ಬೇಗ್ ಸೋಲುತ್ತಾರೆ ಎಂಬ ಭೀತಿಯಿಂದ ಬಿಜೆಪಿ ಅವರಿಗೆ ಟಿಕೆಟ್ ನೀಡಿಲ್ಲ. ಶಿವಾಜಿನಗರದ ಮತದಾರರು ಬದಲಾವಣೆಯನ್ನು ಬಯಸಿದ್ದಾರೆ. ಜೆಡಿಎಸ್ ಅಭ್ಯರ್ಥಿ ತನ್ವೀರ್ ಅಹ್ಮದ್ ಉಲ್ಲಾ ವಿದ್ಯಾವಂತರು. ಖಂಡಿತವಾಗಿಯೂ ಅವರು ಗೆದ್ದೇ ಗೆಲ್ಲುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಅಲ್ಲದೆ ಇಂದು ಶಿವಾಜಿನಗರಕ್ಕೆ ಜೆಡಿಎಸ್ ಅಭ್ಯರ್ಥಿ ಪರ ಮತ ಯಾಚನೆಗೆ ನಮ್ಮ ಹಿರಿಯ ನಾಯಕರಾದ ದೇವೇಗೌಡರು ಹಾಗೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಬರಲಿದ್ದಾರೆ ಎಂದು ತಿಳಿಸಿದರು.
ನಂತರ ಮಾತನಾಡಿದ ತನ್ವೀರ್ ಅಹ್ಮದ್, ಶಿವಾಜಿನಗರದಲ್ಲಿ ನನಗೆ ದೂರದಲ್ಲಿ ಕಾಣುತ್ತಿರುವ ಎದುರಾಳಿ ಎಂದರೆ ಬಿಜೆಪಿ ಮಾತ್ರ. ನಾನು ಶಿವಾಜಿನಗರದ ಇಂಚಿಂಚು ಬಲ್ಲೆ. ಬಿಜೆಪಿ ಅಭ್ಯರ್ಥಿ ಶರವಣ ಕ್ರಿಮಿನಲ್ ಹಿನ್ನೆಲೆಯುಳ್ಳ ವ್ಯಕ್ತಿ . ಖಂಡಿತ ಶಿವಾಜಿನಗರದ ಮತದಾರರು ಇದನ್ನೆಲ್ಲಾ ಗಮನಿಸಿ ಈ ಬಾರಿ ನನ್ನ ಕೈ ಹಿಡಿದೇ ಹಿಡಿಯುತ್ತಾರೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.