ಬೆಂಗಳೂರು : ಲೋಕೋಪಯೋಗಿ ಇಲಾಖೆಯ ಸಮಗ್ರ ಅಭಿವೃದ್ಧಿಯ ಕುರಿತು ಇಂದು ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ 'ಶಾಲಾ ಸಂಪರ್ಕ ಸೇತು ಯೋಜನೆ'ಯ ಅನುಷ್ಠಾನವನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರಲು, ನಿರ್ಮಾಣಗೊಂಡ ಸೇತುವೆಯ ಬಳಿಯಿಂದಲೇ ಸ್ಥಳೀಯ ಅಧಿಕಾರಿಗಳು ಮುಖ್ಯಮಂತ್ರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿ ಕಾಮಗಾರಿ ಪ್ರಗತಿ ಬಗ್ಗೆ ವಿವರಿಸಿದರು.
ವಿಧಾನಸೌಧದಲ್ಲಿ ಶಾಲಾ ಸಂಪರ್ಕ ಸೇತು ಯೋಜನೆಯ ಪ್ರಗತಿ ಪರಿಶೀಲನಾ ಸಭೆ ನಡೆಯಿತು. ಈ ಯೋಜನೆ ಬಹುತೇಕ ಪೂರ್ಣಗೊಂಡಿದ್ದು, ಉಳಿದ ಕಾಮಗಾರಿಗಳನ್ನು 2-3 ತಿಂಗಳಲ್ಲಿ ಪೂರ್ಣಗೊಳಿಸುವಂತೆ ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಸೂಚಿಸಿದರು. ಮಲೆನಾಡ ಶಾಲೆಯೊಂದರಲ್ಲಿ ಶಾಲಾ ವಿದ್ಯಾರ್ಥಿಯೊಬ್ಬ ಕಾಲುಸಂಕ ದಾಟುವ ಸಂದರ್ಭದಲ್ಲಿ ಅಸುನೀಗಿದ್ದ. ಈ ಹಿನ್ನೆಲೆಯಲ್ಲಿ ಸರ್ಕಾರ 'ಶಾಲಾ ಸಂಪರ್ಕ ಸೇತು ಯೋಜನೆ' ಜಾರಿಗೆ ತಂದಿತ್ತು. ನದಿ, ಹಳ್ಳ,ತೊರೆಯನ್ನು ದಾಟಲು ಅನುಕೂಲವಾಗುವಂತೆ ನಿರ್ಮಿಸಲಾಗಿದ್ದ ಕಾಲುಸಂಕ ಸೇತುವೆಗಳನ್ನು ಬದಲಾಯಿಸಿ ಶಾಶ್ವತವಾದ ಕಿರುಸೇತುವೆಗಳನ್ನು ನಿರ್ಮಿಸಲು ಆಯವ್ಯಯದಲ್ಲಿ ಅನುದಾನ ಮೀಸಲಿಡಲಾಗಿತ್ತು.
'ನಮ್ಮ ಶಾಲೆಯಲ್ಲೇ ಗ್ರಾಮ ವಾಸ್ತವ್ಯ ಮಾಡಿ'
ತೀರ್ಥಹಳ್ಳಿಯ ತಮ್ಮ ಶಾಲೆಗೆ ವಿದ್ಯಾರ್ಥಿಗಳು ದೂರದಿಂದ ಪ್ರಯಾಣಿಸಿ ಬರುವುದರಿಂದ, ಸಾರಿಗೆ ಹಾಗೂ ವಸತಿ ಸೌಲಭ್ಯವನ್ನು ಒದಗಿಸುವಂತೆ ವಿದ್ಯಾರ್ಥಿನಿಯೊಬ್ಬಳು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದಳು. ಇದೇ ವೇಳೆ ಆಕೆ, ತಮ್ಮ ಶಾಲೆಯಲ್ಲೇ ಗ್ರಾಮ ವಾಸ್ತವ್ಯ ಮಾಡುವಂತೆ ಕೋರಿದಳು. ಇದಕ್ಕೆ ಸ್ಪಂದಿಸಿದ ಸಿಎಂ, ಅದೇ ಶಾಲೆಯಲ್ಲಿ ಗ್ರಾಮ ವಾಸ್ತವ್ಯ ಹೂಡುವುದಾಗಿ ವಿದ್ಯಾರ್ಥಿನಿಗೆ ಭರವಸೆ ನೀಡಿದ್ರು.