ಬೆಂಗಳೂರು: ರಾಜ್ಯದಲ್ಲಿ ಶಾಲಾ ಮಕ್ಕಳ ಅಪೌಷ್ಟಿಕತೆ ನಿವಾರಣೆಗಾಗಿ ಕಲ್ಯಾಣ ಕರ್ನಾಟಕದ ಕೊಪ್ಪಳ, ಬೀದರ್, ಯಾದಗಿರಿ, ಕಲಬುರಗಿ, ಬೀದರ್, ಬಳ್ಳಾರಿ, ರಾಯಚೂರು ಸೇರಿದಂತೆ ವಿಜಯಪುರ ಜಿಲ್ಲೆಯಲ್ಲಿ 1 ರಿಂದ 8ನೇ ತರಗತಿವರೆಗೆ ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳು ಅಪೌಷ್ಟಿಕತೆ ಮತ್ತು ರಕ್ತಹೀನತೆಯಿಂದ ಬಳಲುತ್ತಿದ್ದಾರೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ನಡೆಸಿದ ಸಮೀಕ್ಷಾ ವರದಿಯಲ್ಲಿ ತಿಳಿದು ಬಂದಿತ್ತು.
ಈ ಹಿನ್ನೆಲೆಯಲ್ಲಿ ಮಕ್ಕಳಿಗೆ ಅಪೌಷ್ಟಿಕತೆ ನಿವಾರಣೆಗಾಗಿ ಸರ್ಕಾರಿ ಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟದೊಂದಿಗೆ ವಾರದಲ್ಲಿ 3 ದಿನಗಳ ಕಾಲ ಮೊಟ್ಟೆ ಮತ್ತು ಬಾಳೆಹಣ್ಣು ವಿತರಣೆ ಮಾಡುವ ರಾಜ್ಯ ಸರ್ಕಾರದ ಆದೇಶ ಮಾಡಿತ್ತು.
ಆದರೆ, ವಾರದಲ್ಲಿ 3 ದಿನಗಳ ಕಾಲ ಮೊಟ್ಟೆ ಮತ್ತು ಬಾಳೆಹಣ್ಣು ವಿತರಣೆ ಮಾಡುವ ಬಗ್ಗೆ ಕೆಲವು ಮಠದ ಸ್ವಾಮೀಜಿಗಳು ಧಾರ್ಮಿಕತೆ, ನಂಬಿಕೆಯ ಹೆಸರಿನಲ್ಲಿ ಸರ್ಕಾರದ ಆದೇಶವನ್ನು ವಾಪಸ್ ಪಡೆಯಬೇಕೆಂದು ಮುಖ್ಯಮಂತ್ರಿಗಳ ಮೇಲೆ ಒತ್ತಡ ಹಾಕುತ್ತಿರುವುದು ಸರಿಯಲ್ಲ ಎಂದು ಎಸ್ಎಫ್ ಐ ಆಗ್ರಹಿಸಿದೆ.
ಎಸ್ಎಫ್ಐನಿಂದ ಧರಣಿ
ಮೊಟ್ಟೆ ತಿನ್ನುವುದು ಹಾಗೂ ತಿನ್ನದಿರುವುದನ್ನು ಮಕ್ಕಳ ಆಯ್ಕೆಯಾಗಿದೆ. ಇದನ್ನೇ ತಿನ್ನಬೇಕು, ಇದನ್ನು ತಿನ್ನಬಾರದೆಂದು ಹೇಳುವ ಹಕ್ಕು ಸ್ವಾಮೀಜಿಗಳಿಗಿಲ್ಲ ಎಂದು ಎಸ್ಎಫ್ಐ ಹೇಳಿದೆ. ಸ್ವಾಮೀಜಿಗಳ ಧೋರಣೆ ಖಂಡಿಸಿ ಎಸ್ಎಫ್ಐ ಕಾರ್ಯಕರ್ತರು ಶಿಕ್ಷಣ ಇಲಾಖೆ ಆಯುಕ್ತರ ಕಚೇರಿ ಮುಂದೆ ಧರಣಿ ನಡೆಸಿದರು.
ರಾಜ್ಯದ ಅತೀ ಹಿಂದುಳಿದ ಪ್ರದೇಶವಾದ ಹೈದರಾಬಾದ್ ಕರ್ನಾಟಕದ ಜಿಲ್ಲೆಗಳಲ್ಲಿ ಮಕ್ಕಳ ಅಪೌಷ್ಟಿಕತೆಯು ಯಾದಗಿರಿ- ಶೇ. 74, ಕಲಬುರಗಿ- ಶೇ. 72.4, ಬಳ್ಳಾರಿ- ಶೇ. 72.3, ಕೊಪ್ಪಳ- ಶೇ. 70.7, ರಾಯಚೂರು- ಶೇ. 70.6, ಬೀದರ್- ಶೇ. 69.1, ಬಿಜಾಪುರ- ಶೇ. 68ರಷ್ಟು ಈ ರೀತಿಯಲ್ಲಿದೆ.
ಈ ಸಮಸ್ಯೆ ನಿವಾರಣೆಗೆ ಸ್ವಾಮೀಜಿಗಳು ಶ್ರಮವಹಿಸಲಿ, ಅದನ್ನು ಬಿಟ್ಟು ಜಾತಿ, ಧರ್ಮದ ಹೆಸರಿನಲ್ಲಿ, ಸಮಾಜದಲ್ಲಿ ಅಶಾಂತಿಯನ್ನು ಸೃಷ್ಟಿ ಮಾಡುವ ಕೆಲಸ ಮಾಡಬಾರದು ಎಂದು ಒತ್ತಾಯಿಸಿದರು.
ಹಾಜರಾತಿಯಲ್ಲಿ ಏರಿಕೆ :
ಅಲ್ಲದೇ, ಮೊಟ್ಟೆ ಮತ್ತು ಬಾಳೆಹಣ್ಣು ವಿತರಣೆ ನಂತರ ಇದೇ ತಿಂಗಳಲ್ಲಿ ಶಾಲೆಗಳಲ್ಲಿ ಮಕ್ಕಳ ಹಾಜರಾತಿಯಲ್ಲಿ ಶೇ.10 ರಿಂದ 12ರಷ್ಟು ಏರಿಕೆ ಕಂಡು ಬಂದಿದೆ. 80ರಷ್ಟು ಮಕ್ಕಳು ಮೊಟ್ಟೆ ಬೇಕೆಂದು ಬೇಡಿಕೆ ಇಟ್ಟಿದ್ದಾರೆ.
ಸುಮಾರು 14,44,000 ಮಕ್ಕಳ ಅಪೌಷ್ಟಿಕತೆ ನಿವಾರಣೆಗೆ ಸಹಾಯವಾಗಲಿದೆ. ಶೇ. 20ರಷ್ಟು ಮಕ್ಕಳಿಗೆ ಬಾಳೆಹಣ್ಣು ವಿತರಣೆ ಮಾಡುವುದರಿಂದ ಯಾವುದೇ ವಿದ್ಯಾರ್ಥಿಗಳಿಗೆ ಭೇದ -ಭಾವ ತಾರತಮ್ಯ ಮಾಡುವ ಅವಕಾಶವಿರುವುದಿಲ್ಲ. ಇದನ್ನು ಸ್ವಾಮೀಜಿಗಳು ಅರ್ಥ ಮಾಡಿಕೊಳ್ಳಲಿ ಎಂದು ಒತ್ತಾಯಿಸಿದ್ದಾರೆ.
ಇದನ್ನೂ ಓದಿ : ಶಿಕ್ಷಕರ ತಲೆ ಮೇಲೆ ಬಕೆಟ್ ಹಾಕಿ ಪುಂಡಾಟ: ವಿಕೃತಿ ಮೆರೆದ ವಿದ್ಯಾರ್ಥಿಗಳ ಸ್ಥಿತಿ ಹೇಗಿದೆ ಗೊತ್ತಾ..?