ಬೆಂಗಳೂರು: ಯುವತಿಯರಿಬ್ಬರ ಖಾಸಗಿ ವಿಡಿಯೋಗಳನ್ನು ಚಿತ್ರೀಕರಿಸಿಕೊಂಡು ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ಕ್ಯಾಟರಿಂಗ್ ನಡೆಸುತ್ತಿದ್ದ ವ್ಯಕ್ತಿಯೊಬ್ಬನನ್ನು ಎಚ್ಎಎಲ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ. 22 ವರ್ಷದ ಯುವತಿಯೊಬ್ಬಳು ನೀಡಿದ ದೂರಿನ ಅನ್ವಯ ಕುಂದಾಪುರ ಮೂಲದ ರಘುರಾಮ್ ಎಂಬಾತನನ್ನು ನಗರದ ಪೊಲೀಸರು ಬಂಧಿಸಿದ್ದಾರೆ.
ಆರೋಪಿಯೂ ಬಾಗಮನೆ ಟೆಕ್ ಪಾರ್ಕ್ ಮತ್ತಿತರ ಕಡೆಗಳಿಗೆ ಕ್ಯಾಟರಿಂಗ್ ವ್ಯವಸ್ಥೆ ಒದಗಿಸುತ್ತಿದ್ದರು. ನೊಂದ ಯುವತಿ ಹಾಗೂ ಆಕೆಯ ಸ್ನೇಹಿತೆ ಪಶ್ಚಿಮ ಬಂಗಾಳ ಮೂಲದವರಾಗಿದ್ದು, ಆರೋಪಿಯ ಕ್ಯಾಟರಿಂಗ್ದಲ್ಲಿ ಕ್ಯಾಶಿಯರ್ ಹಾಗೂ ಕೌಂಟರ್ ಮ್ಯಾನೇಜರ್ ಆಗಿ ಕೆಲಸ ಮಾಡಿಕೊಂಡು ನಿಸರ್ಗ ಲೇಔಟಿನ್ ಬಾಡಿಗೆ ಮನೆಯಲ್ಲಿ ವಾಸವಿದ್ದರು.
ಅದೇ ಕಟ್ಟಡದಲ್ಲಿ ರಘುರಾಮ್ ಸಹ ವಾಸವಿದ್ದನು. ಮೇ 12ರಂದು ದೂರು ನೀಡಿದ್ದ ಸ್ನೇಹಿತೆ ಸ್ನಾನ ಮಾಡಲು ಬಾತ್ರೂಮ್ಗೆ ಹೋಗಿದ್ದ ವೇಳೆ ಆರೋಪಿಯು ಬಾತ್ ರೂಮ್ ಗೋಡೆಯ ಮೇಲಿನಿಂದ ಆಕೆಯ ವಿಡಿಯೋ ಚಿತ್ರೀಕರಿಸುತ್ತಿರುವುದನ್ನು ಗಮನಿಸಿದ್ದರು.
ತಕ್ಷಣ ಯುವತಿ ಆರೋಪಿಯನ್ನು ಹಿಡಿದು ಆತನ ಮೊಬೈಲ್ ಪರಿಶೀಲಿಸಿದ್ದಳು. ಆಗ ಯುವತಿಯರ ಹಲವು ಖಾಸಗಿ ವೀಡಿಯೋಗಳು ಪತ್ತೆಯಾಗಿದ್ದವು. ಯಾಕೆ ಈ ರೀತಿ ಮಾಡಿದ್ದೀಯಾ ಎಂದು ಪ್ರಶ್ನಿಸಿದಾಗ, ತಾನು ಹೇಳಿದಂತೆ ಕೇಳಬೇಕು, ತನ್ನೊಂದಿಗೆ ಲೈಂಗಿಕವಾಗಿ ಸಹಕರಿಸಬೇಕು. ಇಲ್ಲವಾದಲ್ಲಿ ವೀಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸುವುದಾಗಿ ಬೆದರಿಸಿದ್ದನು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಸದ್ಯ ನೊಂದ ಯುವತಿಯ ದೂರಿನನ್ವಯ ಹೆಚ್ಎಲ್ ಠಾಣೆಯ ಪೊಲೀಸರು ಆರೋಪಿಯನ್ನು ಬಂಧಿಸಿದ್ದು ತನಿಖೆ ಮುಂದುವರಿಸಿದ್ದಾರೆ.
ಒಂದೇ ಕುಟುಂಬದ ಐವರು ಆತ್ಮಹತ್ಯೆ,ಪೊಲೀಸರು ತನಿಖೆ(ಕಣ್ಣೂರು): ಇನ್ನೊಂದು ಕಡೆ ಕೇರಳದ ಕಣ್ಣೂರು ಜಿಲ್ಲೆಯಲ್ಲಿ ಮೂವರು ಮಕ್ಕಳು ಸೇರಿ ಒಂದೇ ಕುಟುಂಬದ ಐವರು ಸಾವಿಗೀಡಾಗಿರುವ ದಾರುಣ ಘಟನೆ ವರದಿಯಾಗಿದೆ.
ಮಕ್ಕಳ ಕೊಂದು ನಂತರ ದಂಪತಿ ಆತ್ಮಹತ್ಯೆ: ಕೇರಳದ ಕಣ್ಣೂರು ಜಿಲ್ಲೆಯ ಚೆರುಪುಳದಲ್ಲಿ ಮೂವರು ಮಕ್ಕಳನ್ನು ದಂಪತಿ ಕೊಂದು ಬಳಿಕ ಅವರೂ ಆತ್ಮಹತ್ಯೆ ಮಾಡಿಕೊಂಡಿರುವ ದುರಂತ ಸಂಭವಿಸಿತ್ತು. ಮೃತ ಮಕ್ಕಳನ್ನು ಸೂರಜ್, ಸುರಭಿ ಮತ್ತು ಸುಬಿತ್ ಎಂದು ತಿಳಿದು ಬಂದಿದೆ. ಮೂರು ಮಕ್ಕಳ ಶವಗಳು ಮನೆಯ ಮೆಟ್ಟಿಲುಗಳ ಬಳಿ ಇಂದು ಬೆಳಗ್ಗೆ ಪತ್ತೆಯಾಗಿವೆ. ಶ್ರೀಜಾ ಮತ್ತು ಶಾಜಿ ಎಂಬ ದಂಪತಿ ತಮ್ಮ ಮೂವರು ಮಕ್ಕಳನ್ನು ಕೊಂದು ಬಳಿಕ ಅವರೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ.
ಮಕ್ಕಳ ಶವಗಳು ಹೊರಭಾಗದಲ್ಲಿ ಸಿಕ್ಕ ಬಳಿಕ ಪೊಲೀಸರು ಮನೆಯನ್ನು ತೆರೆಯಲು ಪ್ರಯತ್ನಿಸಿದ್ದಾರೆ. ಆದರೆ, ಒಳಗಿನಿಂದ ಬೀಗ ಹಾಕಲಾಗಿತ್ತು. ಪೊಲೀಸರು ಬಾಗಿಲು ಮುರಿದು ಒಳಪ್ರವೇಶಿಸಿದ್ದು, ದಂಪತಿ ಆತ್ಮಹತ್ಯೆ ಮಾಡಿಕೊಂಡಿದ್ದು ಕಂಡುಬಂದಿದೆ.
2 ವಾರಗಳ ಹಿಂದಷ್ಟೇ ಮದುವೆಯಾಗಿದ್ದ ಜೋಡಿ: ಮೃತಪಟ್ಟ ಶ್ರೀಜಾ ಮತ್ತು ಶಾಜಿ ದಂಪತಿ ಎರಡು ವಾರಗಳ ಹಿಂದಷ್ಟೇ ಮದುವೆಯಾಗಿದ್ದರು. ಇಬ್ಬರಿಗೂ ಇದು ಎರಡನೇ ಮದುವೆ. ಮಕ್ಕಳಾದ ಸೂರಜ್, ಸುರಭಿ ಮತ್ತು ಸುಬಿತ್ ಶ್ರೀಜಾ ಅವರ ಮೊದಲ ಗಂಡನ ಮಕ್ಕಳಾಗಿದ್ದಾರೆ. ಸಾವಿಗೆ ನಿಖರ ಕಾರಣ ತಿಳಿದಿಲ್ಲವಾದರೂ, ಕುಟುಂಬ ಕಲಹ ಇದಕ್ಕೆ ಕಾರಣವಿರಬಹುದು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ