ಬೆಂಗಳೂರು: ಸಾಮೂಹಿಕ ಅತ್ಯಾಚಾರ ಪ್ರಕರಣ ಸಂಬಂಧ ಹಣಕಾಸಿನ ವಿಚಾರಕ್ಕಾಗಿ ಯುವತಿಯೊಂದಿಗೆ ಅಮಾನುಷವಾಗಿ ವರ್ತಿಸಿದ್ದೇವೆ ಎಂದು ಬಂಧಿತ ಆರೋಪಿಗಳು ತನಿಖಾಧಿಕಾರಿಗಳ ಮುಂದೆ ಒಪ್ಪಿಕೊಂಡಿದ್ದಾರೆ. ಇಬ್ಬರು ಮಹಿಳೆಯರು ಸೇರಿದಂತೆ ಆರು ಮಂದಿಯನ್ನು ಬಂಧಿಸಿ ನಗರ ಪೂರ್ವ ವಿಭಾಗದ ಪೊಲೀಸರು ವಿಚಾರಣೆ ಚುರುಕುಗೊಳಿಸಿದ್ದಾರೆ.
"ವಿಡಿಯೋದಲ್ಲಿರುವ ಯುವತಿ ಕೂಡ ಬಾಂಗ್ಲಾದವಳು, ಆಕೆ ನಮಗೆ ಪರಿಚಿತೆ. ಆಕೆಗೂ ನಮಗೂ ವ್ಯವಹಾರಿಕ ವಿಚಾರದಲ್ಲಿ ಗಲಾಟೆಯಾಗಿತ್ತು. ಆಕೆ ನಮಗೆ 7 ಲಕ್ಷ ಹಣ ನೀಡದೆ ಸತಾಯಿಸುತ್ತಿದ್ದಳು. ಇದೇ ಕಾರಣಕ್ಕೆ ನಾವು 6 ಜನರೇ ಈ ಕೃತ್ಯ ಎಸಗಿದ್ದೇವೆ. ರಾಮಮೂರ್ತಿನಗರ ಚನಸಂದ್ರ ಬಳಿಯ ಮನೆಯೊಂದರಲ್ಲಿ ಅತ್ಯಾಚಾರ ನಡೆಸಿದ್ದೇವೆ." ಎಂದು ಆರೋಪಿಗಳು ಬಾಯ್ಬಿಟ್ಟಿದ್ದಾರೆ.
ನಾವೆಲ್ಲಾ ಬಾಂಗ್ಲಾದೇಶದವರಾಗಿದ್ದು, ಅಕ್ರಮವಾಗಿ ಭಾರತಕ್ಕೆ ಬಂದಿದ್ದೇವೆ. ನಗರಕ್ಕೆ ಬಂದು ವಿವಿಧ ವೃತ್ತಿಗಳಲ್ಲಿ ತೊಡಗಿಸಿಕೊಂಡಿದ್ದೆವು. ಯಾವುದೇ ದಾಖಲೆಗಳಿಲ್ಲದೆ ಕಾನೂನು ಬಾಹಿರವಾಗಿ ಬಾಂಗ್ಲಾದಿಂದ ಭಾರತಕ್ಕೆ ಅತಿಕ್ರಮವಾಗಿ ನುಸುಳಿಕೊಂಡು ಬಂದಿದ್ದೆವು ಎಂದು ತಪ್ಪೊಪ್ಪಿಗೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆರೋಪಿಗಳ ವಿರುದ್ಧ ವಿದೇಶಿ ಕಾಯ್ದೆ 1948ರಡಿ ಭಾರತಕ್ಕೆ ಅತಿಕ್ರಮಣ ಪ್ರವೇಶ, ಐಟಿ ಆ್ಯಕ್ಟ್, ಐಪಿಸಿ 376 (ಡಿ) ಸಾಮೂಹಿಕ ಅತ್ಯಾಚಾರ ಪ್ರಕರಣ ದಾಖಲಾಗಿವೆ.
ನಾಳೆ ನ್ಯಾಯಾಧೀಶರ ಮುಂದೆ ಸಂತ್ರಸ್ತೆ ಹಾಜರು: ಘಟನೆ ಬಳಿಕ ಕೇರಳದಲ್ಲಿ ಆಶ್ರಯ ಪಡೆದಿದ್ದ ಸಂತ್ರಸ್ತೆಯನ್ನು ನಗರಕ್ಕೆ ಕರೆತಂದು ವಿಚಾರಣೆ ನಡೆಸಿರುವ ಬಾಣಸವಾಡಿ ವಿಭಾಗದ ಎಸಿಪಿ ಹಾಗೂ ತನಿಖಾಧಿಕಾರಿ ಸಕ್ರಿ ಅವರು, ಈಗಾಗಲೇ ಆರೋಪಿಗಳ ಗುರುತು ಕಾರ್ಯ ಮುಗಿದಿದ್ದು, ಐಪಿಸಿ ಸೆಕ್ಷನ್ 164ನಡಿ ಪೊಲೀಸರು ದೂರು ದಾಖಲಿಸಿ ನಾಳೆ ನ್ಯಾಯಾಧೀಶರ ಮುಂದೆ ಸಂತ್ರಸ್ತೆಯನ್ನು ಹಾಜರುಪಡಿಸಲು ಸಿದ್ದತೆ ನಡೆಸಿಕೊಂಡಿದ್ದಾರೆ.
ಆಧಾರ್ ಮೂಲ ಪತ್ತೆಗೆ ಮುಂದಾದ ಖಾಕಿ ಪಡೆ: ರಾಮೂಮೂರ್ತಿನಗರದ ಎನ್ಐಆರ್ ಕಾಲೋನಿಯ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ವಲಸಿಗರ ಬಳಿ ಆಧಾರ್ ಕಾರ್ಡ್ ಪತ್ತೆ ಕಾರ್ಯ ನಡೆಸುತ್ತಿರುವ ಪೊಲೀಸರು ಆರೋಪಿಗಳಿಗೆ ಆಧಾರ ನೀಡಿದ್ದು ಯಾರು? ಆಧಾರ್ ಕಾರ್ಡ್ಗೆ ಯಾವೆಲ್ಲಾ ದಾಖಲೆ ನೀಡಲಾಗಿದೆ. ಆಧಾರ್ ಕಾರ್ಡ್ ಒರಿಜಿನಲ್ ಇದೆಯಾ ಅಥವಾ ಡೂಪ್ಲಿಕೇಟ್ ಎಂಬುದರ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ. ಆಧಾರ್ ಕಾರ್ಡ್ ಮಾಡಿದ್ದು ಯಾರು? ಯಾರ ಐಡಿಯಲ್ಲಿ ಆಧಾರ್ ತಯಾರಾಗಿದೆ? ಎಂಬುದರ ಜೊತೆಗೆ ಇದರ ಮೂಲ ಪತ್ತೆಗೆ ಖಾಕಿ ಪಡೆ ಮುಂದಾಗಿದೆ.
ಓದಿ: ಬೆಂಗಳೂರಲ್ಲಿ ಯುವತಿಗೆ ಸ್ನೇಹಿತರಿಂದಲೇ ಲೈಂಗಿಕ ಕಿರುಕುಳ.. ವಿಡಿಯೋ ಮಾಡಿ ವಿಕೃತಿ ಮೆರೆದವರು ಅರೆಸ್ಟ್