ಬೆಂಗಳೂರು: ಕಳೆದ ಭಾನುವಾರ ನಗರದ ಶಾಪಿಂಗ್ ಮಾಲ್ವೊಂದರಲ್ಲಿ ವ್ಯಕ್ತಿಯೊಬ್ಬ ಮಹಿಳೆಯರನ್ನು ಅಸಭ್ಯವಾಗಿ ಸ್ಪರ್ಶಿಸಿ ವಿಕೃತಿ ಮೆರೆದಿದ್ದ ವಿಡಿಯೋ ವೈರಲ್ ಆಗಿತ್ತು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಮಾಗಡಿ ರಸ್ತೆ ಠಾಣಾ ಪೊಲೀಸರು, ಮಾಲ್ ಮ್ಯಾನೇಜರ್ ಕಡೆಯಿಂದ ದೂರು ಪಡೆದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡುತ್ತಿದ್ದಾರೆ. ತನಿಖೆಯಲ್ಲಿ ಅಸಭ್ಯವಾಗಿ ವರ್ತಿಸಿದ್ದ ವ್ಯಕ್ತಿ 60 ವರ್ಷ ವಯಸ್ಸಿನ ಓರ್ವ ನಿವೃತ್ತ ಮುಖ್ಯ ಶಿಕ್ಷಕ ಎಂಬ ವಿಚಾರ ಗೊತ್ತಾಗಿದೆ.
ದಶಕಗಳ ಕಾಲ ಮಕ್ಕಳಿಗೆ ಪಾಠ ಮಾಡಿರುವ ಶಿಕ್ಷಕನೇ ಇಂಥ ದುಷ್ಕೃತ್ಯ ಎಸಗಿದ್ದಾನೆ. ಆರೋಪಿ ಅಗ್ರಹಾರ ದಾಸರಹಳ್ಳಿಯ ನಿವಾಸಿ ಎಂಬುದು ಪೊಲೀಸರಿಗೆ ಖಚಿತವಾಗಿದೆ. ಶಿವನಹಳ್ಳಿ ಸಮೀಪದ ಶಾಲೆಯೊಂದರಲ್ಲಿ ಮುಖ್ಯ ಶಿಕ್ಷಕನಾಗಿ ಕೆಲಸ ಮಾಡಿ ನಿವೃತ್ತಿಯಾಗಿರುವ ಈತನಿಗೆ ತುಂಬು ಕುಟುಂಬವಿದೆ. ತನ್ನ ದುಷ್ಕೃತ್ಯದ ವಿಡಿಯೋ ವೈರಲ್ ಆಗಿ, ವಿಷಯ ಪೊಲೀಸ್ ಠಾಣಾ ಮೆಟ್ಟಿಲೇರುತ್ತಿದ್ದಂತೆ ಆರೋಪಿ ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಂದು ನಡೆದ ಘಟನೆ: ವ್ಯಕ್ತಿಯೊಬ್ಬ ಮಹಿಳೆಯರಿಗೆ ಕಿರುಕುಳ ನೀಡಿದ ಈ ಘಟನೆ ಭಾನುವಾರ ಸಂಜೆ ನಗರದ ಪ್ರತಿಷ್ಠಿತ ಮಾಲ್ವೊಂದರಲ್ಲಿ ನಡೆದಿತ್ತು. ಸಂಜೆ 6.30ರ ಸುಮಾರಿಗೆ ಮಾಲ್ನಲ್ಲಿದ್ದ ಮಹಿಳೆಯರು, ಯುವತಿಯರನ್ನು ಆಕ್ಷೇಪಾರ್ಹವಾಗಿ ಸ್ಪರ್ಶಿಸಿ ವಿಕೃತಿ ಮೆರೆದ ವ್ಯಕ್ತಿಯನ್ನು ಯುವಕನೊಬ್ಬ ಗಮನಿಸಿ ಮೊಬೈಲ್‌ನಲ್ಲಿ ವಿಡಿಯೋ ಮಾಡಿದ್ದನು. ಈ ದೃಶ್ಯವನ್ನು ಯುವಕ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದನು. ಈ ಘಟನೆ ಮಾಗಡಿ ರೋಡ್ ಠಾಣಾ ಪೊಲೀಸರ ಗಮನಕ್ಕೆ ಬಂದಿತ್ತು. ಕೂಡಲೇ ಕ್ರಮ ಕೈಗೊಂಡು ಮಾಹಿತಿ ಕಲೆ ಹಾಕಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನ ಮಾಲ್ವೊಂದರಲ್ಲಿ ಯುವತಿಗೆ ವ್ಯಕ್ತಿಯಿಂದ ಲೈಂಗಿಕ ಕಿರುಕುಳ.. ಮಾಹಿತಿ ಕಲೆ ಹಾಕುತ್ತಿರುವ ಪೊಲೀಸರು
ಮನೆಯಲ್ಲಿ ಮಲಗಿದ್ದ ಮಹಿಳೆಗೆ ಲೈಂಗಿಕ ಕಿರುಕುಳ: ಮನೆಗೆ ಅಕ್ರಮವಾಗಿ ಪ್ರವೇಶ ಮಾಡಿ ಮಲಗಿದ್ದ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪಿಯನ್ನು ಮಂಗಳೂರು ನಗರ ಪೊಲೀಸರು ಬಂಧಿಸಿದ್ದಾರೆ. ಉಳ್ಳಾಲ ತಾಲೂಕಿನ ಹರೇಕಳದ ನೌಫಾಲ್ ಬಂಧಿತ ಆರೋಪಿ. ಅಕ್ಟೋಬರ್ 25ರಂದು ಮಹಿಳೆ ತನ್ನ ಮಕ್ಕಳೊಂದಿಗೆ ಮಲಗಿದ್ದಾಗ ಘಟನೆ ನಡೆದಿದೆ. ಈ ಬಗ್ಗೆ ಅವರು ಕೊಣಾಜೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ಇದನ್ನೂಓದಿ: ಮಂಗಳೂರು: ಅಕ್ರಮವಾಗಿ ಮನೆ ಪ್ರವೇಶಿಸಿ ಮಲಗಿದ್ದ ಮಹಿಳೆಗೆ ಕಿರುಕುಳ, ಆರೋಪಿ ಬಂಧನ