ಬೆಂಗಳೂರು: ದೀಪಾವಳಿ ಸಂಭ್ರಮದ ವೇಳೆ ಪಟಾಕಿ ಸಿಡಿತದಿಂದ ನಗರದಲ್ಲಿ ಹಲವರು ಗಾಯಗೊಂಡಿದ್ದಾರೆ. ವಿವಿಧ ಆಸ್ಪತ್ರೆಗಳಲ್ಲಿ 70ಕ್ಕೂ ಹೆಚ್ಚು ಪಟಾಕಿ ಸಂಬಂಧಿ ಗಾಯ ಪ್ರಕರಣಗಳು ವರದಿಯಾಗಿವೆ. ಪಟಾಕಿ ಸಿಡಿಸುವಾಗ ನಿಂತು ನೋಡುವವರು ಅಧಿಕ ಸಂಖ್ಯೆಯಲ್ಲಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಮಿಂಟೋ ಆಸ್ಪತ್ರೆಯಲ್ಲಿ 15 ಜನರು ದಾಖಲಾಗಿದ್ದಾರೆ. ಚಿಕಿತ್ಸೆ ಪಡೆಯುತ್ತಿರುವ ಐವರು ಗಂಭೀರ ಸ್ವರೂಪದ ಗಾಯಗಳಿಂದ ಬಳಲುತ್ತಿದ್ದಾರೆ. ಈ ಪೈಕಿ ಕೆಲವರು ಒಂದು ಕಣ್ಣಿನ ದೃಷ್ಟಿ ಕಳೆದುಕೊಳ್ಳುವ ಸಾಧ್ಯತೆಯಿದೆ. ಇನ್ನಿಬ್ಬರು ಸಂಪೂರ್ಣ ದೃಷ್ಟಿ ಕಳೆದುಕೊಂಡಿದ್ದಾರೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ. ಮಿಂಟೋ ಆಸ್ಪತ್ರೆಯಲ್ಲಿ ಗಂಭೀರ ಗಾಯಗೊಂಡಿರುವವರಿಗೆ ಒಳರೋಗಿ ವಿಭಾಗ ಮತ್ತು ಉಳಿದ ಗಾಯಾಳುಗಳಿಗೆ ಹೊರರೋಗ ವಿಭಾಗದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ನಾರಾಯಣ ಆಸ್ಪತ್ರೆಯಲ್ಲಿ ಗಾಯಗೊಂಡ 24 ಪ್ರಕರಣಗಳು ದಾಖಲಾಗಿವೆ. ಇವುಗಳಲ್ಲಿ 13 ಪ್ರಕರಣಗಳು 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಾಗಿದ್ದಾರೆ. ಇಬ್ಬರಿಗೆ ಗಂಭೀರ ಸ್ವರೂಪದ ಗಾಯಗಳಾಗಿದೆ. ಶಂಕರ ಕಣ್ಣಿನ ಆಸ್ಪತ್ರೆ ಮತ್ತು ಅಗರ್ವಾಲ್ ಕಣ್ಣಿನ ಆಸ್ಪತ್ರೆಯಲ್ಲಿ ಕ್ರಮವಾಗಿ 28 ಮತ್ತು 3 ಪ್ರಕರಣಗಳು ದಾಖಲಾಗಿವೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ದೀಪಾವಳಿ ಪಟಾಕಿ ಅವಘಡ: ಕಣ್ಣಿನ ಆಸ್ಪತ್ರೆಗಳಲ್ಲಿ 43 ಜನರಿಗೆ ಚಿಕಿತ್ಸೆ