ಬೆಂಗಳೂರು: ಕೆ.ಜಿ.ಹಳ್ಳಿ, ಡಿ.ಜೆ.ಹಳ್ಳಿ, ಕಾವಲ್ ಭೈರಸಂದ್ರ ಗಲಭೆ ಪ್ರಕರಣದ ಗಂಭೀರತೆ ಹೆಚ್ಚಾಗುತ್ತಿದ್ದು, ಸಂಪೂರ್ಣ ಘಟನೆ ತನಿಖೆಗಾಗಿ ಏಳು ವಿಶೇಷ ತಂಡಗಳನ್ನು ರಚಿಸಲಾಗಿದೆ. ಸಂದೀಪ್ ಪಾಟೀಲ್ ನೇತೃತ್ವದಲ್ಲಿ ತನಿಖೆ ನಡೆಯಲಿದೆ.
ಸಂದೀಪ್ ಪಾಟೀಲ್ ಅಪರಾಧ ವಿಭಾಗ ಜಂಟಿ ಪೊಲೀಸ್ ಆಯುಕ್ತರಾಗಿದ್ದು, ತನಿಖೆಯ ಮೇಲುಸ್ತುವಾರಿ ಹಾಗೂ ತನಿಖೆ ಅಯಾಮಗಳ ಬಗ್ಗೆ ನಿಗಾ ವಹಿಸಲಿದ್ದಾರೆ. ತನಿಖೆಗೆ ಸಿಸಿಬಿಯ ಇಬ್ಬರು ಡಿಸಿಪಿಗಳಾದ ಕುಲದೀಪ್ ಕುಮಾರ್ ಜೈನ್, ರವಿಕುಮಾರ್ ನಿಯೋಜನೆಯಾಗಿದ್ದು, 7 ತಂಡಕ್ಕೂ ಪ್ರತ್ಯೇಕ ಜವಾಬ್ದಾರಿ ನೀಡಲಾಗಿದೆ. ಈ ತಂಡದಲ್ಲಿ ಸಿಸಿಬಿ ಸೇರಿದಂತೆ ನಗರದ ಹಲವು ವಿಭಾಗಗಳ ಪೊಲೀಸರಿದ್ದಾರೆ.
ಮತ್ತೊಂದೆಡೆ ಡಿ.ಜೆ.ಹಳ್ಳಿ ಹಾಗೂ ಕೆ.ಜಿ.ಹಳ್ಳಿ ಭದ್ರೆತೆಗೆ ಡಿಸಿಪಿ ಶರಣಪ್ಪನವರನ್ನು ನೇಮಕ ಮಾಡಿದ್ದು, ಈ ವೇಳೆ ಸಿಬ್ಬಂದಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಸಿಬ್ಬಂದಿ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅರ್ಥ ಮಾಡಿಕೊಳ್ಳಬೇಕು. ಯಾವುದೇ ರೀತಿಯ ನಿರ್ಲಕ್ಷಕ್ಕೆ ಅವಕಾಶ ಇಲ್ಲ. ನಿನ್ನೆ ಉತ್ತಮವಾಗಿ ಕಾರ್ಯನಿರ್ವಹಿಸಿದ್ದೀರಾ. ಶಿಸ್ತಿನಿಂದ ಕರ್ತವ್ಯ ನಿರ್ವಹಿಸಿ ಪರಿಸ್ಥತಿಯನ್ನು ಗಣನೆಗೆ ತೆಗೆದುಕೊಂಡು ಕೆಲಸ ಮಾಡಬೇಕು. ನಾವು ಕುಟುಂಬದ ರೀತಿಯಲ್ಲಿ ಒಗ್ಗಟ್ಟಾಗಿ ಕೆಲಸ ಮಾಡಬೇಕೆಂದರು.
ಖಾಕಿಯ ಹೆಮ್ಮೆಯನ್ನು ಉಳಿಸಿಕೊಳ್ಳಬೇಕು. ನಿಮ್ಮ ಕಾರ್ಯ ತುಂಬಾ ಶ್ಲಾಘನೀಯ. ಇಂದು ಶುಕ್ರವಾರ ಆದ ಕಾರಣ ಮುಸ್ಲಿಂ ಬಾಂಧವರ ಪ್ರಾರ್ಥನೆ ಇರುತ್ತದೆ. ಆದರೆ 144 ಸೆಕ್ಷನ್ ಇರುವ ಕಾರಣ ಅನುಮತಿ ಇಲ್ಲ. ಹಾಗೆಯೇ ಅನವಶ್ಯಕವಾಗಿ ಲಾಠಿ ಬಳಸುವಂತಿಲ್ಲ. ಸಾಧ್ಯವಾದಷ್ಟು ತಿಳಿಹೇಳಲು ಪ್ರಯತ್ನಿಸಬೇಕು ಎಂದು ಸೂಚಿಸಿದರು.