ಬೆಂಗಳೂರು: ಸೋಮವಾರ ತಡರಾತ್ರಿ ನಡೆದ ಭೀಕರ ರಸ್ತೆ ಅಪಘಾತ ಘಟನೆ ಸಂಬಂಧ ಆಡುಗೋಡಿ ಸಂಚಾರ ಪೊಲೀಸರು ವೇಗದ ಚಾಲನೆ ಹಾಗೂ ನಿರ್ಲಕ್ಷ್ಯದ ವಾಹನ ಚಾಲನೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಕಾರು ಅಪಘಾತ ಹಿನ್ನೆಲೆ ಸ್ಥಳಕ್ಕೆ ಆಗ್ನೇಯ ವಿಭಾಗದ ಎಸಿಪಿ ಶಿವಶಂಕರರೆಡ್ಡಿ ತೆರಳಿ ಅಪಘಾತಕ್ಕೆ ಕಾರಣ ಹಾಗೂ ಸ್ಥಳದಲ್ಲಿ ನಡೆದಿರುವ ಅಪಘಾತದ ಬಗ್ಗೆ ಮಹಜರು ಮಾಡಿಕೊಂಡಿದ್ದಾರೆ. ವೇಗದ ಚಾಲನೆಗೆ ನಿಖರ ಕಾರಣಗಳೇನು? ಕಾರು ಚಾಲನೆ ಮಾಡುತ್ತಿದ್ದ ಕರುಣಾಸಾಗರ ಮದ್ಯ ಸೇವನೆ ಮಾಡಿದ್ದರಾ ಎಂಬುದು ಸೇರಿದಂತೆ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿರುವುದಾಗಿ ಟ್ರಾಫಿಕ್ ಕಮೀಷನರ್ ಡಾ. ಬಿ.ಆರ್. ರವಿಕಾಂತೇಗೌಡ ತಿಳಿಸಿದ್ದಾರೆ.
ಎಚ್ಚರಿಕೆ ನೀಡಿದರೂ ಕ್ಯಾರೇ ಅನ್ನದ ಶಾಸಕ ಪುತ್ರ:
ಕೆಲಸದ ಸಲುವಾಗಿ ತಮಿಳುನಾಡಿನಿಂದ ಬೆಂಗಳೂರಿಂದ ಡಿಎಂಕೆ ಶಾಸಕ ಪ್ರಕಾಶ್ ಪುತ್ರ ಕರುಣಾಸಾಗರ ಮತ್ತು ಆತನ ಸ್ನೇಹಿತರು ಆಡಿ ಕಾರಿನಲ್ಲಿ ಬಂದಿದ್ದರು. ಸೋಮವಾರ ರಾತ್ರಿ 8.30 ಸುಮಾರಿಗೆ ಕೋರಮಂಗಲದ ಪಿಜಿಯಲ್ಲಿ ವಾಸ್ತವ್ಯ ಹೂಡಿದ್ದ ಬಿಂದು, ಇಷಿತಾ ಹಾಗೂ ಅಕ್ಷಯ್ ಅವರಿಗೆ ಕರೆ ಮಾಡಿದ್ದಾನೆ. ಬಳಿಕ ರಾತ್ರಿಯೆಲ್ಲ ಕಾರಿನಲ್ಲಿ ಏಳು ಮಂದಿ ಸ್ನೇಹಿತರು ಸುತ್ತಾಡಿದ್ದಾರೆ.
ವೇಗದ ಚಾಲನೆ ಗಮನಿಸಿ ಕರುಣಾಸಾಗರ ಕಾರನ್ನು ರಾತ್ರಿ ಸುಮಾರು 10.35 ರ ವೇಳೆ ಕೋರಮಂಗಲ ಅಪೋಲೊ ಆಸ್ಪತ್ರೆ ಬಳಿಯ ಚೆಕ್ ಪೋಸ್ಟ್ ಬಳಿ ಕಾನ್ಸ್ಟೇಬಲ್ ಪ್ರಶಾಂತ್ ಅಡ್ಡಗಟ್ಟಿದ್ದಾರೆ. ಕಾರಿನಲ್ಲಿ ಏಳು ಮಂದಿ ಇರುವುದನ್ನು ಗಮನಿಸಿ ವೇಗದ ಚಾಲನೆ ಬಗ್ಗೆ ಪ್ರಶ್ನಿಸಿದ್ದರು.
ಇದನ್ನೂ ಓದಿ:ಬೆಂಗಳೂರಿನಲ್ಲಿ ಐಷಾರಾಮಿ ಆಡಿ ಕಾರು ಭೀಕರ ಅಪಘಾತ: ಶಾಸಕರ ಪುತ್ರ, ಭಾವಿ ಸೊಸೆ ಸೇರಿ 7 ಮಂದಿ ದುರ್ಮರಣ
ಇದಕ್ಕೆ ಉತ್ತರಿಸಿದ ಕರುಣಾ ಇದೇ ರಸ್ತೆಯಲ್ಲಿ ಮನೆಯಿದೆ, ಎಲ್ಲರೂ ಮನೆಗೆ ಹೋಗುತ್ತಿದ್ದೇವೆ ಎಂದು ಸಮಜಾಯಿಷಿ ನೀಡಿದ್ದ. ಆಗ ಪೊಲೀಸರು ನೈಟ್ ಕರ್ಫ್ಯೂ ಇದ್ದು, ನಿಧಾನವಾಗಿ ಹೋಗಿ ಎಂದು ಸೂಚಿಸಿದ್ದರು ಎನ್ನಲಾಗ್ತಿದೆ. ಇದಾದ ಕೆಲವೇ ಗಂಟೆಗಳಲ್ಲಿ ಫುಟ್ಪಾತ್ ವಿಭಜಕಕ್ಕೆ ಗುದ್ದಿ ಏಳು ಮಂದಿ ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ:ಬೆಂಗಳೂರು ಭೀಕರ ಕಾರು ಅಪಘಾತದ ಸಿಸಿಟಿವಿ ದೃಶ್ಯ
ಮೃತಪಟ್ಟವರು ಏನಾದರೂ ಕಾರಿನಲ್ಲಿ ಸೀಟ್ ಬೆಲ್ಟ್ ಹಾಕಿಕೊಂಡಿದ್ದರೆ, ಸಾವಿನಿಂದ ಪಾರಾಗಬಹುದಿತ್ತು. ದುರಾದೃಷ್ಟವಶಾತ್ ಯಾರೂ ಸಹ ಸೀಟ್ ಬೆಲ್ಟ್ ಧರಿಸಿರಲಿಲ್ಲ. ಒಂದು ವೇಳೆ ಹಾಕಿಕೊಂಡಿದ್ದರೆ ಏರ್ ಬ್ಯಾಗ್ ಓಪನ್ ಆಗುವ ಸಾಧ್ಯತೆಯಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಭಾವಿ ಪತ್ನಿ ಬಿಂದು ಭೇಟಿ ಮಾಡಲು ಬಂದಿದ್ದ ಕರುಣಾಸಾಗರ್: ತಮಿಳುನಾಡು ಶಾಸಕನ ಪುತ್ರ ಕರುಣಾಸಾಗರ ಬೆಂಗಳೂರಿನ ಪಿಜಿಯಲ್ಲಿದ್ದ ತನ್ನ ಭಾವಿ ಪತ್ನಿ ಬಿಂದುವನ್ನು ಭೇಟಿ ಮಾಡಲು ಪಿಜಿ ಬಳಿ ಬಂದಿದ್ದ. ಆ ಬಳಿಕ ಆಕೆಯನ್ನು ಊಟಕ್ಕೆಂದು ಕಾರಿನಲ್ಲಿ ಕರೆದೊಯ್ದಿದ್ದ ಎನ್ನಲಾಗಿದ್ದು, ಅವರು ಪಿಜಿಯಿಂದ ತೆರಳಿದ ಕೊನೆಯ ಕ್ಷಣದ ದೃಶ್ಯಗಳು ಸಿಸಿಟಿವಿಯಲ್ಲಿ ದಾಖಲಾಗಿವೆ.
ಡಿಕೆ ಶಿವಕುಮಾರ್ ಸಂತಾಪ: ದುರ್ಘಟನೆ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಶಾಸಕ ಪ್ರಕಾಶ್ ಅವರ ಪುತ್ರ ತೀರಾ ಚಿಕ್ಕ ವಯಸ್ಸಿನಲ್ಲಿ ಇಂತಹ ದುರಂತಕ್ಕೆ ಬಲಿ ಆಗಿರುವುದು ಆಘಾತಕಾರಿ ಸಂಗತಿ. ಮೊದಲಿಂದಲೂ ಪ್ರಕಾಶ್ ಅವರು ತಮ್ಮೊಡನೆ ಉತ್ತಮ ಬಾಂಧವ್ಯ ಹೊಂದಿದ್ದರು. ರಾಜಕೀಯ ಸೇರಿದಂತೆ ಅನೇಕ ವಿಚಾರಗಳನ್ನು ತಾವಿಬ್ಬರೂ ವಿನಿಮಯ ಮಾಡಿಕೊಳ್ಳುತ್ತಿದ್ದೆವು. ರಾಜಕೀಯ ಮೀರಿದ ಉತ್ತಮ ಸ್ನೇಹ, ಒಡನಾಟ ತಮ್ಮ ನಡುವೆ ಇತ್ತು. ತಮ್ಮ ಮಿತ್ರನಿಗೆ ಇಂತಹ ಶೋಕ ಬರಬಾರದಿತ್ತು. ವಿಧಿ ಈ ರೀತಿ ಕ್ರೂರಿ ಆಗಬಾರದಿತ್ತು ಎಂದು ಶಿವಕುಮಾರ್ ಅವರು ನೋವು ವ್ಯಕ್ತಪಡಿಸಿದ್ದಾರೆ.