ಬೆಂಗಳೂರು: ಜಿಂದಾಲ್ ಸ್ಟೀಲ್ ವರ್ಕ್ಸ್ (ಜೆಎಸ್ಡಬ್ಲ್ಯೂ)ನಿಂದ 1172 ಕೋಟಿ ರೂಪಾಯಿ ನಷ್ಟ ಪರಿಹಾರ ಕೋರಿ ಮೈಸೂರು ಮಿನರಲ್ಸ್ ಲಿಮಿಟೆಡ್ (ಎಂಎಂಎಲ್) ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
ಕಾಲಮಿತಿ ಮುಗಿದ ಪ್ರತಿಪಾದನೆಗಳನ್ನು ಪುರಸ್ಕರಿಸದಂತೆ ಸುಪ್ರೀಂ ಕೋರ್ಟ್ ನೀಡಿರುವ ನಿರ್ದೇಶನದಂತೆ ಹೈಕೋರ್ಟ್ ಎಂಎಂಎಲ್ ಅರ್ಜಿಯನ್ನು ತಿರಸ್ಕರಿಸಿದೆ. ಹೈಕೋರ್ಟ್ನ ಆದೇಶದಿಂದಾಗಿ ಜಿಂದಾಲ್ಗೆ ಭೂಮಿ ನೀಡುವುದಾಗಿ ಈ ಹಿಂದೆ ರಾಜ್ಯ ಸರ್ಕಾರ ಮಾಡಿಕೊಂಡಿದ್ದ ಒಪ್ಪಂದದ ಅನುಷ್ಠಾನ ಸುಗಮವಾಗಲಿದೆ.
ಪ್ರಕರಣದ ಹಿನ್ನೆಲೆ : 1990ರಲ್ಲಿ ವಿಜಯನಗರ ಉಕ್ಕಿನ ಕಾರ್ಖಾನೆ ಸ್ಥಾಪಿಸಲು ಕೇಂದ್ರ ಸರ್ಕಾರ ಭೂಮಿ ವಶಪಡಿಸಿಕೊಂಡಿತ್ತು. ಈ ಭೂಮಿಯಲ್ಲಿ ಉಕ್ಕಿನ ಘಟಕ ಸ್ಥಾಪಿಸಲು ರಾಜ್ಯದ ಮೈಸೂರು ಮಿನರಲ್ಸ್ಗೆ ಅವಕಾಶ ನೀಡಿ, ಘಟಕ ಸ್ಥಾಪಿಸದಿದ್ದರೆ ಭೂಮಿ ಕೇಂದ್ರ ಸರ್ಕಾರಕ್ಕೆ ಹಿಂದಿರುಗಿಸುವ ಷರತ್ತು ವಿಧಿಸಿತ್ತು. ಅದರಂತೆ ಮೈಸೂರು ಮಿನರಲ್ಸ್ ಹಾಗೂ ಜಿಂದಾಲ್ ಬೃಹತ್ ಉಕ್ಕಿನ ಘಟಕ ಸ್ಥಾಪಿಸಿದ್ದವು. ಆದರೆ ಸುಪ್ರೀಂ ಕೋರ್ಟ್ ರಾಜ್ಯದಲ್ಲಿ ಗಣಿಗಾರಿಕೆ ನಿಷೇಧಿಸಿದ ಬಳಿಕ ಎರಡೂ ಸಂಸ್ಥೆಗಳು ಆರ್ಥಿಕ ನಷ್ಟ ಅನುಭವಿಸಿದ್ದವು. ಆ ಬಳಿಕ ಜಿಂದಾಲ್ ತಾನು ಪೂರೈಸಿರುವ ಕಬ್ಬಿಣದ ಅದಿರಿಗೆ 272 ಕೋಟಿ ರೂಪಾಯಿ ಪಾವತಿಸುವಂತೆ ಮೈಸೂರು ಮಿನರಲ್ಸ್ಗೆ ಕೋರಿತ್ತು. ಹಣ ಪಾವತಿಸದಿದ್ದಾಗ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿತ್ತು. ಇದಕ್ಕೆ ಪ್ರತಿವಾದ ಮಂಡಿಸಿದ್ದ ಮೈಸೂರು ಮಿನರಲ್ಸ್ ಉದ್ದಿಮೆಯಲ್ಲಿ ತನಗೇ ನಷ್ಟವಾಗಿದ್ದು, ಜಿಂದಾಲ್ 1172 ಕೋಟಿ ಪಾವತಿಸಬೇಕೆಂದು ಪ್ರತಿಪಾದಿಸಿತ್ತು. ಎರಡೂ ಸಂಸ್ಥೆಗಳ ವಾದ ಪ್ರತಿವಾದ ಆಲಿಸಿದ ಪೀಠ, ಮೈಸೂರು ಮಿನರಲ್ಸ್ ಬೇಡಿಕೆಯನ್ನು ತಿರಸ್ಕರಿಸಿ ಆದೇಶಿಸಿದೆ.