ಆನೇಕಲ್ (ಬೆಂಗಳೂರು) : ರಾತ್ರಿ ಮನೆಯಲ್ಲಿ ಯಾರೂ ಇಲ್ಲದ್ದನ್ನು ಖಚಿತಪಡಿಸಿಕೊಂಡ ಕಳ್ಳನೊಬ್ಬ ಮನೆಯ ಬೀಗ ಮುರಿದು ಒಳನುಗ್ಗಿ ನಗ-ನಾಣ್ಯ ದೋಚಿ ಪರಾರಿಯಾದ ಘಟನೆ ಆನೇಕಲ್ ಪಟ್ಟಣದಲ್ಲಿ ಇಂದು ಬೆಳಗ್ಗೆ ಬೆಳಕಿಗೆ ಬಂದಿದೆ. ಆನೇಕಲ್ - ಚಂದಾಪುರ ಮುಖ್ಯ ರಸ್ತೆಯಲ್ಲಿನ ಮಠ ಮತ್ತು ಹೋಟೆಲ್ ಮಾಲೀಕ ಬಂಗಾರಪೇಟೆ ತಾಲೂಕಿನ ಬೂದಿಕೋಟೆ ಮೂಲದ ಮಂಜುನಾಥ್ ಎಂಬುವವರ ಮನೆಯಲ್ಲಿ ಕಳ್ಳತನ ನಡೆದಿದೆ.
ಕಳ್ಳನು ಮಂಜುನಾಥ್ ಎಂಬುವವರ ಮನೆಯಿಂದ ಚಿನ್ನದ ನೆಕ್ಲೆಸ್, ಎರಡು ಚಿನ್ನದ ಕತ್ತಿನ ಸರ, 4 ಚಿನ್ನದ ಉಂಗುರ, ಆರು ಜೊತೆ ಚಿನ್ನದ ಕಿವಿ ಓಲೆ ಮತ್ತು ಮಗಳ ಮದುವೆಗೆ ಇಟ್ಟಿದ್ದ 3 ಲಕ್ಷ 70ಸಾವಿರ ನಗದು ಹಣವನ್ನು ದೋಚಿ ಪರಾರಿಯಾಗಿದ್ದಾನೆ. ಅಲ್ಲದೇ ಮನೆಯ ಮನೆ ಬೀಗ ಮುರಿಯುವ ಮುನ್ನ ಸುತ್ತಲ ಮನೆಗಳ ಹೊರಬಾಗಿಲ ಚಿಲಕ ಹಾಕಿ ಕಳ್ಳತನ ನಡೆಸಿದ್ದಾನೆ ಎನ್ನಲಾಗಿದೆ.
ಮಂಜುನಾಥ ನಿತ್ಯ ಬೆಳಗ್ಗೆ ಬೀದಿ ಬದಿ ತಿಂಡಿ ವ್ಯಾಪಾರ ನಡೆಸಿ ಮಗಳ ಮದುವೆಗೆ ನಗನಾಣ್ಯ ಸಂಗ್ರಹಿಸಿದ್ದರು. ಕಳ್ಳ ಇವರ ಮಗಳ ಮದುವೆಗೆಂದು ಸಂಗ್ರಹಿಸಿದ್ದ ನಗ ನಾಣ್ಯಗಳನ್ನು ಕದ್ದು ಪರಾರಿಯಾಗಿದ್ದು, ಮನೆಯ ಬಾಗಿಲು ಮುರಿಯಲು ಬಳಸಿದ್ದ ಕಬ್ಬಿಣದ ಗಡಾರಿಯನ್ನು ಮನೆಯಲ್ಲೇ ಬಿಟ್ಟು ಹೋಗಿದ್ದಾನೆ.
ಇದಕ್ಕೂ ಮುನ್ನ ಮಯೂರ ಬೇಕರಿ ಹಿಂದೆ ಇರುವ ಮಠವೊಂದರಲ್ಲಿ ಬೆಳ್ಳಿ ಲೇಪಿತ ವಿಗ್ರಹ ಹಾಗೂ ಎರಡು ದೀಪಸ್ತಂಭಗಳನ್ನು ಕಳ್ಳ ಹೊತ್ತೊಯ್ದಿದ್ದಾನೆ. ಅರೆ ನಗ್ನಾವಸ್ಥೆಯಲ್ಲಿ ಹುಚ್ಚನಂತೆ ಕಂಡು ಬರುವ ಕಳ್ಳನ ಚಲನವಲನ ಮಠದ ಸಿಸಿ ಕ್ಯಾಮೆರಾದದಲ್ಲಿ ಸೆರೆಯಾಗಿದೆ.
ಕಳ್ಳತನವಾದ ಬಾಡಿಗೆ ಮನೆಯಿಂದ ಒಂದು ದಿನ ಮೊದಲು ಮಂಜುನಾಥ ಆಂಧ್ರದ ಬೋಯಿಕೊಂಡ ದರ್ಶನಕ್ಕೆ ಕುಟುಂಬ ಸಮೇತ ಹೊರಟಿದ್ದು ರಾತ್ರಿ ಈ ಬಗ್ಗೆ ಮಾಹಿತಿ ಕಲೆ ಹಾಕಿ ಹೊಂಚು ಹಾಕಿ ಕಳ್ಳತನ ನಡೆಸಿರುವುದಾಗಿ ಹೇಳಲಾಗಿದೆ. ಕಳ್ಳನ ಚಹರೆಗಳು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವಿಲಕ್ಷಣ ವ್ಯಕ್ತಿಯಂತೆ ಕಂಡುಬಂದಿದ್ದಾನೆ.
ಅಲ್ಲದೇ ಬೀದಿ ನಾಯಿಗಳೂ ಬೊಗಳದೆ, ಕಲಗಲಿನಿಂದ ಮಠದ ಬಾಗಿಲ ಬೀಗ ಹೊಡೆದರೂ ಸದ್ದು ಬಾರದಿರುವುದು ಸುತ್ತಲ ನಿವಾಸಿಗಳಿಗೆ ಅಚ್ಚರಿ ಮೂಡಿಸಿದೆ. ಸ್ಥಳಕ್ಕೆ ಆನೇಕಲ್ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದು, ಬೆರಳಚ್ಚು ತಜ್ಞರ ತಂಡ ಹಾಗು ಶ್ವಾನದಳ ಆಗಮಿಸಿದ್ದು, ಕಳ್ಳನ ಪತ್ತೆಗಾಗಿ ಆನೇಕಲ್ ಪೊಲೀಸರು ಬಲೆ ಬೀಸಿದ್ದಾರೆ.
ಓದಿ : ಮಂಗಳೂರಿನಲ್ಲಿ ಬಾಲಕಿ ಮೇಲೆ ಮಾನಭಂಗಕ್ಕೆ ಯತ್ನ.. ಪೋಕ್ಸೋ ಕಾಯ್ದೆಯಡಿ ಕೇಸ್ ದಾಖಲು