ಬೆಂಗಳೂರು: ಮಾದಕ ವಸ್ತು ಮಾರಾಟ ಜಾಲದ ತನಿಖೆ ನಡೆಸುತ್ತಿರುವ ಸಿಸಿಬಿಗೆ ಒಂದೆಡೆ ಭೇಷ್ ಎಂಬ ಮಾತುಗಳು ಕೇಳಿ ಬರ್ತಿದ್ರೆ ಮತ್ತೊಂದೆಡೆ ಬಂಧಿತ ಆರೋಪಿಗಳಿಗೆ ಸಹಾಯ ಮಾಡಿದ ಸಿಸಿಬಿ ಎಸಿಪಿ ಸಾಕ್ಷ್ಯ ಸಮೇತ ಹಿರಿಯ ಅಧಿಕಾರಿಗಳಿಗೆ ಸಿಕ್ಕಿಬಿದ್ದು, ಸದ್ಯ ಅಮಾನತಾಗಿದ್ದಾರೆ. ಎಸಿಪಿ ಜೊತೆ ಕಾನ್ಸ್‌ಟೇಬಲ್ ಕೂಡ ಅಮಾನತಾಗಿದ್ದು, ಈ ಕುರಿತಂತೆಯೂ ತನಿಖೆ ಚುರುಕಾಗಿದೆ.
ಸಿಸಿಬಿಯ ಮಹಿಳಾ ಸುರಕ್ಷತಾ ದಳದ ಎಸಿಪಿ ಎಂ.ಆರ್. ಮುದವಿ ಡ್ರಗ್ಸ್ ಲಿಂಕ್ ಆರೋಪದಡಿ ಬಂಧನವಾಗಿರುವ ವಿರೇನ್ ಖನ್ನಾಗೆ ಜೈಲಿನಲ್ಲಿ ಸಹಾಯ ಮಾಡಿದ್ದಾರೆ. ಅಲ್ಲದೆ, ತಲೆಮರೆಸಿಕೊಂಡಿರುವ ಶೇಖ್ ಫಾಜಿಲ್ಗೂ ಸಹಾಯ ಮಾಡಿರುವ ಆರೋಪದಡಿ ಆಡಿಯೋಗಳ ಸಮೇತ ಸಿಕ್ಕಿಬಿದ್ದು ಸಸ್ಪೆಂಡ್ ಆಗಿದ್ದಾರೆ.
ಸದ್ಯ ತನಿಖಾಧಿರಿಗಳು ಸಿಸಿಬಿ ಇತರೆ ಸಿಬ್ಬಂದಿ ಮೇಲೆ ಕಣ್ಣಿಟ್ಟಿದ್ದಾರೆ. ಪ್ರಕರಣದಲ್ಲಿ ನಟ-ನಟಿಯರು, ರಾಜಕಾರಣಿಗಳ ಮಕ್ಕಳು ಭಾಗಿಯಾಗಿದ್ದಾರೆ. ಸದ್ಯ ಪ್ರಕರಣ ತನಿಖೆಯ ಹಂತದಲ್ಲಿರುವಾಗ ತನಿಖೆಯ ಮಾಹಿತಿಯನ್ನು ಸೋರಿಕೆ ಮಾಡಿದರೆ ಆರೋಪಿಗಳಿಗೆ ಜಾಮೀನು ಪಡೆಯಲು ಬಹಳ ಸಹಕಾರಿಯಾಗುತ್ತದೆ. ಹಾಗೆ ತಲೆಮರೆಸಿಕೊಳ್ಳಲು ದಾರಿ ಮಾಡಿಕೊಟ್ಟಂತಾಗುತ್ತದೆ. ಹೀಗಾಗಿ ಸದ್ಯ ಹಿರಿಯ ಅಧಿಕಾರಿಗಳು ಪ್ರತಿ ಸಿಬ್ಬಂದಿ ಮೇಲೆ ನಿಗಾ ಇರಿಸಿದ್ದಾರೆ.
ಇದನ್ನೂ ಓದಿ: ಡ್ರಗ್ಸ್ ದಂಧೆ ಆರೋಪಿಗಳ ಸಹಚರರಿಗೆ ತನಿಖಾ ಮಾಹಿತಿ ಸೋರಿಕೆ: ಎಸಿಪಿ ಸೇರಿದಂತೆ ಇಬ್ಬರು ಸಸ್ಪೆಂಡ್
ಮತ್ತೊಂದೆಡೆ ಸಿಸಿಬಿ ಅಧಿಕಾರಿಗಳು ತಲೆತಗ್ಗಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಯಾಕಂದ್ರೆ ಆರೋಪಿಗಳನ್ನು ಹಿಡಿಯಲು ಹಗಲು-ರಾತ್ರಿ ಕಷ್ಟ ಪಟ್ಟು ಆರೋಪಿಗಳನ್ನು ಪತ್ತೆ ಮಾಡುತ್ತಿದ್ದಾರೆ.
ಪ್ರಕರಣದಲ್ಲಿ ಪ್ರಮುಖವಾಗಿ ಭಾಗಿಯಾದ ಮೂವರು ಪೆಡ್ಲರ್ಗಳು ತಲೆಮರೆಸಿಕೊಂಡಿದ್ದಾರೆ. ಈ ಮಧ್ಯೆ ಸಿಸಿಬಿ ಕಚೇರಿಯಲ್ಲಿದ್ದುಕೊಂಡೇ ಸಿಸಿಬಿಯ ಮಹಿಳಾ ಸುರಕ್ಷತಾ ದಳದ ಎಸಿಪಿ ಎಂ.ಆರ್. ಮುದವಿ ನಂಬಿಕೆದ್ರೋಹ ಮಾಡಿದಕ್ಕೆ ಸಿಸಿಬಿಯಲ್ಲಿಯೇ ಬೇಸರ ವ್ಯಕ್ತವಾಗಿದೆ.
ಇದೇ ಮುದವಿ 2009ರಲ್ಲಿ ಉಪ್ಪಾರಪೇಟೆ ಠಾಣೆಯಲ್ಲಿ ಇನ್ಸ್ಪೆಕ್ಟರ್ ಆಗಿದ್ದಾಗ ಲಂಚ ಸ್ವೀಕಾರ ಆರೋಪದಲ್ಲಿ ಸಿಕ್ಕಿಬಿದ್ದಿದ್ದರು. ಈಗ ವಿರೇನ್ ಖನ್ನಾ ಹಾಗೂ ಇತರೆ ಆರೋಗಳಿಗೆ ಲಕ್ಷ ಲಕ್ಷ ಹಣ ಬೇಡಿಕೆ ಇಟ್ಟಿದ್ದು, ಮುಂಗಡ ಹಣ ಕೂಡ ಪಡೆದಿರುವ ಆರೋಪ ಕೇಳಿಬಂದಿದೆ.