ಬೆಂಗಳೂರು: ಬಡ್ತಿ ನೀಡಲಿಲ್ಲವೆಂದು ತೀವ್ರವಾಗಿ ಅಸಮಾಧಾನಗೊಂಡ ಹಿರಿಯ ಐಪಿಎಸ್ ಅಧಿಕಾರಿ ರವೀಂದ್ರನಾಥ್ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.
ಅರಣ್ಯ ಇಲಾಖೆಯ ಎಡಿಜಿಪಿಯಾಗಿರುವ ರವೀಂದ್ರನಾಥ್, ತನಗಿಂತ ಕಿರಿಯ ಅಧಿಕಾರಿಗಳಿಗೆ ಸರ್ಕಾರ ನಿನ್ನೆ ಬಡ್ತಿ ನೀಡಿರುವುದರ ಬಗ್ಗೆ ನೊಂದಿದ್ದು, ತಡರಾತ್ರಿ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ರಾಜೀನಾಮೆ ನೀಡಲು ಹೊರಟ್ಟಿದ್ದರು. ಆದರೆ ಡಿಜಿ ಭೇಟಿಗೆ ಅವಕಾಶ ಸಿಗದ ಕಾರಣ ಕಂಟ್ರೋಲ್ ರೂಂಗೆ ತೆರಳಿರುವ ಅವರು ರಾಜೀನಾಮೆ ನೀಡಿದ್ದಾರೆ.
ಐಪಿಎಸ್ ಅಧಿಕಾರಿಗಳಾದ ಅಮರ್ ಕುಮಾರ್ ಪಾಂಡೆ ಅವರನ್ನು ಕಾನೂನು ಸುವ್ಯವಸ್ಥೆ ಎಡಿಜಿಪಿ ಹುದ್ದೆಯಿಂದ ಡಿಜಿಪಿ ಪೊಲೀಸ್ ತರಬೇತಿ ವಿಭಾಗಕ್ಕೂ, ಟಿ.ಸುನೀಲ್ ಕುಮಾರ್ ಅವರನ್ನು ಎಸಿಬಿ ಎಡಿಜಿಪಿಯಿಂದ ಸಿಐಡಿ ವಿಶೇಷ ಹಾಗೂ ಆರ್ಥಿಕ ಅಪರಾಧ ವಿಭಾಗದ ಡಿಜಿಪಿಯಾಗಿಯೂ, ಸಿ.ಎಚ್.ಪ್ರತಾಪ್ ರೆಡ್ಡಿ ಅವರನ್ನು ಎಡಿಜಿಪಿ ಪೊಲೀಸ್ ಸಂಪರ್ಕ ಸಂವಹನ ಹಾಗೂ ಅಧುನೀಕರಣ ಜೊತೆಗೆ ಕಾನೂನು ಸುವ್ಯವಸ್ಥೆಗೆ ವರ್ಗಾಯಿಸಿ ಸರ್ಕಾರ ನಿನ್ನೆ ಆದೇಶಿಸಿದೆ. ಜೊತೆಗೆ ಈ ಮೂವರಿಗೂ ಡಿಜಿಪಿ ರ್ಯಾಂಕ್ಗೆ ಬಡ್ತಿ ನೀಡಿತ್ತು. ಆದರೆ ಈ ಪಟ್ಟಿಯಲ್ಲಿ ತನ್ನ ಹೆಸರಿಲ್ಲದ ಕಾರಣ ರವೀಂದ್ರನಾಥ್ ರಾಜೀನಾಮೆ ನೀಡಿದ್ದಾರೆ.
ರವಿಂದ್ರನಾಥ್ ಅವರು ಪೊಲೀಸ್ ಇಲಾಖೆಯಲ್ಲಿ ಹಿರಿಯ ಅಧಿಕಾರಿಯಾಗಿದ್ದು, ಈ ಹಿಂದೆ ಕನ್ನಿಂಗ್‌ಹ್ಯಾಂ ರಸ್ತೆಯ ಕಾಫಿ ಡೇಯಲ್ಲಿ ಹುಡುಗಿಯೋರ್ವಳ ಫೋಟೊ ತೆಗೆದಿರುವ ಕಾರಣ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದ್ದರು. ಇವರ ವಿರುದ್ಧ ಕೆಲವು ಆರೋಪಗಳಿರುವ ಕಾರಣ ಸರ್ಕಾರ ಬಡ್ತಿ ನೀಡಿಲ್ಲವೆಂದು ಹೇಳಲಾಗುತ್ತಿದೆ.