ಬೆಂಗಳೂರು: ಹಿರಿಯ ಪತ್ರಕರ್ತ ಕಾಸರಗೋಡು ಮೂಲದ ಎಂ.ಕೆ.ಮಧುಸೂದನ್ (63) ನಿನ್ನೆ ಮುಂಜಾನೆ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಪತ್ನಿ ಮತ್ತು ಇಬ್ಬರು ಪುತ್ರರನ್ನು ಮಧುಸೂದನ್ ಅಗಲಿದ್ದು, ಹಿರಿಯ ಪುತ್ರ ಶಶಾಂತ್ ಜರ್ಮನಿಯಲ್ಲಿ ಹಡಗು ಕಂಪನಿಯೊಂದರ ಉದ್ಯೋಗಿಯಾಗಿದ್ದಾರೆ. ಹಿರಿಯ ಪತ್ರಕರ್ತ ಮಧು ಸೂದನ್ ನಿಧನಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿ ಹಲವಾರು ಗಣ್ಯರು ಶೋಕ ವ್ಯಕ್ತಪಡಿಸಿದ್ದು, ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸಿದ್ದಾರೆ.
1982ರಲ್ಲಿ ಬೆಂಗಳೂರಿನ " ದಿ ಟೈಮ್ಸ್ ಆಫ್ ಡೆಕ್ಕನ್" ದೈನಿಕದಿಂದ ವೃತ್ತಿ ಜೀವನ ಆರಂಭಿಸಿದ ಮಧುಸೂದನ್ ಇಂಡಿಯನ್ ಎಕ್ಸ್‌ಪ್ರೆಸ್, ಇಂಡಿಯಾ ಇನ್ಫೋ, ಡಿ.ಎನ್.ಎ, ವಿಜಯ್ ಟೈಮ್ಸ್ ಹಾಗೂ ಟೈಮ್ಸ್ ಆಫ್ ಇಂಡಿಯಾ ಬೆಂಗಳೂರು ಬ್ಯೂರೋದ ಅಪರಾಧ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು.
ಅಪರಾಧ ವಿಭಾಗದ ವರದಿಗಾರಿಕೆಯಲ್ಲಿ ಪರಿಣಿತರಾಗಿದ್ದ ಮಧುಸೂದನ್, ಬೆಂಗಳೂರಿನ ಸಮೀಪ ಕೋಣನಕುಂಟೆಯಲ್ಲಿ ಅವಿತಿದ್ದ ಎಲ್.ಟಿ ಟಿ.ಐ ಉಗ್ರ ಶಿವರಸನ್ ಪ್ರಕರಣದ ಕಾರ್ಯಾಚರಣೆ, ಬಂಗಾರಪ್ಪ ಅವಧಿಯಲ್ಲಿ ನಡೆದ ಕಾವೇರಿ ಗಲಭೆ ಮತ್ತಿತರ ಪ್ರಕರಣಗಳ ವರದಿಗಾರಿಕೆಯಲ್ಲಿ ಹೆಸರು ಮಾಡಿದ್ದರು.
ಮೃತರ ಅಂತ್ಯಕ್ರಿಯೆ ಇಂದು ಬೆಳಗ್ಗೆ ಹತ್ತೂವರೆಗೆ ಕೆಂಗೇರಿ ಸ್ಯಾಟ್ ಲೈಟ್ ಟೌನಿನ ಕೊಮಘಟ್ಟ ರಸ್ತೆಯಲ್ಲಿರುವ ವಿದ್ಯುತ್ ಚಿತಾಗಾರದಲ್ಲಿ ನಡೆಯಲಿದೆ ಎಂದು ಮೃತರ ಪುತ್ರ ಶೋಭಿತ್ ತಿಳಿಸಿದ್ದಾರೆ.