ಬೆಂಗಳೂರು: ಲಾಕ್ಡೌನ್ ಹಿನ್ನೆಲೆ ಕಳೆದ 50 ದಿನಗಳಿಂದ ಬಂದ್ ಆಗಿದ್ದ ಉದ್ಯಾನಗಳ ಬಾಗಿಲು ತೆರೆದಿದ್ದು, ಹಿರಿಯ ನಾಗರಿಕರಲ್ಲಿ ಅತೀವ ಸಂತಸ ಮೂಡಿಸಿದೆ.
ನಗರದ ಎಲ್ಲಾ ಉದ್ಯಾನಗಳು ಮತ್ತೆ ವಾಕಿಂಗ್, ಜಾಗಿಂಗ್, ಹರಟೆ, ವ್ಯಾಯಾಮ, ಪ್ರೇಮಿಗಳ ನೆಮ್ಮದಿಯ ತಾಣಗಳಾಗಿ ಮಾರ್ಪಟ್ಟಿವೆ. ಒಂದಿಷ್ಟು ಹೊತ್ತು ಕಾಲಹರಣ ಮಾಡಲು ವೃದ್ಧರಿಗೆ ಸಿಗುತ್ತಿದ್ದ ಅತ್ಯಂತ ಪ್ರಶಸ್ತ ತಾಣ ಉದ್ಯಾನಗಳು. ಅಲ್ಲದೇ ಮರಗಿಡಗಳಿಂದ ತುಂಬಿರುವ ಹಿನ್ನೆಲೆ ಉತ್ತಮ ಗಾಳಿಯೂ ಸಿಗುತ್ತದೆ ಎಂಬ ಕಾರಣಕ್ಕೆ ಬೆಳಗ್ಗೆ, ಸಂಜೆ ಇಲ್ಲಿ ಬಂದು ಕುಳಿತು ಕೆಲಕಾಲ ಆಪ್ತರು, ಸ್ನೇಹಿತರ ಜತೆ ಹರಟೆ ಹೊಡೆದು ತೆರಳುವುದು ಹಲವರ ರೂಢಿ. ಆದರೆ, ಕಳೆದ 50 ದಿನದಿಂದ ಇಂತಹ ಚಟುವಟಿಕೆಗೆ ಕಡಿವಾಣ ಬಿದ್ದಿತ್ತು. ಉದ್ಯಾನಗಳು ಮತ್ತೆ ಜನರಿಂದ ಭರ್ತಿಯಾಗುತ್ತಿದೆ.
ಜನ ಹಿಂದಿನಷ್ಟು ಸ್ವತಂತ್ರವಾಗಿ ಓಡಾಡುವ, ಜಾಗಿಂಗ್, ಬಿರುಸಿನ ವಾಕಿಂಗ್ ಮಾಡಲು ಕೊಂಚ ಕಷ್ಟವಾಗುತ್ತಿದೆ. ಹಲವು ದಿನದಿಂದ ನಿತ್ಯದ ವ್ಯಾಯಾಮ ತಪ್ಪಿಸಿಕೊಂಡಿದ್ದವರು, ಸ್ನೇಹಿತರಿಗಾಗಿ ಹಾತೊರೆಯುತ್ತಿದ್ದವರಿಗೆ ಬೇಸಿಗೆಯಲ್ಲಿ ಮಳೆ ಬಂದಷ್ಟೇ ಕುಷಿಯಾಗಿದೆ.
ಎಚ್ಚರ ತಪ್ಪುವಂತಿಲ್ಲ:
ಸರ್ಕಾರದ ಸೂಚನೆ ಸಿಗುತ್ತಿದ್ದಂತೆ ಬೆಂಗಳೂರಿನ ಪ್ರತಿ ಉದ್ಯಾನವೂ ಬಾಗಿಲು ತೆರೆದಿದೆ. ಕೊರೊನಾ ಅಟ್ಟಹಾಸ ಬೆಂಗಳೂರಿನಲ್ಲಿ ಇನ್ನೂ ನಿಂತಿಲ್ಲ. ದಿನಕ್ಕೊಂದು ಹೊಸ ಪ್ರದೇಶದಿಂದ ಕೋವಿಡ್-19 ಪ್ರವೇಶ ಆಗುತ್ತಿದೆ. ಈ ಹಿನ್ನೆಲೆ ಉದ್ಯಾನಕ್ಕೆ ಬರುವ ವಿಹಾರಿಗಳು ಯಾವ ಕಾರಣಕ್ಕೂ ಮೈ ಮರೆಯುವಂತಿಲ್ಲ.
ಯಾರೋ ಕೂತು ಎದ್ದು ಹೋದ ಆಸನದ ಮೇಲೆ ಕೂರುವಾಗ ಎಚ್ಚರ ವಹಿಸಬೇಕಾಗುತ್ತದೆ. ಆಗ ತಾನೇ ಬಳಸಿ ಎದ್ದು ಹೋದ ವ್ಯಾಯಾಮ ಸಲಕರಣೆಯನ್ನು ಮುಟ್ಟುವಾಗ ಹತ್ತುಪಟ್ಟು ಗಮನ ಹರಿಸಬೇಕಿದೆ. ಮಕ್ಕಳನ್ನು ಕರೆತರುವವರು ಎಷ್ಟು ಎಚ್ಚರಿಕೆ ವಹಿಸಿದರೂ ಕಡಿಮೆಯೇ.
50 ದಿನದಿಂದ ಉದ್ಯಾನಕ್ಕೆ ಬರಲಾಗಿರಲಿಲ್ಲ. ಬೆಳಗ್ಗೆ, ಸಂಜೆ ಇಲ್ಲಿಗೆ ಬರುತ್ತೇನೆ. ಇದುವರೆಗೂ ಮನೆಯ ತಾರಸಿ ಮೇಲೆ ವಾಯುವಿಹಾರ, ಯೋಗ ಎಲ್ಲಾ ಮಾಡುತ್ತಿದ್ದೆವು. ಈಗ ಕೊಂಚ ನಿರಾಳ ಅನ್ನಿಸುತ್ತಿದೆ. ನಮ್ಮ ಸ್ನೇಹಿತರ ಜತೆ ಬೆರೆಯಲು ಅವಕಾಶ ಕೂಡಿಬಂದಿದೆ ಎಂದು ಹೊಸಕೆರೆಹಳ್ಳಿ ನಿವಾಸಿ ಪ್ರಕಾಶ್ ಅಭಿಪ್ರಾಯ ಪಟ್ಟಿದ್ದಾರೆ.
ಮನೆಯಲ್ಲಿ ಕೂತು ಬೇಸರವಾಗಿತ್ತು, ಕಾಲ ಕಳೆಯುವುದು ಕಷ್ಟವಾಗಿತ್ತು. ನಿತ್ಯ ಸಂಜೆ ಸ್ನೇಹಿತರ ಜತೆ ಕೂತು ಹಲವು ವಿಚಾರ ವಿನಿಮಯಕ್ಕೆ ಅವಕಾಶ ಸಿಗುತ್ತಿದೆ. ಹಲವು ಸಮಸ್ಯೆಗೆ ಇಲ್ಲಿ ನಮಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳಲು ಅನುಕೂಲವಾಗುತ್ತದೆ. ಮತ್ತೆ ಉದ್ಯಾನ ತೆರೆದಿರುವುದು ಸಂತೋಷ ತಂದಿದೆ ಎಂದು ಹೊಸಕೆರೆಹಳ್ಳಿಯ ನಿವಾಸಿ ವಿಜಯ್ ಕುಮಾರ್ ಸಂತಸ ಹಂಚಿಕೊಂಡಿದ್ದಾರೆ.