ಬೆಂಗಳೂರು: 60 ವರ್ಷ ಮೇಲ್ಪಟ್ಟವರಿಗೆ ಇಂದು ಲಸಿಕೆ ಸಿಗೋದೆ ಅನುಮಾನ. ಆರೋಗ್ಯ ಇಲಾಖೆ ಸಿದ್ಧತೆ ಇಲ್ಲದೇ, ವ್ಯಾಕ್ಸಿನ್ ಕೊಡುವ ಗೊಂದಲ ಮೂಡಿಸಿದೆ. ಹೀಗಾಗಿ, ಹಿರಿಯ ನಾಗರಿಕರು, ಅನಾರೋಗ್ಯದಿಂದ ಬಳಲುತ್ತಿರುವವರು ಆಸ್ಪತ್ರೆ ಮುಂದೆ ಕಾದು - ಕಾದು ಸುಸ್ತಾಗಿದ್ದಾರೆ.
ಆಸ್ಪತ್ರೆಗಳಿಗೆ, ಬಿಬಿಎಂಪಿಯಾಗಲಿ ಅಥವಾ ಆರೋಗ್ಯ ಇಲಾಖೆಯಾಗಲಿ ಸರಿಯಾದ ಮಾಹಿತಿ ನೀಡಿಲ್ಲ. ಬೆಳಗ್ಗೆ 7.30ರಿಂದಲೇ ಆಸ್ಪತ್ರೆಯಲ್ಲಿ ವ್ಯಾಕ್ಸಿನ್ ನೋಂದಣಿಗಾಗಿ ಹಿರಿಯ ನಾಗರಿಕರು ಕಾದು ಕುಳಿತ್ತಿದ್ದಾರೆ. ಆದರೆ, ಈವರೆಗೂ ಒಬ್ಬರಿಗೂ ವ್ಯಾಕ್ಸಿನ್ ನೀಡಿಲ್ಲ. ಕೆಲವರು ಆನ್ಲೈನ್ನಲ್ಲಿ ರಿಜಿಸ್ಟರ್ ಮಾಡಿಕೊಂಡು ಬಂದರೂ ವ್ಯಾಕ್ಸಿನ್ ಕೊಡುತ್ತಿಲ್ಲ. ವಾಣಿ ವಿಲಾಸ್, ವಿಕ್ಟೋರಿಯಾ, ಮಲ್ಲಿಗೆ ಆಸ್ಪತ್ರೆಗಳಿಗೆ ಅಲೆದಾಡಿಕೊಂಡು ಬಂದರೂ ಎಲ್ಲಿಯೂ ಸರಿಯಾಗಿ ಮಾಹಿತಿ ಸಿಗುತ್ತಿಲ್ಲ ಎಂದು ವೃದ್ಧರೊಬ್ಬರು ತಿಳಿಸಿದ್ದಾರೆ.
ಓದಿ: ನೋಂದಣಿಗೆ ತಾಂತ್ರಿಕ ಸಮಸ್ಯೆ: ಕೋವಿಡ್ ವ್ಯಾಕ್ಸಿನ್ ವಿತರಣೆ ಬಗ್ಗೆ ಹಿರಿಯ ನಾಗರಿಕರ ಆಕ್ರೋಶ
ಇನ್ನು ಸ್ಮಾರ್ಟ್ ಫೋನ್, ತಂತ್ರಜ್ಞಾನದ ಅರಿವಿಲ್ಲದ ಹಿರಿಯ ನಾಗರಿಕರು ಆಸ್ಪತ್ರೆಗೆ ಬಂದು ನೋಂದಣಿ ಮಾಡಿಕೊಡುವಂತೆ ತಿಳಿಸಿದ್ದಾರೆ. ಆದರೆ, ತಾಂತ್ರಿಕ ದೋಷದ ನೆಪ ಹೇಳುತ್ತಿರುವ ಆಸ್ಪತ್ರೆ ಸಿಬ್ಬಂದಿ, ನೀವೇ ರಿಜಿಸ್ಟರ್ ಮಾಡಿ ಎಂದು ವಾಪಸ್ ಕಳುಹಿಸುತ್ತಿದ್ದಾರೆ. ಇದಕ್ಕೆ ಸರ್ಕಾರದ ವಿರುದ್ದ ಅಸಮಾಧಾನ ವ್ಯಕ್ತಪಡಿಸುತ್ತಿರುವ ಹಿರಿಯ ನಾಗರಿಕರು, ನಮಗೆ ಡಯಾಬಿಟಿಸ್, ಶುಗರ್ ಸೇರಿದಂತೆ ಅನಾರೋಗ್ಯ ಸಮಸ್ಯೆಗಳಿವೆ. ವ್ಯಾಕ್ಸಿನ್ಗಾಗಿ ಬೆಳಗ್ಗೆಯಿಂದ ಕಾಯ್ತಿದ್ದೇವೆ. ನಮ್ಮ ಆರೋಗ್ಯದಲ್ಲಿ ಏರುಪೇರು ಆದರೆ ಯಾರು ಹೊಣೆ ಅಂತಾ ಪ್ರಶ್ನಿಸುತ್ತಿದ್ದಾರೆ.