ಬೆಂಗಳೂರು: ನಾಳೆ ಹಿರಿಯ ನಾಗರಿಕರಿಗೆ, ವಿಶೇಷಚೇತನರಿಗೆ ಸನ್ಮಾನ, ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಇದೆ. ಬೆಳಗ್ಗೆ 10 ಗಂಟೆಗೆ ರವೀಂದ್ರ ಕಲಾಕ್ಷೇತ್ರದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ಮಹಿಳಾ ಮತ್ತು ಮಕ್ಕಳ ಸಬಲೀಕರಣ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದ್ದಾರೆ.
ವಿಕಾಸಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ ಪ್ರತಿಯೊಂದು ಮನೆಯಲ್ಲಿ ನಮ್ಮ ಇಲಾಖೆ ಇದೆ. ಮಕ್ಕಳಿಂದ ವೃದ್ಧರವರೆಗೂ ಈ ಇಲಾಖೆ ಇದೆ. ಎಲ್ಲರಿಗೂ ಸಾಂತ್ವನ ಹೇಳುವ ಇಲಾಖೆ ನಮ್ಮದು. ಈಗಾಗಲೇ 21 ಬಗೆಯ ವೈಕಲ್ಯವನ್ನು ಕೇಂದ್ರ ಸರ್ಕಾರ ಗುರುತಿಸಿದೆ. ಹಿರಿಯ ನಾಗರಿಕರು, ವಿಶೇಷಚೇತನರು, ಶಿಕ್ಷಕರು, ಸಂಘ ಸಂಸ್ಥೆಗಳು ಸಮಾಜಕ್ಕೆ ಸೇವೆ ಮಾಡುತ್ತಿದ್ದಾರೆ. ಅಂತಹ ಸಂಘ ಸಂಸ್ಥೆಗಳನ್ನು ಬೆಂಬಲಿಸುವ, ಪ್ರೋತ್ಸಾಹ ನೀಡುವ ಕೆಲಸ ಮಾಡುತ್ತಿದ್ದೇವೆ ಎಂದರು.
ಒಂದು ಲಕ್ಷ ರೂ. ಪ್ರಶಸ್ತಿ ಬಹುಮಾನ ನೀಡುತ್ತೇವೆ. ಶಿಕ್ಷಣ, ಕಲೆ, ಕ್ರೀಡೆ, ಕಾನೂನು ಸೇರಿದಂತೆ ವಿವಿಧ ಇಲಾಖೆಯಲ್ಲಿ ಸೇವೆ ಮಾಡಿದವರಿಗೆ ಒಟ್ಟು ಏಳು ಲಕ್ಷ ರೂ. ಬಹುಮಾನ ನೀಡುತ್ತೇವೆ. 30 ಶಿಕ್ಷಕರಿಗೆ ಒಟ್ಟು 5 ಲಕ್ಷ ರೂ. ಬಹುಮಾನ. 8 ಎನ್ಜಿಒಗಳಿಗೆ 25 ಸಾವಿರ, 2 ವಿಶೇಷ ಎನ್ಜಿಒಗಳಿಗೆ ಪ್ರಶಸ್ತಿ ಹಾಗೂ 12 ಮಂದಿಗೆ ಒಟ್ಟು 75 ಲಕ್ಷ ರೂ. ಬಹುಮಾನದ ಮೊತ್ತ ಇರುತ್ತದೆ ಎಂದು ತಿಳಿಸಿದರು.
ಸಿಎಂ ಜೊತೆಗೆ ಬಜೆಟ್ ಮೀಟಿಂಗ್ ಇವತ್ತು ಮಾಡಿದ್ದೇವೆ. ಮಹಿಳೆಯರಿಗೆ, ವಿಶೇಷಚೇತನರಿಗೆ ವಿಶೇಷ ಪ್ಯಾಕೇಜ್ ಘೋಷಣೆ ಆಗಬೇಕು ಎಂದು ಚರ್ಚೆ ಮಾಡಿದ್ದೇವೆ. ಸ್ವಸಹಾಯ ಗುಂಪುಗಳಿಗೆ ಅನುಕೂಲ ಆಗುವಂತೆ ಮನವಿ ಮಾಡಿದ್ದೇವೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ 500 ಕೋಟಿ ಹೆಚ್ಚು ಖರ್ಚಿನ ಬಗ್ಗೆ ಮಾಹಿತಿ ನೀಡಿದ್ದೇವೆ. 34 ಕೋಟಿ ರೂ. ವೃದ್ಧರಿಗೆ, ವಿಶೇಷಕಲರಿಗೆ ನೀಡುತ್ತಿರುವ ಬಗ್ಗೆ ಮಾಹಿತಿ ನೀಡಿದ್ದೇವೆ ಎಂದರು.
ಕೋವಿಡ್ ಸಂದರ್ಭದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಫ್ರಂಟ್ ಲೈನ್ ವಾರಿಯರ್ಸ್ ಆಗಿ ಕಾರ್ಯನಿರ್ವಹಿಸಿದ್ದಾರೆ. ಅಂಗನವಾಡಿ ಕಾರ್ಯಕರ್ತರಿಗೆ ರಾಜ್ಯ ಸರ್ಕಾರ ಈಗಾಗಲೇ ಗೌರವಧನ ಹೆಚ್ಚಳ ಮಾಡಿದೆ. ಈ ಬಾರಿ ಬಜೆಟ್‌ನಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಗೌರವಧನಕ್ಕೆ ಸಂಬಂಧಪಟ್ಟಂತೆ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ವಿವರಿಸಿದರು.
ಓದಿ: ಗೋದಾಮಿನಲ್ಲಿ ಅಕ್ರಮ ಸ್ಫೋಟಕ ಪತ್ತೆ ಪ್ರಕರಣದ ತನಿಖೆ ನಡೆಯುತ್ತಿದೆ : ಎಸ್ಪಿ ಹನುಮಂತರಾಯ
ಗರ್ಭಿಣಿಯರಿಗೆ ಮತ್ತು ಬಾಣಂತಿ ಮಹಿಳೆಯರಿಗೆ ಪ್ರತ್ಯೇಕ ಪ್ಯಾಕೇಜ್ ಘೋಷಣೆ ಮಾಡಲು ಸಿಎಂಗೆ ಮನವಿ ಮಾಡಿದ್ದೇವೆ. ಕೇಂದ್ರ ಸರ್ಕಾರ ಹಾಗೂ ಕೋರ್ಟ್ ಆದೇಶದ ಪ್ರಕಾರ ಅಂಗನವಾಡಿ ಶಾಲೆಗಳನ್ನು ಪ್ರಾರಂಭಿಸುವುದು ಅನಿವಾರ್ಯವಾಗಿದೆ. ಆದರೆ ಮೂರು ವರ್ಷದ ಒಳಗಿನ ಮಕ್ಕಳಿಂದ ಮಾರ್ಗಸೂಚಿ ಪಾಲನೆ ಮಾಡೋದು ಕಷ್ಟವಾಗುತ್ತದೆ. ಈ ಸಂಬಂಧ ತಜ್ಞರೊಂದಿಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ವಿವರಿಸಿದರು.