ಬೆಂಗಳೂರು: ಮೈಸೂರಿನಲ್ಲಿ 3,200 ಉದ್ಯೋಗ ಸೃಷ್ಟಿಸುವ 3,750 ಕೋಟಿ ರೂ. ಹೂಡಿಕೆಯ ಅತ್ಯಾಧುನಿಕ ಸೆಮಿಕಂಡಕ್ಟರ್ ತಯಾರಿಕಾ ಘಟಕದ ಸ್ಥಾಪನೆ ಸಂಬಂಧ ಸಿಎಂ ಸಿದ್ದರಾಮಯ್ಯ ಸಮ್ಮುಖದಲ್ಲಿ ಇಂದು (ಗುರುವಾರ) ಸಹಿ ಹಾಕಲಾಗಿದೆ. ಸೆಮಿಕಂಡಕ್ಟರ್ ಅಸೆಂಬ್ಲಿ ಬಿಡಿಭಾಗಗಳನ್ನು ಮತ್ತು ಟೆಸ್ಟಿಂಗ್ ಸೌಲಭ್ಯ, ಪ್ರಿಂಟೆಡ್ ಸರ್ಕಿಟ್ ಬೋರ್ಡ್ ಉತ್ಪಾದನಾ ಘಟಕವನ್ನು ಮೈಸೂರಿನ ಕೋಚನಹಳ್ಳಿಯಲ್ಲಿ ಸ್ಥಾಪಿಸುವ ಕೇನ್ಸ್ ಟೆಕ್ನಾಲಜೀಸ್ ಸಂಸ್ಥೆ ಹಾಗೂ ಕೈಗಾರಿಕಾ ಇಲಾಖೆಯ ನಡುವಿನ ಒಪ್ಪಂದ ಇದಾಗಿದೆ. ಈ ಒಪ್ಪಂದ ರಾಜ್ಯದಲ್ಲಿ ಎಲೆಕ್ಟ್ರಾನಿಕ್ಸ್ ಹಾಗೂ ಸೆಮಿಕಂಡಕ್ಟರ್ ಉತ್ಪಾದನಾ ಅಭಿವೃದ್ಧಿಗೆ ಪೂರಕವಾಗಲಿದೆ ಹಾಗೂ ಉದ್ಯೋಗಾವಕಾಶಗಳು ಹೆಚ್ಚಾಗಲಿವೆ ಎಂದು ಸರ್ಕಾರ ತಿಳಿಸಿದೆ.
ಕೇನ್ಸ್ ಟೆಕ್ನಾಲಜಿಯ ಮೈಸೂರಿನಲ್ಲಿ ಇಎಸ್‌ಡಿಎಂ ಸೆಮಿಕಾನ್ ಪರಿಸರ ವ್ಯವಸ್ಥೆಯ ಪ್ರಮುಖ ನಿರ್ವಹಣಾ ಸಂಸ್ಥೆಯಾಗಿ ಕಾರ್ಯನಿರ್ವಹಿಸಲಿದ್ದು, ಈ ಒಡಂಬಡಿಕೆಯು ಮೈಸೂರು ನಗರವನ್ನು ಜಾಗತಿಕ ನಕ್ಷೆಯಲ್ಲಿ ಗುರುತಿಸಲು ಸಹಾಯ ಮಾಡುತ್ತದೆ. ಕೇನ್ಸ್ ಸೆಮಿಕಾನ್ ಪ್ರೈವೇಟ್ ಲಿಮಿಟೆಡ್ ಸೆಮಿಕಂಡಕ್ಟರ್ ಅಸೆಂಬ್ಲಿ ಮತ್ತು ಟೆಸ್ಟಿಂಗ್ (OSAT) ಸೌಲಭ್ಯದ ಸಂಸ್ಥೆಯಾಗಿದ್ದು, ಬಹು-ಲೇಯರ್ಡ್ ಬೋರ್ಡ್‌ಗಳನ್ನು ಉತ್ಪಾದಿಸಲು ಪ್ರಿಂಟೆಡ್ ಸರ್ಕ್ಯೂಟ್ ಬೋರ್ಡ್ (ಪಿಸಿಬಿ) ತಯಾರಿಕಾ ಘಟಕವಾಗಿ ಕಾರ್ಯ ನಿರ್ವಹಿಸುತ್ತದೆ.
ಈ ಸಂದರ್ಭದಲ್ಲಿ ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಹಾಗೂ ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ, ರಾಜ್ಯದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ, ಕೈಗಾರಿಕಾ ಅಭಿವೃದ್ಧಿ ಆಯುಕ್ತೆ ಗುಂಜನ್ ಕೃಷ್ಣ, ಮಾಹಿತಿ ತಂತ್ರಜಾನ ಇಲಾಖೆ ನಿರ್ದೇಶಕ ದರ್ಶನ್, ಕೇನ್ಸ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಂಜೀವ್ ಹಾಜರಿದ್ದರು.
ಐಬಿಸಿ ಜೊತೆ ಒಪ್ಪಂದ: ಇದೇ ತಿಂಗಳ ಆರಂಭದಲ್ಲಿ ಮರುಬಳಕೆ ಎಲೆಕ್ಟ್ರಿಕ್ ಬ್ಯಾಟರಿ ತಯಾರಿಸುವ ಇಂಟರ್ ನ್ಯಾಷನಲ್ ಬ್ಯಾಟರಿ ಕಂಪನಿಯಲ್ಲಿ (ಐಬಿಸಿ) ರಾಜ್ಯ ಸರ್ಕಾರ 8,000 ಕೋಟಿ ರೂ. ಹೂಡಿಕೆಗೆ ಅವಕಾಶ ಮಾಡಿಕೊಡಲು ಆ.8ರಂದು ಒಡಂಬಡಿಕೆ ಮಾಡಿಕೊಂಡಿತ್ತು. ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಸಮ್ಮುಖದಲ್ಲಿ ಒಪ್ಪಂದಕ್ಕೆ ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್ ಮತ್ತು ಐಬಿಸಿ ಇಂಡಿಯಾ ಪರವಾಗಿ ಅದರ ಭಾರತದ ವ್ಯವಹಾರಗಳ ಮುಖ್ಯಸ್ಥ ವೆಂಕಟೇಶ ವಲ್ಲೂರಿ ಸಹಿ ಹಾಕಿದ್ದರು. ಮರುಬಳಕೆಗೆ ಬರುವಂತಹ ಲಿಥಿಯಾನ್ ಬ್ಯಾಟರಿಗಳ ಉತ್ಪಾದನೆಯನ್ನು ಈ ಕಂಪನಿಯು ಇನ್ನೊಂದು ವರ್ಷದಲ್ಲಿ ರಾಜ್ಯದಲ್ಲಿ ಪ್ರಾರಂಭಿಸಲಿದೆ. ಈ ಉದ್ದೇಶಕ್ಕಾಗಿ ಕಂಪನಿಯ ಕೋರಿಕೆಯಂತೆ ಬೆಂಗಳೂರು ಗ್ರಾಮಾಂತರ ವಲಯದಲ್ಲಿ 100 ಎಕರೆ ಜಮೀನು ಕೊಡಲಿದೆ.
ಇದನ್ನೂ ಓದಿ: ಕೆರೆ ತುಂಬಿಸುವ, ಬ್ಯಾರೇಜ್ ನಿರ್ಮಿಸುವ ಕಾರ್ಯಗಳಿಗೆ ಒತ್ತು ನೀಡಿ: ಅಧಿಕಾರಿಗಳಿಗೆ ಸಚಿವ ಬೋಸರಾಜು ಸೂಚನೆ