ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ ಕೇಂದ್ರ ಭಾಗಗಳಲ್ಲಿ ವಾಹನ ದಟ್ಟಣೆ ನಿಯಂತ್ರಿಸುವ ಉದ್ದೇಶದಿಂದ “ಸ್ಮಾರ್ಟ್ ಪಾರ್ಕಿಂಗ್” ವ್ಯವಸ್ಥೆ ಜಾರಿಗೆ ತರಲಾಗುತ್ತಿದ್ದು, ಮೇಯರ್ ವಿಟ್ಟಲ್ ಮಲ್ಯಾ ರಸ್ತೆಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು. ನಂತರ ಲೌರಿ ಜಂಕ್ಷನ್ನಿಂದ ಸಿಲ್ಕ್ ಬೋರ್ಡ್ ಜಂಕ್ಷನ್ನವರೆಗೆ ನಿರ್ಮಿಸುತ್ತಿರುವ “ಬಸ್ ಪ್ರತ್ಯೇಕ ಪಥ”ವನ್ನು ಪರಿಶೀಲನೆ ನಡೆಸಿದರು.
ನಗರದಲ್ಲಿ ಕೇಂದ್ರ ಭಾಗದ ರಸ್ತೆಗಳಲ್ಲಿ ವಾಹನಗಳನ್ನು ಅಡ್ಡಾದಿಡ್ಡಿ ನಿಲ್ಲಿಸುವುದರಿಂದ ವಾಹನ ದಟ್ಟಣೆ ಹೆಚ್ಚಾಗುತ್ತಿದೆ. ಈ ಸಂಬಂಧ ಪಾಲಿಕೆಯು ಆಯ್ದ 85 ರಸ್ತೆಗಳಲ್ಲಿ ಸ್ಮಾರ್ಟ್ ಪಾರ್ಕಿಂಗ್ ವ್ಯವಸ್ಥೆ ಜಾರಿ ತರಲಾಗುತ್ತಿದೆ.
ಈಗಾಗಲೇ ಕಸ್ತೂರ ಬಾ ರಸ್ತೆಯಲ್ಲಿ ಸ್ಮಾರ್ಟ್ ಪಾರ್ಕಿಂಗ್ ವ್ಯವಸ್ಥೆ ಜಾರಿ ತಂದಿದ್ದು, ಶೀಘ್ರ 7 ರಸ್ತೆಗಳಲ್ಲಿ ಸ್ಮಾರ್ಟ್ ಪಾರ್ಕಿಂಗ್ ವ್ಯವಸ್ಥೆ ಜಾರಿಗೊಳಿಸಲಾಗುವುದು. ಇನ್ನುಳಿದ ರಸ್ತೆಗಳಲ್ಲಿ ಹಂತ-ಹಂತವಾಗಿ ಸ್ಮಾರ್ಟ್ ಪಾರ್ಕಿಂಗ್ ವ್ಯವಸ್ಥೆ ಜಾರಿಗೊಳಿಸಲಾಗುವುದು ಎಂದು ಮೇಯರ್ ಗೌತಮ್ ಕುಮಾರ್ ತಿಳಿಸಿದರು.
ಈಗಾಗಲೇ ಕಸ್ತೂರ ಬಾ ರಸ್ತೆಯಲ್ಲಿ ಸ್ಮಾರ್ಟ್ ಪಾರ್ಕಿಂಗ್‌ಗೆ ಚಾಲನೆ ನೀಡಲಾಗಿದ್ದು, ಸುಮಾರು 700 ಮೀಟರ್ ಉದ್ದದ ರಸ್ತೆಯ ಒಂದು ಭಾಗದಲ್ಲಿ ದ್ವಿಚಕ್ರ ವಾಹನ ಹಾಗೂ ಮತ್ತೊಂದು ಭಾಗದಲ್ಲಿ ಕಾರು ಪಾರ್ಕಿಂಗ್ ಮಾಡಲು ವ್ಯವಸ್ಥೆ ನೀಡಲಾಗಿದೆ.
ಡಿಜಿಟಲ್ ಶುಲ್ಕ ಪಾವತಿಸುವ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದ್ದು, ವಾಹನಗಳ ಸುರಕ್ಷತೆಗಾಗಿ ಸಿ.ಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ವಾಹನಗಳನ್ನು ನಿಲ್ಲಿಸುವ ಸ್ಥಳದಲ್ಲಿ ಸೆನ್ಸಾರ್ ಅಳವಡಿಸಲಾಗಿದ್ದು, ಎಷ್ಟು ವಾಹನಗಳು ನಿಂತಿವೆ, ಇನ್ನೂ ಎಷ್ಟು ವಾಹನಗಳ ನಿಲುಗಡೆಗೆ ಅವಕಾಶವಿದೆ ಎಂಬ ಮಾಹಿತಿ ತಿಳಿಯಲು ಡಿಜಿಟಲ್ ನಾಮಫಲಕ ಅಳವಡಿಸಲಾಗಿದೆ.
ವಾಹನಗಳನ್ನು ಪಾರ್ಕಿಂಗ್ ಮಾಡಲು ದರ ನಿಗದಿಪಡಿಸಿದ್ದು, ಪಾರ್ಕಿಂಗ್ ಶುಲ್ಕ ಹಾಗೂ ರಸೀದಿ ಪಡೆಯಲು ಸ್ವಯಂಚಾಲಿತ ಯಂತ್ರಗಳನ್ನು ಅಳವಡಿಸಲಾಗಿದೆ. ಸವಾರರು ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ನಲ್ಲಿ ಹಣ ಪಾವತಿಸಬಹುದಾಗಿದೆ. ಸ್ಮಾರ್ಟ್ ಪಾರ್ಕಿಂಗ್ ವ್ಯವಸ್ಥೆಯಿಂದ ವಾರ್ಷಿಕ 31.60 ಕೋಟಿ ರೂ. ಪಾಲಿಕೆಗೆ ಆದಾಯ ಬರಲಿದೆ.
ಸ್ಮಾರ್ಟ್ ಪಾರ್ಕಿಂಗ್ ಜಾರಿಯಾಗುವ 7 ರಸ್ತೆಗಳು:
- ವಿಟ್ಟಲ್ ಮಲ್ಯಾ ರಸ್ತೆ
- ವಿಟ್ಟಲ್ ಮಲ್ಯಾ ಆಸ್ಪತ್ರೆ ರಸ್ತೆ
- ಎಂ.ಜಿ.ರಸ್ತೆ
- ಸೈಂಟ್ .ಮಾರ್ಕ್ಸ್ ರಸ್ತೆ
- ಮ್ಯೂಸಿಯಂ ರಸ್ತೆ
- ಚರ್ಚ್ ಸ್ಟ್ರೀಟ್