ಬೆಂಗಳೂರು : ನಾಳೆಯಿಂದ ರಾಜ್ಯ ವಿಧಾನಸಭೆ ಬಜೆಟ್ ಅಧಿವೇಶನ ಆರಂಭಗೊಳ್ಳುತ್ತಿದ್ದರೂ ಸಹ ಈವರೆಗೆ ಉಭಯ ಸದನಗಳ ಪ್ರತಿಪಕ್ಷ ನಾಯಕರ ಆಯ್ಕೆ ಮಾಡಲು ಬಿಜೆಪಿಗೆ ಸಾಧ್ಯವಾಗಿಲ್ಲ. ರಾಜ್ಯ ಘಟಕ ನೂತನ ಪ್ರತಿಪಕ್ಷ ನಾಯಕರ ಆಯ್ಕೆ ಮಾಡಲು ವಿಫಲವಾಗಿದ್ದು, ಇದೀಗ ಆಯ್ಕೆ ಹೈಕಮಾಂಡ್ ಅಂಗಳ ತಲುಪಿದೆ. ಹಾಗಾಗಿ ಪಕ್ಷದ ಹಿರಿಯ ನಾಯಕ ಬಿ ಎಸ್ ಯಡಿಯೂರಪ್ಪ ಹೈಕಮಾಂಡ್ ಭೇಟಿಗಾಗಿ ದೆಹಲಿಗೆ ತೆರಳಿದ್ದು, ಇಂದು ರಾತ್ರಿಯೊಳಗೆ ಆಯ್ಕೆಯನ್ನು ಅಂತಿಮಗೊಳಿಸಲಿದ್ದಾರೆ.
ವಿಧಾನಸಭೆ ಮತ್ತು ವಿಧಾನ ಪರಿಷತ್ ನ ಪ್ರತಿಪಕ್ಷ ನಾಯಕರ ಆಯ್ಕೆ ರಾಜ್ಯ ಬಿಜೆಪಿಗೆ ಕಗ್ಗಂಟಾಗಿದ್ದು, ಒಮ್ಮತದ ಆಯ್ಕೆ ಸಾಧ್ಯವಾಗದ ಹಿನ್ನೆಲೆಯಲ್ಲಿ ಉಭಯ ಸದನಗಳ ಪ್ರತಿಪಕ್ಷ ನಾಯಕರ ಆಯ್ಕೆಯ ಜವಾಬ್ದಾರಿಯನ್ನು ಹೈಕಮಾಂಡ್ ಗೆ ಬಿಟ್ಟಿದೆ. ಹೀಗಾಗಿ ಇಂದು ದೆಹಲಿಗೆ ಯಡಿಯೂರಪ್ಪ ತೆರಳಿದ್ದು, ಪಕ್ಷದ ರಾಷ್ಟ್ರೀಯ ನಾಯಕ ಜೆ ಪಿ ನಡ್ಡಾ ಸೇರಿದಂತೆ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿ ಪ್ರತಿಪಕ್ಷ ನಾಯಕರ ಆಯ್ಕೆ ಕುರಿತು ಸಭೆ ನಡೆಸಲಿದ್ದಾರೆ. ಪಕ್ಷದ ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಹಾಗು ಕೇಂದ್ರ ಚುನಾವಣಾ ಸಮಿತಿ ಸದಸ್ಯರೂ ಆಗಿರುವ ಪಕ್ಷದ ಹಿರಿಯ ನಾಯಕ ಯಡಿಯೂರಪ್ಪ ಅವರನ್ನು ವರಿಷ್ಠರೇ ದೆಹಲಿಗೆ ಕರೆಸಿಕೊಂಡಿದ್ದು ಯಡಿಯೂರಪ್ಪ ಅಭಿಪ್ರಾಯವನ್ನೂ ಪರಿಗಣಿಸಿ ನೂತನ ಪ್ರತಿಪಕ್ಷ ನಾಯಕರ ಆಯ್ಕೆ ಮಾಡಲಾಗುತ್ತದೆ.
ವಿ. ಸೋಮಣ್ಣ, ಬಸನಗೌಡ ಪಾಟೀಲ್ ಯತ್ನಾಳ್, ಆರ್. ಅಶೋಕ್, ಅಶ್ವತ್ಥನಾರಾಯಣ್, ಆರಗ ಜ್ಞಾನೇಂದ್ರ, ಸುನೀಲ್ ಕುಮಾರ್ ಹೀಗೆ ಹಲವಾರು ಹೆಸರುಗಳು ಪ್ರತಿಪಕ್ಷ ನಾಯಕನ ಸ್ಥಾನಕ್ಕೆ ಕೇಳಿಬಂದಿವೆ. ಪರಿಷತ್ ಸ್ಥಾನಕ್ಕೂ ಕೋಟ ಶ್ರೀನಿವಾಸ ಪೂಜಾರಿ ಮತ್ತೊಮ್ಮೆ ಅವಕಾಶದ ನಿರೀಕ್ಷೆಯಲ್ಲಿದ್ದು, ಶಶಿಲ್ ನಮೋಶಿ ಬೇಡಿಕೆ ಇಟ್ಟಿದ್ದಾರೆ. ಇಲ್ಲಿಯೂ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿಯೇ ಇದೆ. ಇದರಿಂದ ಒಮ್ಮತದಿಂದ ಆಯ್ಕೆ ಮಾಡಲು ರಾಜ್ಯ ಘಟಕಕ್ಕೆ ಸಾಧ್ಯವಾಗದ ಹಿನ್ನೆಲೆಯಲ್ಲಿ ಹೈಕಮಾಂಡ್ ಅಂಗಳಕ್ಕೆ ಆಯ್ಕೆ ಜವಾಬ್ದಾರಿಯನ್ನು ವಹಿಸಿದೆ.
ಮುಂಬರಲಿರುವ ಲೋಕಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಲಾಭದಾಯಕವಾಗುವಂತಹ ಸಂಘಟನಾ ಚತುರ ಹಾಗು ವಾಗ್ಮಿಯನ್ನು ಆಯ್ಕೆ ಮಾಡಲು ಹೈಕಮಾಂಡ್ ನಿರ್ಧರಿಸಿದೆ. ದೆಹಲಿಯಲ್ಲಿ ಇಂದು ನಡೆಯಲಿರುವ ಸಭೆಯಲ್ಲಿ ಉಭಯ ಸದನಗಳ ಪ್ರತಿಪಕ್ಷ ನಾಯಕರ ಆಯ್ಕೆ ಅಂತಿಮಗೊಳ್ಳಲಿದ್ದು, ನಾಳೆ ಬೆಳಗ್ಗೆ ಕಲಾಪ ಆರಂಭಕ್ಕೂ ಮುನ್ನ ವಿಧಾನಸಭಾಧ್ಯಕ್ಷರಿಗೆ ಪ್ರತಿಪಕ್ಷ ನಾಯಕನ ಹೆಸರನ್ನು ಕಳುಹಿಸಿಕೊಡಲಿದ್ದಾರೆ. ಅದೇ ರೀತಿ ಪರಿಷತ್ ಪ್ರತಿಪಕ್ಷ ನಾಯಕರ ಹೆಸರನ್ನೂ ಸಭಾಪತಿಗೆ ಕಳುಹಿಸಿಕೊಡಲಿದ್ದಾರೆ.
ಮಹೇಶ್ ಟೆಂಗಿನಕಾಯಿ ಹೇಳಿಕೆ : ಇನ್ನು ವಿಪಕ್ಷ ನಾಯಕನ ಆಯ್ಕೆಯಲ್ಲಿ ಬಿಜೆಪಿಯಲ್ಲಿ ಯಾವುದೇ ಕಗ್ಗಂಟು ಇಲ್ಲ. ಎಲ್ಲರ ಸಹಮತದಿಂದ ನಾಳೆಯೊಳಗೆ ಆಯ್ಕೆ ನಡೆಯಲಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ಶಾಸಕ ಮಹೇಶ್ ಟೆಂಗಿನಕಾಯಿ ಸ್ಪಷ್ಟಪಡಿಸಿದ್ದಾರೆ. ಬಿಜೆಪಿ ಕಚೇರಿಯಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಕಾಂಗ್ರೆಸ್ ಸರಕಾರ ಗ್ಯಾರಂಟಿಗಳ ಅನುಷ್ಠಾನದಲ್ಲಿ ವಿಫಲವಾಗಿದೆ. ಪ್ರತಿಯೊಬ್ಬರಿಗೆ ಅನ್ನಭಾಗ್ಯದಡಿ 10 ಕೆಜಿ ಅಕ್ಕಿ ಕೊಡುವುದಾಗಿ ಹೇಳಿದ್ದರು. ಕೇಂದ್ರ ಸರಕಾರ ಕೊಡುವ 5 ಕೆಜಿ ಅಕ್ಕಿ ಜೊತೆಗೆ ಇನ್ನೈದು ಕೆಜಿಗೆ ಹಣ ನೀಡುತ್ತಿದ್ದಾರೆ. ಇದರಲ್ಲೂ ಮೋಸ ಮಾಡುತ್ತಿದ್ದಾರೆ ಎಂದ ಅವರು, 10 ಪ್ಲಸ್ 5 ಅಂದರೆ 15 ಕೆಜಿ ಅಕ್ಕಿ ಕೊಡುವಂತೆ ಆಗ್ರಹಿಸಿದರು.
ನಿರುದ್ಯೋಗ ಭತ್ಯೆ ಕೊಡಬೇಕಾದವರ ಸಂಖ್ಯೆ ಕಡಿಮೆ ಮಾಡಲು 2022-23ರಲ್ಲಿ ಉತ್ತೀರ್ಣರಾದ ಎಂಬ ಕಂಡಿಷನ್ ಹಾಕಿದ್ದಾರೆ. ಎಲ್ಲ ನಿರುದ್ಯೋಗಿಗಳಿಗೆ ಎಂದು ಆಶ್ವಾಸನೆ ಕೊಟ್ಟಿದ್ದರು. ಅದರಲ್ಲೂ ನ್ಯೂನತೆ ಕಾಣುತ್ತಿದೆ. ವಿದ್ಯುತ್ ವಿಚಾರದಲ್ಲೂ ಹೀಗೇ ಆಗಿದೆ. ಕಾಂಗ್ರೆಸ್ಸಿಗರು ಗ್ಯಾರಂಟಿಗಳನ್ನು ಘೋಷಿಸುವಾಗ ಪಕ್ಷ ಅಧಿಕಾರಕ್ಕೆ ಬಂದರೆ ನೋಡೋಣ ಎಂಬ ಚಿಂತನೆ ಇದ್ದಂತೆ ಕಾಣುತ್ತಿದೆ ಎಂದು ಟೀಕಿಸಿದರು.
ಪ್ರಣಾಳಿಕೆ ವಿಚಾರದಲ್ಲಿ ಮುಂದಾಲೋಚನೆ, ಬ್ಲೂಪ್ರಿಂಟ್ ಇಲ್ಲದೆ ಘೋಷಣೆ ಮಾಡಿದ್ದಾರೆ. ವಿಧಾನಸಭೆಯ ಒಳಗೆ ಮತ್ತು ಹೊರಗೆ ಈ ಸಂಬಂಧ ಹೋರಾಟ ಮಾಡಲಿದ್ದೇವೆ. ಗ್ಯಾರಂಟಿಗಳನ್ನು ಯಥಾವತ್ತಾಗಿ ಜಾರಿ ಮಾಡಲು ಆಗ್ರಹಿಸುತ್ತೇವೆ ಎಂದು ಮಹೇಶ್ ಟೆಂಗಿನಕಾಯಿ ತಿಳಿಸಿದರು.
ಇದನ್ನೂ ಓದಿ : ಕಾಂಗ್ರೆಸ್ ಗ್ಯಾರಂಟಿಗಳ ಅನುಷ್ಠಾನಕ್ಕೆ ಆಗ್ರಹಿಸಿ ಜು.4ರಂದು ಸದನದ ಒಳಗೆ, ಹೊರಗೆ ಹೋರಾಟ: ಬಿ.ಎಸ್.ಯಡಿಯೂರಪ್ಪ