ಬೆಂಗಳೂರು: ನಕಲಿ ಫೇಸ್‌ಬುಕ್ ಖಾತೆ ಸೃಷ್ಟಿಸಿ ಅನಾಮದೇಯರೊಬ್ಬರು ಸೌದಿ ಅರೇಬಿಯಾ ರಾಜ ಮತ್ತು ಇಸ್ಲಾಂನ್ನು ಗುರಿಯಾಗಿಸಿಕೊಂಡು ಆಕ್ಷೇಪಾರ್ಹ ಪೋಸ್ಟ್‌ಗಳನ್ನು ಹಾಕಿದ್ದ ಆರೋಪದಲ್ಲಿ ಸಿಲುಕಿ ದೇಶದ್ರೋಹ ಕಾಯ್ದೆಯಡಿ ಸೌದಿ ಅರೇಬಿಯಾದ ಜೈಲಿನಲ್ಲಿರುವ ಮಂಗಳೂರು ಮೂಲದ ಶೈಲೇಶ್ ಕುಮಾರ್ ಅವರಿಗೆ ಪೂರ್ವಗ್ರಹವಾಗಿ ತೊಂದರೆಯುಂಟಾಗದಂತೆ ರಾಜ ತಾಂತ್ರಿಕ ಮಟ್ಟದ ಚರ್ಚೆ ನಡೆಸುವಂತೆ ವಿದೇಶಾಂಗ ವ್ಯವಹಾರಗಳ ಇಲಾಖೆಗೆ ಹೈಕೋರ್ಟ್ ನಿರ್ದೇಶನ ನೀಡಿದೆ.
ತನ್ನದಲ್ಲದ ತಪ್ಪಿಗೆ ಶಿಕ್ಷೆಗೆ ಗುರಿಯಾಗಿರುವ ಶೈಲೇಶ್ ಕುಮಾರ್ ಪತ್ನಿ ಕವಿತಾ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ನ್ಯಾಯಪೀಠ, ಸಂತ್ರಸ್ತರಿಗೆ ಯಾವುದೇ ತೊಂದರೆಯಾಗದಂತೆ ಕ್ರಮ ವಹಿಸಬೇಕು ಎಂದು ನಿರ್ದೇಶನ ನೀಡಿ ವಿಚಾರಣೆಯನ್ನು ಮುಂದೂಡಿದೆ.
ಕೇಂದ್ರ ಸರ್ಕಾರ ಸಲ್ಲಿಸಿದ್ದ ಪ್ರಮಾಣ ಪತ್ರವನ್ನು ಪರಿಶೀಲಿಸಿದ ನ್ಯಾಯಪೀಠ, ಸರ್ಕಾರಗಳು ಕೇವಲ ಪತ್ರ ವ್ಯವಹಾರ ನಡೆಸಿದರೆ ಸಾಲದು. ನಮ್ಮ ಪೊಲೀಸರು ಸ್ಕಾಟ್ಲೆಂಡ್ ಮತ್ತು ಮೊಸಾದ್ ಪೊಲೀಸರ ಚಾಣಾಕ್ಷಣತೆ ಹಾಗೂ ಕೌಶಲವನ್ನು ಪ್ರದರ್ಶಿಸಬೇಕು. ಇದು ವಿದೇಶಿ ನೆಲದಲ್ಲಿ ಭಾರತೀಯ ಪ್ರಜೆಯೊಬ್ಬರ ಜೀವ ಅಪಾಯದಲ್ಲಿದೆ ಎಂಬುದಕ್ಕೆ ಉದಾಹರಣೆ. ಹೀಗಾದರೆ ನಾಳೆ ವಿದೇಶಗಳಲ್ಲಿ ಇರುವ ಭಾರತೀಯರ ಪರಿಸ್ಥಿತಿ ಏನಾಗಲಿದೆ ಎಂದು ಆತಂಕ ವ್ಯಕ್ತಪಡಿಸಿತು.
ಅಷ್ಟೇ ಅಲ್ಲದೆ, ಪಾಕಿಸ್ತಾನದ ಜೈಲಿನಲ್ಲಿರುವ ಭಾರತದ ಕುಲಭೂಷಣ್ ಜಾದವ್ ಅವರ ಪ್ರಕರಣದಲ್ಲಿ ತೆಗೆದುಕೊಂಡಿರುವ ನಿಲುವನ್ನು ಈಗ ಏಕೆ ಕೈಗೊಳ್ಳುತ್ತಿಲ್ಲ. ಎಲ್ಲ ಪ್ರಯತ್ನ ನಡೆಯುತ್ತಿದೆ ಎಂದು ಹೇಳುತ್ತೀರಿ. ಆದರೆ, ಈ ಕಾರ್ಯ ಸಾಲದಾಗಿದೆ. ಸಂತ್ರಸ್ತರಿಗೆ ಶಿಕ್ಷೆಯಾಗಬಾರದಾಗಿತ್ತು. ಈ ಬಗ್ಗೆ ಯಾಕೆ ಕ್ರಮ ಕೈಗೊಂಡಿಲ್ಲ ಎಂದು ಪೀಠ ಕೇಂದ್ರವನ್ನು ಪ್ರಶ್ನಿಸಿತು. ಅಲ್ಲದೆ, ಈ ನಡೆ ಸರ್ಕಾರದ ಮೇಲೆ ಹೇಗೆ ವಿಶ್ವಾಸವನ್ನು ನಿರ್ಮಿಸಲಿದೆ ಎಂದು ಪ್ರಶ್ನಿಸಿತು.
ಸೌದಿ ಅರೇಬಿಯಾ ಭಾರತದ ನೆಚ್ಚಿನ ವಿದೇಶಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಇಂತಹ ಪ್ರಕರಣಗಳಲ್ಲಿ ವಿಯೆನ್ನಾ ಒಪ್ಪಂದದ ಅನುಸಾರ ನಮ್ಮ ವ್ಯವಹಾರಗಳು ಜರುಗಬೇಕು. ನಮ್ಮ ದೇಶದ ಪ್ರಜೆಯೊಬ್ಬ ವಿದೇಶದಲ್ಲಿ ಅಪಾಯದಲ್ಲಿ ಸಿಲುಕಿದ್ದಾನೆ ಎಂದಾಗ ರಾಜ್ಯದ ಅತ್ಯುನ್ನತ ಕೋರ್ಟ್ ಎನಿಸಿದ ಹೈಕೋರ್ಟ್ ಆ ಕುರಿತು ಕಾಳಜಿ ವಹಿಸಿದೆ ಎಂಬುದು ಅವರ ಗಮನಕ್ಕೂ ಬರಬೇಕು ಎಂದು ಪೀಠ ಅಭಿಪ್ರಾಯಪಟ್ಟಿತು.
ಪ್ರಕರಣದ ಹಿನ್ನೆಲೆ ಏನು ?: ಮಂಗಳೂರಿನ ಬಿಕರ್ನಕಟ್ಟೆಯ ೪೫ ವರ್ಷದ ಜನಾರ್ದನ ಸಾಲಿಯಾನ ಶೈಲೇಶ್ ಕುಮಾರ್ ೨೫ ವರ್ಷಗಳಿಂದ ಸೌದಿ ಅರೇಬಿಯಾದ ಅಲ್ ಕುಬೆರ್ ಎಂಬಲ್ಲಿ ಉದ್ಯೋಗಿಯಾಗಿದ್ದಾರೆ. ಪತ್ನಿ ಮತ್ತು ಮಕ್ಕಳು ಬಿಕರ್ನಕಟ್ಟೆಯಲ್ಲಿ ವಾಸ ಮಾಡುತ್ತಿದ್ದಾರೆ.
ಶೈಲೇಶ್ 2019ರಲ್ಲಿ ಕೇಂದ್ರ ಸರ್ಕಾರ ರೂಪಿಸಿದ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ ಕಾಯ್ದೆ (ಎನ್‌ಆರ್‌ಸಿ) ಬೆಂಬಲಿಸಿ ತಮ್ಮ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದರು. ಇದರಿಂದ ಅವರಿಗೆ ಅನಾಮಿಕರಿಂದ ಬೆದರಿಕೆ ಬಂದಿತ್ತು. ಹಾಗಾಗಿ, ಅವರು ತಮ್ಮ ಫೇಸ್‌ಬುಕ್ ಖಾತೆಯನ್ನು ರದ್ದುಪಡಿಸಿದ್ದರು.
ಈ ನಡುವೆ ಶೈಲೇಶ್ ಕುಮಾರ್ ಹೆಸರಿನಲ್ಲಿ 2020ರ ಫೆಬ್ರುವರಿಯಲ್ಲಿ ಅನಾಮಧೇಯ ವ್ಯಕ್ತಿಗಳು ನಕಲಿ ಫೇಸ್‌ಬುಕ್ ಖಾತೆ ತೆರೆದು ಸೌದಿ ಅರೇಬಿಯಾದ ದೊರೆ, ಅವರ ಧರ್ಮದ ಹೆಸರಿನಲ್ಲಿ ಅವಹೇಳನಕಾರಿ ಪೋಸ್ಟ್ ಮಾಡಿದ್ದರು. ಇದು ತಮ್ಮ ಗಮನಕ್ಕೆ ಬಂದಕೂಡಲೇ ಶೈಲೇಶ್ ತಮ್ಮ ಸ್ನೇಹಿತರಿಗೆ ಮತ್ತು ಮಂಗಳೂರಿನ ಸಂಬಂಧಿಕರಿಗೆ ತಿಳಿಸಿದ್ದರು.
ಇದೇ ವೇಳೆ ಸೌದಿ ಪೊಲೀಸರು ಶೈಲೇಶ್ ಅವರನ್ನು ಬಂಧಿಸಿದ್ದರು. ಈ ಕುರಿತಂತೆ ಮಂಗಳೂರಿನಲ್ಲಿ ಪತ್ನಿ ಕವಿತಾ ದೂರು ದಾಖಲಿಸಿದ್ದರು. ತನಿಖೆ ಕೈಗೆತ್ತಿಕೊಂಡಿದ್ದ ಮಂಗಳೂರು ಪೊಲೀಸರು, ಮೆಟಾ(ಫೇಸ್‌ಬುಕ್) ಸಂಸ್ಥೆಗೆ ಪತ್ರ ಬರೆದು, ಶೈಲೇಶ್ ಹೆಸರಿನಲ್ಲಿ ನಕಲಿ ಖಾತೆ ತೆರೆದವರ ಮಾಹಿತಿ ನೀಡುವಂತೆ ಕೋರಿದ್ದರು. ಅಂತೆಯೇ, ''ನಿರಪರಾಧಿಯಾದ ನನ್ನ ಗಂಡನನ್ನು ಸೌದಿ ಜೈಲಿನಿಂದ ಬಿಡಿಸಲು ಕ್ರಮ ಜರುಗಿಸಿ'' ಎಂದು ಕೋರಿ ಕೇಂದ್ರ ಸರ್ಕಾರಕ್ಕೂ ಮನವಿ ಸಲ್ಲಿಸಿದ್ದರು. ಈ ಮನವಿ ಫಲ ನೀಡದ ಕಾರಣ ಅವರು, ''ಪೊಲೀಸರು ನಿಧಾನಗತಿಯಲ್ಲಿ ತನಿಖೆ ನಡೆಸುತ್ತಿದ್ದಾರೆ'' ಎಂದು ಆಕ್ಷೇಪಿಸಿ 2021ರಲ್ಲಿ ಹೈಕೋರ್ಟ್ ಮೆಟ್ಟಿಲೇರಿದ್ದರು.
ಇದನ್ನೂ ಓದಿ: Shakti scheme: ವಾಯವ್ಯ ಸಾರಿಗೆಯಲ್ಲಿ 2 ಕೋಟಿ ಗಡಿ ತಲುಪಿದ ಮಹಿಳಾ 'ಶಕ್ತಿ' ಸಂಚಾರ: ಟಿಕೆಟ್ ಮೌಲ್ಯ ಎಷ್ಟು ಗೊತ್ತಾ?