ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಎರಡನೇ ಅಲೆ ಸದ್ದು ಮಾಡಿದ ರೀತಿಗೆ ಶೈಕ್ಷಣಿಕ ಕ್ಷೇತ್ರವೇ ಉಲ್ಟಾಪಲ್ಟಾ ಆಗಿದೆ. ಪ್ರಸ್ತುತ ವರ್ಷದಲ್ಲಿ ನಡೆಯಬೇಕಿದ್ದ ದ್ವಿತೀಯ ಪಿಯುಸಿ ಪರೀಕ್ಷೆ ರದ್ದು ಮಾಡಿರುವ ಪದವಿ ಪೂರ್ವ ಶಿಕ್ಷಣ ಇಲಾಖೆ ಈಗ ಫಲಿತಾಂಶ ಪ್ರಕಟಣೆ ಮಾಡುವ ತಯಾರಿಯಲ್ಲಿದೆ.
ರಾಜ್ಯಾದ್ಯಂತ ಸುಮಾರು 6.5 ಲಕ್ಷಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಬೇಕಿತ್ತು. ಆದರೆ, ಇದೀಗ ಅವರಿಗೆಲ್ಲ ಗ್ರೇಡಿಂಗ್ ಬದಲು, ಅಂಕಗಳ ಆಧಾರದ ಮೇಲೆ ಫಲಿತಾಂಶ ಪ್ರಕಟವಾಗಲಿದೆ. ಆದರೆ, ಹೀಗೇ ಪರೀಕ್ಷೆ ಕೈಬಿಟ್ಟಿರುವುದರಿಂದ ಪರೀಕ್ಷೆಗೆ ಕಟ್ಟಿದ ಶುಲ್ಕವನ್ನ ಇಲಾಖೆ ವಾಪಸ್ ಮಾಡುತ್ತಾ ಇಲ್ವಾ ಎಂಬ ಪ್ರಶ್ನೆ ಎದುರಾಗಿದೆ.
ಈ ಕುರಿತು ಮಾಹಿತಿ ಹಂಚಿಕೊಂಡಿರುವ ಪಿಯು ಬೋರ್ಡ್ ನಿರ್ದೇಶಕಿ ಸ್ನೇಹಲ್, ಪರೀಕ್ಷಾ ಶುಲ್ಕ ಮರು ಪಾವತಿಗೆ ಯಾರಾದರೂ ಪತ್ರದ ಮೂಲಕ ಕೋರಿದರೆ, ಇದನ್ನ ಸರ್ಕಾರದ ಗಮನಕ್ಕೆ ತರಲಾಗುವುದು. ಶುಲ್ಕ ಮರುಪಾವತಿಯ ಕುರಿತು ಸರ್ಕಾರಕ್ಕೆ ಪತ್ರ ಬರೆದು, ನಂತರ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಈ ಹಿಂದೆಯೇ ಪೋಷಕರ ಸಮನ್ವಯ ಸಮಿತಿಯ ಸದಸ್ಯರು, ಶುಲ್ಕ ಮರುಪಾವತಿಸಿ ಎಂದು ಮನವಿ ಮಾಡಿದ್ದರು. ಪರೀಕ್ಷೆ ಇಲ್ಲದ ಮೇಲೆ ಶುಲ್ಕ ಮರು ಪಾವತಿಸಬೇಕು. ಪರೀಕ್ಷಾ ಶುಲ್ಕ 11 ಕೋಟಿಗೂ ಹೆಚ್ಚು ಸಂಗ್ರಹವಾಗಿದ್ದು, ಮಾಹಿತಿ ಪ್ರಕಾರ ಸಾಮಾನ್ಯ ವಿದ್ಯಾರ್ಥಿಗಳಿಂದ ತಲಾ 190 ರೂ. ಮತ್ತು ಪರಿಶಿಷ್ಟ ಜಾತಿ/ಪಂಗಡದ ವಿದ್ಯಾರ್ಥಿಗಳಿಂದ 50 ರೂ. ಪಡೆಯಲಾಗಿದೆ. ಶುಲ್ಕ ದೊಡ್ಡ ಮೊತ್ತದ್ದು ಅಲ್ಲದೇ ಇದ್ರೂ, 6 ಲಕ್ಷಕ್ಕೂ ಹೆಚ್ಚು ಮಕ್ಕಳ ಜೊತೆಗೆ ಲೆಕ್ಕ ಹಾಕಿದರೆ 11 ಕೋಟಿ ರೂ. ಸಂಗ್ರಹವಾಗುತ್ತೆ. ಹೀಗಾಗಿ, ವಾಪಸ್ ಮಾಡಬೇಕೆಂದು ಹೇಳಿದರು.
ಇತ್ತ ಪಿಯು ಫಲಿತಾಂಶವನ್ನ ಎಸ್ಎಸ್ಎಲ್ಸಿ, ಪ್ರಥಮ ಪಿಯುಸಿ ಹಾಗೂ ಶೈಕ್ಷಣಿಕ ಸಾಲಿನ ಆಧಾರದ ಮೇಲೆ ಅಂಕಗಳನ್ನ ನೀಡಿ ಫಲಿತಾಂಶ ನೀಡಲಾಗುತ್ತಿದೆ. ಒಂದು ವೇಳೆ ವಿದ್ಯಾರ್ಥಿ ಈ ಫಲಿತಾಂಶ ನಿರಾಕರಿಸಿ ಪರೀಕ್ಷೆ ಬರೆಯುವ ಇಂಗಿತ ವ್ಯಕ್ತಪಡಿಸಿದ್ದರೆ, ಆ ಅವಕಾಶವು ಇದೆ.
ಹೀಗಾಗಿ, ವಿದ್ಯಾರ್ಥಿಗಳ ಪರೀಕ್ಷಾ ಶುಲ್ಕ ಸರ್ಕಾರಕ್ಕೆ ನೇರವಾಗಿ ಹೋಗುವುದರಿಂದ ಅದನ್ನ ಸರ್ಕಾರವೇ ತೀರ್ಮಾನ ಕೈಗೊಳ್ಳಲಿದೆ. ಒಂದು ವೇಳೆ ಪರೀಕ್ಷೆ ಬರೆಯದೇ ಇರುವ ಮಕ್ಕಳಿಗೆ ಶುಲ್ಕ ಮರುಪಾವತಿ ಕುರಿತು ಸರ್ಕಾರ ಮಟ್ಟದಲ್ಲೇ ಚರ್ಚೆಯಾಗಬೇಕಿದೆ ಎಂದು ಮೂಲಗಳು ತಿಳಿಸಿವೆ.