ಬೆಂಗಳೂರು: ಫೋನ್ ಟ್ಯಾಪಿಂಗ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಹಿರಿಯ ಪೊಲೀಸ್ ಅಧಿಕಾರಿ ಅಲೋಕ್ ಕುಮಾರ್ ನಿವಾಸ , ಕಚೇರಿಯಲ್ಲಿ ಹೈದ್ರಾಬಾದ್‌ನಿಂದ ಆಗಮಿಸಿದ ಸಿಬಿಐ ಹಿರಿಯ ಅಧಿಕಾರಿಗಳ ತಂಡ ಪರಿಶೀಲನೆ ನಡೆಸುತ್ತಿದೆ.
ನೃಪತುಂಗ ರಸ್ತೆಯಲ್ಲಿರುವ ಡಿಜಿ ಮತ್ತು ಐಜಿಪಿ ಕಚೇರಿಯಲ್ಲಿ ಬೀಡುಬಿಟ್ಟಿರುವ ಕೇಂದ್ರ ತನಿಖಾ ತಂಡದ ಅಧಿಕಾರಿಗಳು ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ. ಸದ್ಯ ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ಕೆಎಸ್ಆರ್‌ಪಿ ಎಡಿಜಿಪಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಸಿಬಿಐ ಅಧಿಕಾರಿಗಳ ಪರಿಶೀಲನೆ ಹಿನ್ನೆಲೆಯಲ್ಲಿ ಡಿಜಿ ಮತ್ತು ಐಜಿಪಿ ಕಚೇರಿಗೆ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದ್ದು ಪ್ರತಿಯೊಬ್ಬರನ್ನೂ ತಪಾಸಣೆ ನಡೆಸಿ ಕಚೇರಿಯೊಳಗೆ ಬಿಡಲಾಗುತ್ತಿದೆ.
ಪೆನ್ಡ್ರೈವ್ಗಾಗಿ ಹುಡುಕಾಟ:
ಸಿಬಿಐ ಮೂಲಗಳ ಪ್ರಕಾರ, ದೂರವಾಣಿ ಕದ್ದಾಲಿಕೆ ಆಡಿಯೋ ಲೀಕ್ ಮಾಡಲಾಗಿದ್ದ ಪೆನ್ಡ್ರೈವ್ಗಾಗಿ ಅಧಿಕಾರಿಗಳು ತೀವ್ರ ಹುಡುಕಾಟ ನಡೆಸುತ್ತಿದ್ದಾರೆ ಎನ್ನಲಾಗಿದೆ. ಆಡುಗೋಡಿ ಸಿಸಿಬಿ ಟೆಕ್ನಿಕಲ್ ಸೆಲ್‌ನಿಂದ ಆಡಿಯೋ ಕಾಪಿ ಮಾಡಿದ್ದ ಪೆನ್ಡ್ರೈವ್ನ್ನು ಸಿಸಿಬಿ ಇನ್ಸ್ಪೆಕ್ಟರ್ ಮಿರ್ಜಾ ಅಲಿ ಆ ಸಂದರ್ಭದಲ್ಲಿ ನಗರ ಪೊಲೀಸ್ ಆಯುಕ್ತರಾಗಿದ್ದ ಅಲೋಕ್ ಕುಮಾರ್ ಅವರಿಗೆ ಕೊಟ್ಟಿದ್ದರು. ಹೀಗಾಗಿ ನಿನ್ನೆ ಸಿಬಿಐ ಕೋರ್ಟ್ನಲ್ಲಿ ಸರ್ಚ್ ವಾರೆಂಟ್ ಪಡೆದು ಪ್ರಕರಣದ ತನಿಖಾಧಿಕಾರಿ ಎಸ್.ಪಿ. ಕಿರಣ್ ಕುಮಾರ್ ನೇತೃತ್ವದ ಮತ್ತೊಂದು ಟೀಂ ದಾಳಿ ಮುಂದುವರೆಸಿದೆ.
ಅಲೋಕ್‌ಗೆ ಪ್ರಶ್ನೆಗಳ ಸುರಿಮಳೆ:
ಫೋನ್ ಟ್ಯಾಪಿಂಗ್ ವಿಚಾರವಾಗಿ ಸಿಬಿಐ ಅಧಿಕಾರಿಗಳು ಅಲೋಕ್ ಕುಮಾರ್ ಅವರಿಗೆ ಸಾಕಷ್ಟು ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಅಲೋಕ್ ತಂಗಿದ್ದ ಮನೆಯ ಎರಡನೇ ಮಹಡಿಯನ್ನು ಲಾಕ್ ಮಾಡಿದ್ದು ಮನೆಯವರನ್ನು ಹೊರಗೆ ಬಿಡದೆ, ಮೊಬೈಲ್ ಫೋನ್ ಬಳಸದಂತೆ ನಿರ್ಬಂಧ ವಿಧಿಸಲಾಗಿದೆ.