ಬೆಂಗಳೂರು : ರಾಜ್ಯದ ಯಾವ ಯಾವ ಭಾಗಗಳಲ್ಲಿ ಅವೈಜ್ಞಾನಿವಕಾಗಿ ರಸ್ತೆ ಉಬ್ಬುಗಳನ್ನು ( ರೋಡ್ ಹಂಪ್ ) ಹಾಕಿದ್ದರೋ ಅದನ್ನು ತಕ್ಷಣವೇ ತೆರವುಗೊಳಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು ಎಂದು ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್ ವಿಧಾನಸಭೆಯಲ್ಲಿ ಇಂದು ತಿಳಿಸಿದರು.
ಪ್ರಶ್ನೋತ್ತರ ವೇಳೆ ಶಾಸಕ ಕುಮಾರ್ ಬಂಗಾರಪ್ಪ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಅವೈಜ್ಞಾನಿಕ ರಸ್ತೆ ಉಬ್ಬುಗಳನ್ನು ತೆಗೆದು ಹಾಕಬೇಕೆಂದು ಅನೇಕ ಕಡೆ ಮನವಿ ಬಂದಿದೆ. ಹೀಗಾಗಿ ಈಗಾಗಲೇ ಅಧಿಕಾರಿಗಳ ಜೊತೆ ಚರ್ಚಿಸಿ ತೆರವುಗೊಳಿಸಲು ಸೂಚನೆ ನೀಡಲಾಗಿದೆ ಎಂದರು.
ಒಂದು ವೇಳೆ ರಸ್ತೆ ಉಬ್ಬುಗಳನ್ನು ತೆರವುಗೊಳಿಸುವಾಗ ಯಾರಾದರೂ ಅಡ್ಡಿಪಡಿಸಿದರೆ ಪೊಲೀಸರ ಸಹಕಾರ ಪಡೆಯಲು ಸಹ ಸೂಚನೆ ನೀಡಲಾಗಿದೆ. ಪ್ರಯಾಣಿಕರ ಸುಗಮ ಸಂಚಾರಕ್ಕೆ ಸರ್ಕಾರ ಅಗತ್ಯವಾದ ಕ್ರಮಗಳನ್ನು ತೆಗೆದುಕೊಳ್ಳಲಿದೆ ಎಂದು ಆಶ್ವಾಸನೆ ನೀಡಿದರು.
ಇದಕ್ಕೂ ಮುನ್ನ ಮಾತನಾಡಿದ ಶಾಸಕ ಕುಮಾರ್ ಬಂಗಾರಪ್ಪ ಅವರು ರಸ್ತೆಗಳನ್ನು ಇಂಡಿಯನ್ ಸ್ಟ್ಯಾಂಡರ್ಡ್ ಕಾಂಗ್ರೆಸ್ ರೀತಿಯಲ್ಲಿ ನಿರ್ಮಾಣ ಮಾಡಬೇಕೆಂದು ಸಲಹೆ ಮಾಡಿದರು. ನಾನು ಅವರ ಸಲಹೆಯನ್ನು ಸಂಪೂರ್ಣವಾಗಿ ಒಪ್ಪುತ್ತೇನೆ. ಶಾಸಕರನ್ನು ಸಭೆಗೆ ಆಹ್ವಾನಿಸಿ ಮಾಹಿತಿ ಪಡೆಯುತ್ತೇನೆ ಅಧಿಕಾರಿಗಳಿಗೆ ಅನುಷ್ಠಾನ ಮಾಡಲು ಸೂಚನೆ ನೀಡಲಾಗುವುದು ಎಂದು ಸಚಿವರು ಹೇಳಿದರು.
ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕು ಹಾಗೂ ತಾಳಗೊಪ್ಪ ಹೋಬಳಿ ಸೇರಿದಂತೆ 53.60 ಕಿ.ಮೀ ಉದ್ದಕ್ಕೆ ಒಂದು ರಸ್ತೆಯನ್ನು ರಾಜ್ಯ ಹೆದ್ದಾರಿಯನ್ನಾಗಿ ಮೇಲ್ದರ್ಜೆಗೇರಿಸಲಾಗಿದೆ. ಜೊತೆಗೆ 99.90 ಕಿ.ಮೀ ಉದ್ದದ ರಸ್ತೆಯನ್ನು ಮೇಲ್ದರ್ಜೆಗೇರಿಸಲಾಗಿದೆ ಎಂದು ಸಚಿವ ಸಿ.ಸಿ.ಪಾಟೀಲ್ ತಿಳಿಸಿದರು.
ಶೀಘ್ರ ಸರ್ವರ್ಗಳ ದುರಸ್ತಿ: ಸಚಿವ ಅಶೋಕ್
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ ದುರಸ್ತಿಯಲ್ಲಿರುವ ಸರ್ವರ್‌ಗಳನ್ನು ಶೀಘ್ರದಲ್ಲೇ ರಿಪೇರಿ ಮಾಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡುವುದಾಗಿ ಕಂದಾಯ ಸಚಿವ ಆರ್. ಅಶೋಕ್ ವಿಧಾನಸಭೆಯಲ್ಲಿ ಬಿಜೆಪಿ ಶಾಸಕ ಕುಮಾರಸ್ವಾಮಿ.ಎಂ.ಪಿ ಅವರ ಪ್ರಶ್ನೆಗೆ ಉತ್ತರಿಸಿದರು.
ಕೆಲವು ತಾಂತ್ರಿಕ ಕಾರಣಗಳಿಂದ ಮೂಡಿಗೆರೆಯಲ್ಲಿ ಸರ್ವರ್‌ಗಳು ಕೆಟ್ಟು ಹೋಗಿರುವುದು ಗಮನಕ್ಕೆ ಬಂದಿದೆ. ಇದರಿಂದ ರೈತರಿಗೆ ತೊಂದರೆಯಾಗಿದೆ. ಶೀಘ್ರದಲ್ಲೇ ಇದನ್ನು ದುರಸ್ತಿಗೊಳಿಸಿ ಸಾರ್ವಜನಿಕರ ಸೇವೆಗೆ ಅನುವು ಮಾಡಿಕೊಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡುವುದಾಗಿ ಹೇಳಿದರು.
ಕಳೆದ ಜುಲೈನಿಂದ ನವೆಂಬರ್ 21ರ ಅವಧಿಯಲ್ಲಿ ಚಿಕ್ಕಮಗಳೂರು ಮೂಡಿಗೆರೆಯಲ್ಲಿ ಅತಿವೃಷ್ಟಿಯಿಂದ ಹಾನಿಗೊಳಗಾದ ಬೆಳೆಗಳಿಗೆ ಸರ್ಕಾರ ಅಗತ್ಯವಾದ ಪರಿಹಾರ ನೀಡಿದೆ. ಜಿಲ್ಲೆಯಲ್ಲಿ 67,688 ಹೆಕ್ಟೇರ್ ಬೆಳೆ ಹಾನಿಯಾಗಿತ್ತು. ಮಳೆಯಾಶ್ರಿತ ಪ್ರತಿ ಹೆಕ್ಟೇರ್ ಬೆಳೆಗೆ 6800 ಬದಲಿಗೆ 13,600 ರೂ. ನೀರಾವರಿಯ ಪ್ರತಿ ಹೆಕ್ಟೇರ್ ಬೆಳೆಗೆ 25 ಸಾವಿರ, ಬಹುವಾರ್ಷಿಕ ಬೆಳೆಯ ಒಂದು ಹೆಕ್ಟೇರ್ಗೆ 28 ಸಾವಿರ ಸೇರಿದಂತೆ ಚಿಕ್ಕಮಗಳೂರು ಜಿಲ್ಲೆಗೆ 1,100 ಕೋಟಿ ಪರಿಹಾರವನ್ನು ನೀಡಿದ್ದೇವೆ ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ: ಆಂಧ್ರದ ಶ್ರೀಶೈಲಂನ ಕರ್ನಾಟಕ ಭವನ ನಿರ್ಮಾಣಕ್ಕಾಗಿ ಹೆಚ್ಚಿನ ಅನುದಾನಕ್ಕೆ ಮನವಿ: ಸಚಿವೆ ಶಶಿಕಲಾ ಜೊಲ್ಲೆ