ರಾಯಚೂರು/ಮಂಡ್ಯ/ಕೊಪ್ಪಳ: ರಾಜ್ಯಾದ್ಯಂತ ಇಂದಿನಿಂದ 6 ರಿಂದ 8ನೇ ತರಗತಿ ಶಾಲಾರಂಭಗೊಂಡಿದೆ. ಒಂದೂವರೆ ವರ್ಷಗಳ ನಂತರ ವಿದ್ಯಾರ್ಥಿಗಳು ಸಂತಸದಿಂದ ಶಾಲೆಯತ್ತ ಹೆಜ್ಜೆ ಹಾಕಿದರು.
ಶಾಲಾರಂಭದ ಕಾರಣ ಶನಿವಾರವೇ ಶಾಲಾ ಕೊಠಡಿಗಳಿಗೆ ಸ್ಯಾನಿಟೈಸ್ ಮಾಡಿ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳಲಾಗಿತ್ತು.
ರಾಯಚೂರು ಜಿಲ್ಲೆಯಾದ್ಯಂತ ಇಂದು ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ತರಗತಿ ಆರಂಭಿಸಲಾಗಿದೆ. ನಗರದ ಶಾಸಕರ ಸರಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಮೌಲಾನಾ ಆಜಾದ್ ಮಾದರಿ ಶಾಲೆಯನ್ನು ತೋರಣ, ಬಲೂನ್ಗಳಿಂದ ಅಲಂಕರಿಸಿ ವಿದ್ಯಾರ್ಥಿಗಳಿಗೆ ಶಿಕ್ಷಕರು ಹೂಗುಚ್ಚ ನೀಡಿ ಸ್ವಾಗತ ಕೊರಿದರು.
ಮಂಡ್ಯ ಜಿಲ್ಲೆಯಲ್ಲೂ ಶಾಲೆಗಳು ಆರಂಭವಾಗಿದೆ. ವಿದ್ಯಾರ್ಥಿಗಳಿಗೆ ಹೂ ಹಾಗೂ ಸಿಹಿ ನೀಡಿ ಶಾಲೆಗೆ ಬರಮಾಡಿಕೊಳ್ಳಲಾಗಿದೆ. ಆಗಸ್ಟ್ 23ರಿಂದ 9 ರಿಂದ 12ನೇ ತರಗತಿಯವರೆಗೆ ಶಾಲಾ-ಕಾಲೇಜುಗಳು ಶುರುವಾಗಿದ್ದವು. ಒಂದು ವಾರದ ಪರಿಸ್ಥಿತಿಯ ಅನುಭವವನ್ನು ತಿಳಿದು ಇದೀಗ ತರಗತಿಗಳಿಗೆ ಚಾಲನೆ ನೀಡಲಾಗಿದೆ.
ಕೊಪ್ಪಳ ಜಿಲ್ಲೆಯಲ್ಲೂ ಇಂದಿನಿಂದ ಶಾಲೆಗಳು ಆರಂಭಗೊಂಡಿವೆ. ವಿದ್ಯಾರ್ಥಿಗಳು ಖುಷಿಯಿಂದಲೇ ಶಾಲೆಗೆ ಬಂದಿದ್ದಾರೆ. ನಗರದ ವಿವಿಧ ಶಾಲೆಗಳಲ್ಲಿ ಬೆಳಗ್ಗೆಯಿಂದಲೇ ಸಿಬ್ಬಂದಿ ಶಾಲಾ ಆವರಣ, ತರಗತಿಗಳನ್ನು ಸ್ವಚ್ಛತೆ ಸೇರಿದಂತೆ ತರಗತಿ ಆರಂಭಕ್ಕೆ ಸಿದ್ದತೆ ಮಾಡಿಕೊಂಡಿದ್ದರು.
ಇದನ್ನೂ ಓದಿ: ಇಂದಿನಿಂದ ಪ್ರಾಥಮಿಕ ಶಾಲೆಗಳ ಪುನಾರಂಭ.. ಎಚ್ಚರ ತಪ್ಪದಿರಿ ಎಂದು ವಿದ್ಯಾರ್ಥಿಗಳಿಗೆ ಸಿಎಂ ಸಲಹೆ