ಬೆಂಗಳೂರು : ರಾಜಧಾನಿಯಲ್ಲಿ ಕೊರೊನಾ ಕೇಸ್ಗಳು ಏರಿಕೆಯಾದ ಹಿನ್ನೆಲೆಯಲ್ಲಿ 10,11 ಹಾಗೂ 12ನೇ ತರಗತಿ ಹೊರತು ಪಡಿಸಿ ಉಳಿದೆಲ್ಲ ಶಾಲಾ-ಕಾಲೇಜುಗಳಲ್ಲಿ ಭೌತಿಕ ತರಗತಿಯನ್ನು ಬಂದ್ ಮಾಡಲಾಗಿತ್ತು. ಇದೀಗ ತಾಂತ್ರಿಕ ಸಲಹಾ ಸಮಿತಿ ಶಾಲೆಗಳ ಆರಂಭಕ್ಕೆ ಸಮ್ಮತಿ ಸೂಚಿಸಿರುವ ಹಿನ್ನೆಲೆಯಲ್ಲಿ ಸೋಮವಾರದಿಂದ ಬೆಂಗಳೂರಿನಲ್ಲಿ 1-9ನೇ ತರಗತಿಗಳು ಪುನಾರಂಭಗೊಳ್ಳಲಿವೆ.
ಶಾಲೆಗಳನ್ನು ಪುನಾರಂಭ ಮಾಡುವಂತೆ ಖಾಸಗಿ ಸಂಘಟನೆಗಳು ಸಾಕಷ್ಟು ಒತ್ತಾಯ ಮಾಡಿದ್ದವು. ಈ ನಿಟ್ಟಿನಲ್ಲಿ ಶಾಲಾ-ಕಾಲೇಜುಗಳಲ್ಲಿ ಕೊರೊನಾ ಹರಡುವ ವಾತಾವರಣ ಇರುವುದಿಲ್ಲ ಎಂದು ಪರಿಗಣಿಸಿ, ಮಕ್ಕಳ ನಿರಂತರ ಕಲಿಕೆಗೆ ಅನುವು ಮಾಡಿಕೊಂಡಿವೆ. ಇದಕ್ಕೆ ಕ್ಯಾಮ್ಸ್ ಸಂಘಟನೆ, ರೂಪ್ಸಾ ಸಂಘದ ಸದಸ್ಯರು ಸ್ವಾಗತ ಕೋರಿದ್ದಾರೆ.
ಈ ಕುರಿತು ಮಾತನಾಡಿರುವ ಕ್ಯಾಮ್ಸ್ ಕಾರ್ಯದರ್ಶಿ ಶಶಿಕುಮಾರ್, ಈಗಾಗಲೇ ಶಾಲಾ-ಕಾಲೇಜು ಆರಂಭವಾಗಿವೆ. ಬೆಂಗಳೂರಿನಲ್ಲಿ ಶಾಲೆಗಳನ್ನು ಮುಚ್ಚಲಾಗಿತ್ತು. ಇದೀಗ ತೆರೆಯಲು ಸರ್ಕಾರ ಅನುಮತಿ ಕೊಟ್ಟಿದೆ. ಇದು ಸ್ವಾಗತಾರ್ಹ ಬೆಳವಣಿಗೆ, ಮಕ್ಕಳ ನಿರಂತರ ಕಲಿಕೆಗೆ ಇದು ಅನುಕೂಲವಾಗಲಿದೆ. ಎಲ್ಲಾ ಶೈಕ್ಷಣಿಕ ಸಂಸ್ಥೆಗಳು ವಿಶೇಷ ಕಾಳಜಿಯೊಂದಿಗೆ ಕೋವಿಡ್ ನಿಯಮವನ್ನು ಅನುಸರಿಸಬೇಕಾಗುತ್ತದೆ. ಕಠಿಣ ಎಸ್‌ಒಪಿಯನ್ನು ಜಾರಿ ಮಾಡಿ ಮಕ್ಕಳ ಸುರಕ್ಷತೆ ಕಾಪಾಡಿಕೊಳ್ಳಬೇಕು ಎಂದರು.
ರೂಪ್ಸಾ ಸಂಘದ ಅಧ್ಯಕ್ಷ ತಾಳಿಕಟ್ಟೆ ಮಾತನಾಡಿ, ಶಾಲೆಗಳ ಪುನಾರಂಭಕ್ಕೆ ಅವಕಾಶ ನೀಡಿರುವುದು ಬಹಳ ಸಂತಸ ತಂದಿದೆ. ಮೂರು ವಾರದಿಂದ ಸರ್ಕಾರಕ್ಕೆ ಸಾಕಷ್ಟು ಮನವಿ ಮಾಡಲಾಗಿತ್ತು. ಎಲ್ಲಿ ಕೊರೊನಾ ಬರುತ್ತೋ ಆ ಶಾಲೆಯನ್ನ ಬಂದ್ ಮಾಡುವಂತೆ ತಿಳಿಸಲಾಗಿತ್ತು. ಪರೀಕ್ಷೆಯು ಹತ್ತಿರ ಇರುವುದರಿಂದ ಇದು ಮಕ್ಕಳ ಮೇಲೆ ಪರಿಣಾಮ ಬೀರಲಿದೆ.
ಸದ್ಯ ಸರ್ಕಾರಕ್ಕೆ ವಾಸ್ತವ ಅರ್ಥವಾಗಿದೆ. ಶಾಲೆಗಳ ಆರಂಭಕ್ಕೆ ಅನುಮತಿ ಕೊಟ್ಟಿರುವುದು ಒಳ್ಳೆಯ ಬೆಳವಣಿಗೆ. ಶಾಲೆಗಳು ಕೋವಿಡ್ ಪ್ರಸರಣ ಕೇಂದ್ರವಲ್ಲ ಎಂಬುದು ಸಾಬೀತಾಗಿದೆ. ಹೀಗಾಗಿ, ವಿದ್ಯಾರ್ಥಿಗಳ ಶೈಕ್ಷಣಿಕ ದೃಷ್ಟಿಯಿಂದ ಶಾಲೆಗಳ ಆರಂಭ ಮುಖ್ಯ ಎಂದರು.
ಇದನ್ನೂ ಓದಿ: ಜ.31ರಿಂದ ನೈಟ್ ಕರ್ಫ್ಯೂ ತೆರವು, ಶಾಲೆ ಆರಂಭಿಸಲು ತೀರ್ಮಾನ: ಸಚಿವ ಆರ್.ಅಶೋಕ್
ಆಸ್ಪತ್ರೆಗೆ ದಾಖಲಾಗುವವರ ಪ್ರಮಾಣ ಹೇಗಿದೆ? : ರಾಜ್ಯದಲ್ಲಿ ಸದ್ಯ ನಿತ್ಯ 30 ಸಾವಿರಕ್ಕೂ ಹೆಚ್ಚು ಪಾಸಿಟಿವ್ ಕೇಸ್ ದೃಢಪಡ್ತಿವೆ. ಒಟ್ಟಾರೆ ಆ್ಯಕ್ಟೀವ್ ಕೇಸ್ 2,88,767ರಷ್ಟಿದೆ. ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಕಡಿಮೆ ಇದೆ. ಹೀಗಾಗಿ, ಸರ್ಕಾರವೂ ನಿರ್ಬಂಧಿಸಿದ್ದ ಹಲವು ಕ್ರಮಕ್ಕೆ ಅನ್‌ಲಾಕ್ ಮಾಡಿದೆ. ನಿನ್ನೆ ಮಾಹಿತಿ ಪ್ರಕಾರ ರಾಜ್ಯದಲ್ಲಿ ಆಸ್ಪತ್ರೆಗೆ ಸಾಮಾನ್ಯ ಬೆಡ್ನಲ್ಲಿ ಶೇ.1.24% ಹಾಗೂ ಆಕ್ಸಿಜನ್ ಬೆಡ್ನಲ್ಲಿ ಶೇ. 0.42% ಸೋಂಕಿತರು ದಾಖಲಾಗಿದ್ದಾರೆ. ಐಸಿಯು ಹಾಗೂ ವೆಂಟಿಲೇಟರ್ನಲ್ಲಿ 0.24%ರಷ್ಟು ಸೋಂಕಿತರಿದ್ದಾರೆ.
ಆಸ್ಪತ್ರೆ ಬೆಡ್- ಸರ್ಕಾರಿ- ಖಾಸಗಿ-ಒಟ್ಟು
ಜನರೆಲ್ ಬೆಡ್- 1797- 1782-3579
ಆಕ್ಸಿಜನ್/ ಹೆಚ್ಡಿಯು- 1148-66-1214
ಐಸಿಯು ಬೆಡ್- 327-186-513
ಐಸಿಯು- ವೆಂಟಿಲೇಟರ್- 158-13-171
ರಾಜ್ಯದಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ 3430, ಖಾಸಗಿ ಆಸ್ಪತ್ರೆಯಲ್ಲಿ 2047 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಒಟ್ಟಾರೆ 5477 ಸೋಂಕಿತರು ಆಸ್ಪತ್ರೆಗೆ ದಾಖಲು ಆಗುತ್ತಿದ್ದಾರೆ. ಸದ್ಯ ಆಸ್ಪತ್ರೆಯ ದಾಖಲಾತಿ ಕಡಿಮೆ ಇರುವುದರಿಂದ ಕೋವಿಡ್ ನಿರ್ಬಂಧದಲ್ಲಿ ಸಡಿಲಿಕೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಪರಿಸ್ಥಿತಿ ನೋಡಿಕೊಂಡು ಸರ್ಕಾರ ಕಟ್ಟುನಿಟ್ಟಿನ ಕ್ರಮ ಜಾರಿ ಮಾಡಲಿದೆ.
ಇಲ್ಲೊಮ್ಮೆ ನೋಡಿ: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ