ಬೆಂಗಳೂರು: ಸರ್ಕಾರಿ ಶಾಲೆಗೆ ಕಳೆದ 20 ವರ್ಷಗಳಿಂದ ಮಕ್ಕಳು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಆದ್ರೆ ದಿಢೀರ್ ಅಂತ ರಾತ್ರೋರಾತ್ರಿ ಆ ರಸ್ತೆಗೆ ಗೋಡೆ ಕಟ್ಟಿ ಮಕ್ಕಳು ಮತ್ತು ಶಿಕ್ಷಕರು ಶಾಲೆಗೆ ಹೊಗಲು ಅಗದೇ ಕಂಗಾಲಾದ ಘಟನೆ ನಡೆದಿದೆ.
ಕೆಆರ್ ಪುರ ವಿಧಾನಸಭಾ ಕ್ಷೇತ್ರದ ವಿಜ್ಞಾನ ನಗರ ಸರ್ಕಾರಿ ಶಾಲೆಗೆ ಹೋಗುವ ರಸ್ತೆಯಲ್ಲಿ ಕೆಲವರು ರಾತ್ರೋರಾತ್ರಿ ಗೋಡೆ ನಿರ್ಮಿಸಿ ಮಕ್ಕಳು, ಶಿಕ್ಷಕರು ಒಳಗಡೆ ಹೋಗದಂತೆ ತಡೆಯಲಾಗಿತ್ತು. ಗೋಡೆ ನಿರ್ಮಾಣದಿಂದ ಶಾಲಾ ಆವರಣ ಅನೈತಿಕ ತಾಣವಾಗಿ ನಿರ್ಮಾಣವಾಗಿತ್ತು. ಮದ್ಯದ ಬಾಟಲಿಗಳು, ಸಿಗರೇಟ್ ಸೇರಿದಂತೆ ಹಲವು ವಸ್ತುಗಳು ಬಿದ್ದಿದ್ದವು.
ಇಂದು ಬೆಳಗ್ಗೆ ಕರುನಾಡ ರೈತ ಸಂಘಟನೆಯವರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ಕಂಡು ಮಕ್ಕಳಿಗೆ ಓಡಡಾಲು ರಸ್ತೆ ಬೇಕೆ ಬೇಕು ಎಂದು ಪ್ರತಿಭಟನೆ ಮಾಡಿ, ಶಾಲೆಗೆ ಹೋಗಲು ದಾರಿ ಮಾಡಿಕೊಡಬೇಕೆಂದು ಅಧಿಕಾರಿಗಳು ಮತ್ತು ಸ್ಥಳೀಯ ಮುಖಂಡರಲ್ಲಿ ಮನವಿ ಮಾಡಿದರು.
ಇನ್ನು ಸರ್ಕಾರಿ ಶಾಲೆ ರಸ್ತೆಗೆ ಗೋಡೆ ನಿರ್ಮಾಣದ ಮಾಹಿತಿ ತಿಳಿದು ಬಿಇಒ ಹನುಮಂತರಾಯಪ್ಪ ಅವರು ತಹಶೀಲ್ದಾರ್ ಅಜಿತ್ ರೈ ಅವರ ಗಮನಕ್ಕೆ ತಂದು, ಅಜಿತ್ ರೈ ಅವರು ಸ್ಥಳಕ್ಕೆ ಆಗಮಿಸಿ ಗೋಡೆ ನಿರ್ಮಿಸಿಕೊಂಡಿದ್ದ ಭೂ ಮಾಲೀಕರೊಂದಿಗೆ ಮಾತುಕತೆ ನಡೆಸಿ ಗೋಡೆ ತೆರವುಗೊಳಿಸುವಂತೆ ಸೂಚಿಸಿದರು.
ಇನ್ನು 15 ದಿನಗಳ ಒಳಗೆ ಅಕ್ರಮವಾಗಿ ನಿರ್ಮಿಸಿರುವ ಮತ್ತು ರಾಜಕಾಲುವೆಯ ಜಾಗವನ್ನು ಬಿಟ್ಟುಕೊಡುವಂತೆ ಬಿಲ್ಡರ್ಸ್ಗಳಿಗೆ ತಿಳಿಸಿದರು. ಹದಿನೈದು ದಿನಗಳವರೆಗೆ ಶಾಲೆಗೆ ಹೋಗಲು ದಾರಿಯನ್ನು ಬಿಡುವಂತೆ ಜಮೀನಿನ ಮಾಲೀಕ ಶ್ರೀನಿವಾಸ್ ಮತ್ತು ಅವರ ಸಹೋದರನ ಬಳಿ ಮನವಿ ಮಾಡಿ ಶಾಲೆಗೆ ಹೋಗಲು ಅನುವು ಮಾಡಿಕೊಟ್ಟರು. ಅದರಂತೆಯೇ ಪಾಲಿಕೆ ಮಾಜಿ ಸದಸ್ಯ ಎಸ್.ಜಿ.ನಾಗರಾಜ್ ಹಾಗೂ ಕರುನಾಡ ರೈತ ಸಂಘದ ರಾಜ್ಯಾಧ್ಯಕ್ಷ ಮೆಹಬೂಬ್ ಗೋಡೆಯನ್ನು ಗಡಾರಿ ಮೂಲಕ ಒಡೆದು ತೆರವುಗೊಳಿಸಿದರು.
ಸದ್ಯಕ್ಕೆ ತಹಶೀಲ್ದಾರ್ ಅಜಿತ್ ರೈ ಅವರ ಮಧ್ಯಸ್ಥಿಕೆಯಿಂದ ಸರ್ಕಾರಿ ಶಾಲೆಗೆ ತಾತ್ಕಾಲಿಕ ರಸ್ತೆ ದೊರಕಿದ್ದು, ಮುಂದಿನ ದಿನಗಳಲ್ಲಿ ಈ ಶಾಲೆಗೆ ಶಾಶ್ವತ ರಸ್ತೆ ಸಿಗುತ್ತದೆಯೋ ಎಂಬುದನ್ನು ಕಾದು ನೋಡಬೇಕಿದೆ. ಕೆಲವು ಬಿಲ್ಡರ್ಗಳು ರಾಜಕಾಲುವೆ ಒತ್ತುವರಿ ಮಾಡಿರುವುದು ಕಂಡು ಬಂದಿದ್ದು, ಸರ್ವೆ ಮಾಡಿ ಸರ್ಕಾರಿ ಜಾಗವನ್ನು ಬಿಟ್ಟುಕೊಡುವಂತೆ ಖಡಕ್ಕಾಗಿ ತಿಳಿಸಿದ್ದಾರೆ. ಮುಂದಿನ ತಿಂಗಳ ಒಳಗೆ ಶಾಲೆಗೆ ರಸ್ತೆಯನ್ನು ನಿರ್ಮಿಸಿಕೊಡುವುದಾಗಿ ಬಿಇಒ ಅಧಿಕಾರಿಗಳಿಗೆ ಮತ್ತು ಶಿಕ್ಷಕರಿಗೆ ಭರವಸೆ ನೀಡಿದ್ದಾರೆ.