ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕಿನ ಮೊದಲ ಹಾಗೂ 2ನೇ ಅಲೆಯ ಹೊಡೆತಕ್ಕೆ ಸಿಲುಕಿದ ಖಾಸಗಿ ಶಾಲೆಗಳು ಇದೀಗ ಮೂರನೇ ಅಲೆಯ ಜೊತೆ ನಾಲ್ಕನೇ ಅಲೆಯ ಪ್ರಭಾವವನ್ನೂ ಎದುರಿಸುವಂತಾಗಿದೆ. ದೇಶಾದ್ಯಂತ ಕೋವಿಡ್ ನಾಲ್ಕನೇ ಅಲೆ ಮತ್ತೆ ಶುರುವಾಗಿದ್ದು ದೆಹಲಿ, ತಮಿಳುನಾಡು ಸೇರಿದಂತೆ ಕರ್ನಾಟಕದಲ್ಲೂ ಸೋಂಕಿನ ಸಂಖ್ಯೆ ಹೆಚ್ಚಾಗ್ತಿದೆ.
ಈಗಾಗಲೇ ನಾಲ್ಕನೇ ಅಲೆಯ ಕುರಿತು ಆರೋಗ್ಯ ಇಲಾಖೆ ಜನರಿಗೆ ಎಚ್ಚರಿಕೆ ನೀಡುತ್ತಿದ್ದಂತೆ ಇತ್ತ ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಸೇರಿಸಲು ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ಖಾಸಗಿ ಶಾಲೆಗಳಿಗೆ ಭಾರಿ ಹೊಡೆತ ಬಿದ್ದಿದೆ. 2022-23ನೇ ಸಾಲಿನ ಶೈಕ್ಷಣಿಕ ಸಾಲಿಗೆ ಮಕ್ಕಳು ದಾಖಲಾಗ್ತಿಲ್ಲ ಎಂದು ಖಾಸಗಿ ಶಾಲೆಗಳ ಸಂಘಟನೆಗಳು ಅಳಲು ತೋಡಿಕೊಂಡಿವೆ.
ಈ ಕುರಿತು ಮಾತನಾಡಿರುವ ಕ್ಯಾಮ್ಸ್ ಕಾರ್ಯದರ್ಶಿ ಶಶಿಕುಮಾರ್, ಕೋವಿಡ್ ಕೊಟ್ಟ ಹೊಡೆತದಿಂದ ಶಾಲೆಗಳು ಈಗಷ್ಟೇ ಚೇತರಿಸಿಕೊಳ್ಳುತ್ತಿದ್ದವು. ಈ ವರ್ಷದ ದಾಖಲಾತಿಗಳು ಇನ್ನೂ ಶುರುವಾಗಿಲ್ಲ. ಅದಾಗಲೇ ನಾಲ್ಕನೇ ಅಲೆಯನ್ನ ಮುಂದಿಟ್ಟು ಪೋಷಕರು ಚಿಂತೆಗೆ ಒಳಗಾಗಿದ್ದಾರೆ. ಇದರ ಪರಿಣಾಮ ಶಾಲಾ ದಾಖಲಾತಿ ಮಾಡಬೇಕಾ? ಪಠ್ಯಪುಸ್ತಕ ಖರೀದಿಸಬೇಕಾ, ಸಮವಸ್ತ್ರ ತಗೋಬೇಕಾ ಬೇಡ್ವಾ ಎಂಬ ಮನಸ್ಥಿತಿಯಲ್ಲಿ ಇದ್ದಾರೆ. ಪರಿಣಾಮ ಮಕ್ಕಳ ನಿರಂತರ ಕಲಿಕೆಗೂ ತೊಂದರೆ ಉಂಟಾಗುತ್ತಿದೆ.
ಇಂತಹ ಸಂದರ್ಭದಲ್ಲಿ ಪೋಷಕರು ಈ ರೀತಿಯ ಆಲೋಚನೆ ಮಾಡುವುದು ಸರಿಯಲ್ಲ. ಕೊರೊನಾದ ಎಲ್ಲ ಅಲೆಯಲ್ಲೂ ಮಕ್ಕಳಿಗೆ ಯಾವುದೇ ತೊಂದರೆ ಆಗಿಲ್ಲ. ನಾಲ್ಕನೇ ಅಲೆಯು ಮಕ್ಕಳಿಗೆ ಏನು ಹೆಚ್ಚು ಕಡಿಮೆ ಆಗೋದಿಲ್ಲ. ಮಕ್ಕಳನ್ನು ಶಿಕ್ಷಣದಿಂದ ವಂಚನೆ ಮಾಡದೇ ಇರುವ ರೀತಿಯಲ್ಲಿ ಸರ್ಕಾರ ಹಾಗೂ ಸಂಸ್ಥೆಗಳು ನಿರ್ಧಾರ ತೆಗೆದುಕೊಳ್ಳಬೇಕು ಎಂದು ತಿಳಿಸಿದರು.
ಕರ್ನಾಟಕದಲ್ಲಿ ಒಟ್ಟು 19 ಸಾವಿರಕ್ಕೂ ಹೆಚ್ಚು ಖಾಸಗಿ ಶಾಲೆಗಳು ಅನುದಾನರಹಿತ ಶಾಲೆಗಳಿವೆ. ಭಾಗಶಃ ಶಾಲೆಗಳು ವಾರ್ಷಿಕ ಶುಲ್ಕ ಸಂಗ್ರಹ ಮಾಡಲಿವೆ. ಇದೀಗ ಕೊರೊನಾ ಭೀತಿಯಿಂದಾಗಿ ಶಾಲೆಗಳಲ್ಲಿ ಪ್ರವೇಶಾತಿ ಕಡಿಮೆ ಆಗ್ತಿದೆ. ಇತ್ತ ಕೊರೊನಾ ಕಾಣಿಸಿಕೊಂಡ ದಿನದಿಂದ ಅರ್ಧಕರ್ಧ ಶಾಲೆಗಳಲ್ಲಿ ಆನ್ಲೈನ್ ಪಾಠವೇ ಮುಂದುವರೆದಿದೆ.
ಪೋಷಕರು ಭೌತಿಕ ತರಗತಿಗಳಿಗೆ ಹಿಂದೇಟು ಹಾಕುತ್ತಿರುವುದರಿಂದ ಆನ್ಲೈನ್ ಆಫ್ಲೈನ್ ಎರಡಕ್ಕೂ ಅವಕಾಶ ಕಲ್ಪಿಸಲಾಗಿದೆ. ಹೀಗಾಗಿ, ಬಹುತೇಕ ಪೋಷಕರು ಆನ್ಲೈನ್ ಕ್ಲಾಸ್ ಮೊರೆ ಹೋಗುತ್ತಿದ್ದಾರೆ. ಈ ಕಾರಣದಿಂದ ಸಮವಸ್ತ್ರ, ಇತರೆ ಪಠ್ಯೇತರ ಚಟುವಟಿಕೆಗಳಿಗೆ ಶುಲ್ಕ ಕಟ್ಟಲು ನಿರಾಕರಿಸುತ್ತಿದ್ದಾರೆ. ಈ ಮಧ್ಯೆ ನಾಲ್ಕನೇ ಅಲೆ ಭೀತಿಗೆ ಒಳಗಾಗಿರುವ ಪೋಷಕರು ಶಾಲೆಗಳ ದಾಖಲಾತಿ ಮಾಡಿಸಲು ಮುಂದಾಗುತ್ತಿಲ್ಲ. ಇದು ಸದ್ಯ ಖಾಸಗಿ ಶಾಲೆಗಳ ನಿದ್ದೆಗೆಡಿಸಿದೆ.
ಇದನ್ನೂ ಓದಿ: ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ: ಎಸ್‌ಡಿಪಿಐ ಮುಖಂಡನಿಗೆ ಜಾಮೀನು ನಿರಾಕರಿಸಿದ ಹೈಕೋರ್ಟ್