ಬೆಂಗಳೂರು: ಬೆಂಗಳೂರು ಮೈಸೂರು ಎಕ್ಸ್ಪ್ರೆಸ್ ಹೆದ್ದಾರಿ ಕಾಮಗಾರಿಯಲ್ಲಿ ದೊಡ್ಡ ಹಗರಣವೇ ನಡೆದಿದ್ದು, ಇದರ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಮಾಗಡಿ ಕ್ಷೇತ್ರದ ಜೆಡಿಎಸ್ ಶಾಸಕ ಎ. ಮಂಜುನಾಥ್ ಆಗ್ರಹಿಸಿದ್ದಾರೆ. ಪಕ್ಷದ ಕಚೇರಿ ಜೆಪಿ ಭವನದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭೂ ಪರಿಹಾರ ಹಾಗೂ ಹೆದ್ದಾರಿ ಅವ್ಯವಹಾರದ ಬಗ್ಗೆ ಇಡಿ ಹಾಗೂ ಸಿಬಿಐ ತನಿಖೆಯಾಗಬೇಕು.
ಈ ಸಂಬಂಧ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಮಾಜಿ ಸಚಿವ ಹೆಚ್.ಡಿ.ರೇವಣ್ಣ ನೇತೃತ್ವದಲ್ಲಿ ಶಾಸಕರ ನಿಯೋಗ ಸೆಪ್ಟೆಂಬರ್ 7 ರಂದು ದೆಹಲಿಗೆ ತೆರಳಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿ ಚರ್ಚಿಸಲಾಗುವುದು. ಗಡ್ಕರಿ ಅವರ ಸಮಯಾವಕಾಶ ಕೇಳಲಾಗಿದೆ ಎಂದು ಹೇಳಿದರು.
ಮಳೆಯಿಂದಾಗಿ ಹೆದ್ದಾರಿ ಹಾನಿಯಾಗಿದೆ. ಇಡೀ ರಸ್ತೆ ಉದ್ದಕ್ಕೂ ಮಳೆಯಿಂದ ನೀರು ತುಂಬಿದೆ. ಆ ಭಾಗದ ರೈತರು, ಜನರಿಗೆ ಅನಾನುಕೂಲವಾಗಿದೆ. ನಾನು ಆ ಭಾಗದ ಜನಪ್ರತಿನಿಧಿಯಾಗಿದ್ದೇನೆ. ನಾವು ಕಳೆದ ನಾಲ್ಕು ವರ್ಷಗಳ ಹಿಂದೆ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಎಚ್ಚರಿಸಿದ್ದೆವು. ಅವರ ದುರ್ನಡತೆಯಿಂದಾಗಿ ಈ ಸ್ಥಿತಿ ತಲುಪಿದೆ ಎಂದು ಹೆದ್ದಾರಿ ಕಾಮಗಾರಿ ಬಗ್ಗೆ ಮಂಜುನಾಥ್ ಆಕ್ರೋಶ ವ್ಯಕ್ತಪಡಿಸಿದರು.
ಭೂಸ್ವಾಧೀನ ಪರಿಹಾರದಲ್ಲೂ ಲೋಪ: ಭೂಸ್ವಾಧೀನ ವೇಳೆ ರೈತರ ಮನವೊಲಿಸಿದ್ದೆವು. ಭೂ ಪರಿಹಾರ ಕೊಡಿಸುತ್ತೇವೆ ಎಂದು ಮನವಿ ಮಾಡಿದ್ದೆವು. ಎಲ್ಲರ ಸಹಕಾರವನ್ನು ಪಡೆದಿದ್ದೆವು. ಭೂ ಸ್ವಾಧೀನ ಪರಿಹಾರದಲ್ಲೂ ಲೋಪವಾಯ್ತು. ಹೆದ್ದಾರಿ ಪ್ರಾಧಿಕಾರಕ್ಕೆ ಗಮನಕ್ಕೆ ತಂದ್ರೂ ಪರಿಹಾರ ಆಗಲಿಲ್ಲ. ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಶ್ರೀಧರ್ ಎಂಬ ವ್ಯಕ್ತಿಯಿಂದ ಹೀಗಾಗಿದೆ ಎಂದು ಆರೋಪಿಸಿದರು.
ಸಂಸದ ಪ್ರತಾಪ್ ಸಿಂಹ ವಿರುದ್ಧ ಆಕ್ರೋಶ: ರಸ್ತೆ ಆದರೆ ಒಳ್ಳೆಯದು ಎಂಬ ಕಾರಣಕ್ಕೆ ಸುಮ್ಮನಿದ್ದೆವು. ರಸ್ತೆ ನಾವೇ ಮಾಡಿರೋದು ಅಂತ ಸಂಸದ ಪ್ರತಾಪ್ ಸಿಂಹ ಫೋಸ್ ಕೊಡ್ತಿದ್ರು. ನಾನು ಪ್ರತಾಪ್ ಸಿಂಹ ಅವರನ್ನು ಕೇಳಲು ಬಯಸುತ್ತೇನೆ. ನೀವು ಯಾರಿಗೆ ಬ್ರಾಂಡ್ ಅಂಬಾಸಿಡರ್ ಹೇಳಿ, ಹೆದ್ದಾರಿ ಮಾಡುವ ಸಂಸ್ಥೆಯವರಿಗಾ? ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅವೈಜ್ಞಾನಿಕವಾಗಿ ಹೆದ್ದಾರಿ ರಸ್ತೆ ನಿರ್ಮಾಣ ಮಾಡಲಾಗಿದೆ. ರಸ್ತೆಯಲ್ಲಿ ಪ್ರಯಾಣಿಕರು ಓಡಾಡುವುದಕ್ಕೂ ಆಗುತ್ತಿಲ್ಲ. ಬಿಡದಿಗೆ ರಸ್ತೆ ಓಪನ್ ಬಿಟ್ಟಿಲ್ಲ. 119 ಕಿ.ಮೀ ರಸ್ತೆಯಲ್ಲಿ ಇಂಟರ್ ಜಂಕ್ಷನ್ ಇಲ್ಲ. ಪ್ರಯಾಣಿಕರಿಗೆ ಟೀ ಕುಡಿಯಲು ವ್ಯವಸ್ಥೆ ಇಲ್ಲ. ಪೆಟ್ರೋಲ್ ಹಾಕಿಸಿಕೊಳ್ಳುವ ವ್ಯವಸ್ಥೆಯೂ ಇಲ್ಲ. ಬೇರೆ ಎಕ್ಸ್ ಪ್ರೆಸ್ ಹೈವೇಗಳನ್ನು ಇದೇ ರೀತಿ ಮಾಡಿದ್ದಾರಾ?, ಅಪಘಾತವಾದರೆ ಟ್ರಾಮಾ ಸೆಂಟರ್ ಮಾಡಿಲ್ಲ. ಸಾರ್ವಜನಿಕರಿಗೆ ಇದರಿಂದ ಏನು ಲಾಭ ಹೇಳಿ. ನಾವೆಲ್ಲ ಶಾಸಕರು ಬರುತ್ತೇವೆ. ಬನ್ನಿ ರಸ್ತೆ ನೋಡಿ ಎಂದು ಪ್ರತಾಪ್ ಸಿಂಹ ಅವರನ್ನು ಆಹ್ವಾನಿಸಿದರು.
ರಸ್ತೆಯಲ್ಲಿ ಕೂರುತ್ತೇವೆ: ಹೆದ್ದಾರಿಯಲ್ಲಿ ಕ್ರಾಸಿಂಗ್ ಕೊಟ್ಟಿಲ್ಲ. ನಮ್ಮ ಜನ ಎತ್ತಿನ ಗಾಡಿ ಎಲ್ಲಿಂದ ಓಡಿಸಬೇಕು. ಟ್ರ್ಯಾಕ್ಟರ್ಗಳನ್ನ ಎಲ್ಲಿ ಕ್ರಾಸ್ ಮಾಡಬೇಕು. 50 ಕಡೆ ಕ್ರಾಸಿಂಗ್ ಇವೆ, ಅಲ್ಲಿ ನೀರು ತುಂಬಿವೆ. ಬನ್ನಿ ಎಲ್ಲಿ ಮಿಸ್ಟೇಕ್ ಇದೆ ತೋರಿಸ್ತೇವೆ. ರೈತರಿಗೆ ಬರಬೇಕಾದ ಭೂ ಪರಿಹಾರ ಕೊಡಿಸಿ. ಭೂ ಪರಿಹಾರ ಕೊಡದೇ ಇದ್ದರೆ ರಸ್ತೆಯಲ್ಲೇ ಕೂರುತ್ತೇವೆ. ಯಾವುದೇ ಕಾರಣಕ್ಕೂ ಸುಮ್ಮನೆ ಬಿಡಲ್ಲ ಎಂದು ಎಚ್ಚರಿಸಿದರು. ಒಂದು ಕಿಮೀಗೆ 80 ಕೋಟಿ ರೂ. ಖರ್ಚು ಮಾಡಲಾಗಿದೆ. ಇದಲ್ಲದೆ ಇನ್ನೂ ಹೆಚ್ಚಿನ ಹಣ ಖರ್ಚು ಮಾಡಬೇಕು. ನಮ್ಮ ಬಗ್ಗೆ ಮಾತನಾಡಬೇಕಾದ್ರೆ ಎಚ್ಚರಿಕೆ ಇರಲಿ ಎಂದು ಪ್ರತಾಪ್ ಸಿಂಹ ಅವರಿಗೆ ತಿರುಗೇಟು ನೀಡಿದರು.
ಹೆದ್ದಾರಿ ಯೋಜನೆಯಲ್ಲಿ ಸುಮಾರು 800 ಕೋಟಿ ರೂ. ಲೂಟಿಯಾಗಿದೆ. ಯೋಜನಾ ನಿರ್ದೇಶಕ ಶ್ರೀಧರ್ ಹೊಡೆದ ಹಣವನ್ನು ಪ್ರತಾಪ್ ಸಿಂಹ ಅವರಿಗೆ ತುಂಬಿರಬಹುದು. ಅದಕ್ಕೆ ಅವರ ಪರವಾಗಿ ಸಂಸದರು ನಿಂತಿದ್ದಾರೆ ಎಂದು ಶಾಸಕ ಮಂಜುನಾಥ್ ಆರೋಪ ಮಾಡಿದರು.