ಬೆಂಗಳೂರು: ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳು (ಶಿಕ್ಷಣ ಮತ್ತು ನೇಮಕಾತಿಗಳಲ್ಲಿ ಮೀಸಲಾತಿ) ಕಾಯ್ದೆ 2023ರ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯ ಸಂಬಂಧ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ. ಬೆಂಗಳೂರಿನಲ್ಲಿ ಕಾನೂನು ಪದವಿ ಅಧ್ಯಯನ ಮಾಡುತ್ತಿರುವ ಕಲಬುರ್ಗಿ ಮೂಲದ ಮಹೇಶ್ ಎಂಬುವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಅಶೋಕ್ ಎಸ್ ಕಿಣಗಿ ಅವರಿಂದ ನ್ಯಾಯಪೀಠ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿ ವಿಚಾರಣೆ ಮುಂದೂಡಿದೆ.
ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿಗೆ ವಿರುದ್ಧ: ವಿಚಾರಣೆ ವೇಳೆ, ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ಮೀಸಲಾತಿ ಹೆಚ್ಚಳ ಮಾಡಿರುವ ಕ್ರಮ ಸಂವಿಧಾನದ ಪರಿಚ್ಛೇದ 14, 15 ಮತ್ತು 16ರ ಉಲ್ಲಂಘಿಸಿದಂತಾಗಿದೆ. ಅಲ್ಲದೇ ಇಂದಿರಾ ಸಹಾನಿ ಪ್ರಕರಣದಲ್ಲಿ ಶೇ. 50ರಷ್ಟು ಮೀಸಲಾತಿ ಮೀರಬಾರದು ಎಂದು ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿಗೆ ತದ್ವಿರುದ್ಧವಾಗಿದೆ.
ಇದನ್ನೂ ಓದಿ: ಉಪ ಲೋಕಾಯುಕ್ತ-2 ಭರ್ತಿ ಮಾಡದ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದ ಹೈಕೋರ್ಟ್
ಸರ್ಕಾರದ ಮೀಸಲಾತಿ ಹೆಚ್ಚಳ ಕ್ರಮ ಸಂವಿಧಾನ ಬಾಹಿರ : ಆದರೂ ನಿಯಮಬಾಹಿರವಾಗಿ ಪರಿಶಿಷ್ಟ ಜಾತಿಯವರಿಗೆ 15 ರಿಂದ 17 ಪರಿಶಿಷ್ಟ ಪಂಗಡದವರಿಗೆ ಮೂರರಿಂದ ಏಳು ಮೀಸಲಾತಿ ಹೆಚ್ಚಳ ಮಾಡಲಾಗಿದೆ. ಮತ್ತು ಹಿಂದುಳಿದ ವರ್ಗಗಳಿಗೆ ಶೇಕಡಾ 32 ರಷ್ಟು ಮೀಸಲಾತಿ ಇದೆ. ಸರ್ಕಾರದ ಈ ನಿಯಮ ಶೇ. 50ರಷ್ಟು ಮಿತಿ ಮೀರಿದೆ. ಅಲ್ಲದೇ, ಸುಪ್ರೀಂಕೋರ್ಟ್ ನ ತೀರ್ಪನ್ನು ಉಲ್ಲಂಘಿಸಿದಂತಾಗಿದೆ. ಹೀಗಾಗಿ ಸರ್ಕಾರದ ಮೀಸಲಾತಿ ಹೆಚ್ಚಳ ಮಾಡಿರುವ ಕ್ರಮ ಸಂವಿಧಾನ ಬಾಹಿರ ಎಂದು ಘೋಷಣೆ ಮಾಡಬೇಕು ಎಂದು ಕೋರಿದರು.
ಇತ್ತೀಚೆಗೆ ಛತ್ತೀಸ್ಗಢ ಸರ್ಕಾರ ಶೇ.50ನ್ನು ಮೀರಿ ಮೀಸಲಾತಿ ನೀಡಿದ್ದ ಕ್ರಮವನ್ನು ಅಲ್ಲಿಯ ಹೈಕೋರ್ಟ್ ರದ್ದುಪಡಿಸಿದೆ ಎಂದು ಅರ್ಜಿಯಲ್ಲಿ ವಿವರಿಸಿದರು. ಜೊತೆಗೆ, ಕೇಂದ್ರ ಸರ್ಕಾರದ ಸಾರ್ವಜನಿಕ ಉದ್ದಿಮೆಗಳು ಸೇರಿದಂತೆ ದೇಶದ ಎಲ್ಲ ರಾಜ್ಯಗಳಲ್ಲಿ ಸುಮಾರು 60 ಲಕ್ಷಕ್ಕೂ ಹೆಚ್ಚು ಸರ್ಕಾರಿ ಹುದ್ದೆಗಳು ಖಾಲಿ ಇವೆ.
ಮೀಸಲು ಹೆಚ್ಚಿಸುವುದಕ್ಕೆ ಯಾವುದೇ ತರ್ಕ ಬದ್ಧ ವಿವರಣೆ ಇಲ್ಲ: ಕೇಂದ್ರ ಸರ್ಕಾರ ಒಂದರಲ್ಲಿ 30.7 ಲಕ್ಷ, ಕರ್ನಾಟಕದಲ್ಲಿ 2.3 ಲಕ್ಷ ಹುದ್ದೆಗಳು ಖಾಲಿ ಇವೆ. ಈ ಹುದ್ದೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳಿಗೆ ಮೀಸಲಿಡಲಾಗಿದೆ ಅಂತಹ ಹುದ್ದೆಗಳನ್ನು ಏಕೆ ಭರ್ತಿ ಮಾಡಲಾಗಿಲ್ಲ ಎಂಬುದಕ್ಕೆ ಸರ್ಕಾರಗಳಿಂದ ಯಾವುದೇ ಸ್ಪಷ್ಟನೆ ಇಲ್ಲ. ಆದರೂ ಈ ಸಂದರ್ಭಗಳಲ್ಲಿ ಮೀಸಲು ಹೆಚ್ಚಿಸುವುದಕ್ಕೆ ಯಾವುದೇ ತರ್ಕ ಬದ್ಧ ವಿವರಣೆಯೂ ಇಲ್ಲ ಎಂದು ನ್ಯಾಯಪೀಠಕ್ಕೆ ಅರ್ಜಿದಾರರು ಸಲ್ಲಿಸಿದ ಅರ್ಜಿಯಲ್ಲಿ ವಿವರಿಸಿದ್ದಾರೆ.
ಇದನ್ನೂ ಓದಿ:ಲೋಕ ಅದಾಲತ್‌ನಲ್ಲಿ ಭಾಗವಹಿಸದಂತೆ ತಡೆದ ಮಂಡ್ಯ ವಕೀಲರ ಸಂಘದ ನಡೆಗೆ ಹೈಕೋರ್ಟ್ ಅಸಮಧಾನ