ಬೆಂಗಳೂರು: ಶೈಕ್ಷಣಿಕ ಸಂಸ್ಥೆಗೆ ನೀಡಲಾದ ಅನುದಾನವನ್ನು ತಡೆಹಿಡಿಯುವಂತೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಆಯೋಗಕ್ಕೆ ನಿರ್ದೇಶಿಸುವ ಅಧಿಕಾರವಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ತಮಗೆ ಮಂಜೂರಾದ ಅನುದಾನವನ್ನು ತಡೆಹಿಡಿಯುವಂತೆ ಆಯೋಗವು 2021ರ ಸೆ.16ರಂದು ಸರ್ಕಾರಕ್ಕೆ ನೀಡಿದ್ದ ನಿರ್ದೇಶನ ಪ್ರಶ್ನಿಸಿ ಅರ್ಜಿ ಸಲ್ಲಿಸಿತ್ತು. ವಿಜಯನಗರದ ಹೊಸಪೇಟೆಯ ಶ್ರೀ ವಾಸವಿ ಎಜುಕೇಷನ್ ಸೊಸೈಟಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ.ಐ.ಅರುಣ್ ಅವರಿದ್ದ ಏಕ ಸದಸ್ಯ ನ್ಯಾಯಪೀಠ ಕೈಗೆತ್ತಿಕೊಂಡಿತ್ತು. ವಿಚಾರಣೆ ನಡೆಸಿದ ನ್ಯಾಯಾಲಯ ಅರ್ಜಿದಾರ ಸಂಸ್ಥೆಗೆ ನೀಡಲಾಗುತ್ತಿರುವ ಅನುದಾನವನ್ನು ತಡೆಹಿಡಿಯವಂತೆ ಸರ್ಕಾರಕ್ಕೆ ಸೂಚಿಸಿ 2021ರ ಸೆ.16ರಂದು ಆಯೋಗವು ನೀಡಿದ್ದ ಮಧ್ಯಂತರ ನಿರ್ದೇಶನವನ್ನು ರದ್ದುಪಡಿಸಿತು.
ಇದನ್ನೂ ಓದಿ: ತನಿಖೆಗೆ ವಶಪಡಿಸಿಕೊಂಡ ಚಿನ್ನಾಭರಣಗಳನ್ನು 15 ರಿಂದ 1 ತಿಂಗಳು ಮಾತ್ರ ಪೊಲೀಸರ ವಶದಲ್ಲಿರಬೇಕು: ಹೈಕೋರ್ಟ್
ಏನಿದು ಪ್ರಕರಣ?: ಶಾಲೆಯ ಮಾಜಿ ಮುಖ್ಯೋಪಾಧ್ಯಾಯರಾಗಿದ್ದ ಎಚ್.ಹನುಮಂತಪ್ಪ ಎಂಬುವರ ವಿರುದ್ಧ ದುರ್ನಡತೆ ಆರೋಪದ ಮೇಲೆ ಶಿಸ್ತುಕ್ರಮ ಪ್ರಕ್ರಿಯೆ ಕೈಗೊಂಡಿದ್ದ ಅರ್ಜಿದಾರ ಸಂಸ್ಥೆ, ಅವರಿಗೆ ಶಿಕ್ಷಕರಾಗಿ ಹಿಂಬಡ್ತಿ ನೀಡಿತ್ತು. ಆ ಸಂಬಂಧ ಅವರು ಆಯೋಗಕ್ಕೆ ದೂರು ನೀಡಿದ್ದರು. ವಿಚಾರಣೆ ನಡೆಸಿದ್ದ ಆಯೋಗವು ಶಾಲೆಗೆ ಸರ್ಕಾರ ನೀಡುತ್ತಿರುವ ಅನುದಾನ ತಡೆಯಲು ನಿರ್ದೇಶಿಸಿ ಮಧ್ಯಂತರ ಆದೇಶ ಮಾಡಿತ್ತು. ಇದರಿಂದ ಶ್ರೀ ವಾಸವಿ ಎಜುಕೇಷನ್ ಸೊಸೈಟಿ ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿ, ಆಯೋಗದ ಆದೇಶ ರದ್ದುಪಡಿಸಲು ಕೋರಿತ್ತು.
ವಿಚಾರಣೆ ನಡೆಸಿದ ನ್ಯಾಯಪೀಠ, ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಡಗಳ ಕಾಯ್ದೆ-2002ರ ಅಡಿ ಆಯೋಗ ರಚನೆಯಾಗಿದೆ. ಕಾಯ್ದೆಯ ಸೆಕ್ಷನ್ 8 (ಬಿ) ಪ್ರಕಾರ, ಹಕ್ಕಿನಿಂದ ವಂಚಿತರಾದ ಆರೋಪ ಸಂಬಂಧ ದಾಖಲಾದ ನಿರ್ದಿಷ್ಟ ದೂರು ಕುರಿತು ವಿಚಾರಣೆ ನಡೆಸಲು ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಹಕ್ಕುಗಳನ್ನು ರಕ್ಷಣೆ ಮಾಡಲು ಮತ್ತು ಈ ಕುರಿತ ವಿಚಾರಗಳನ್ನು ಸೂಕ್ತ ಪ್ರಾಧಿಕಾರಗಳ ಮುಂದಕ್ಕೆ ಕೊಂಡೊಯ್ಯಲು ಆಯೋಗ ಅಧಿಕಾವಿದೆ ಎಂದು ತಿಳಿಸಿದೆ.
ಇದನ್ನೂ ಓದಿ: ಮಂತ್ರಿ ಡೆವಲಪರ್ಸ್ನಿಂದ ಮನೆ ಖರೀದಿಗೆ ಸಾಲ ಪಡೆದವರ ಸಿಬಿಲ್ ಸ್ಕೋರ್ ಮರು ಸ್ಥಾಪಿಸಲು ಹೈಕೋರ್ಟ್ ಸೂಚನೆ
ಆದರೆ, ಪ್ರಕರಣದಲ್ಲಿ ಆದೇಶಿಸಿರುವಂತೆ ಶೈಕ್ಷಣಿಕ ಸಂಸ್ಥೆಗೆ ಮಂಜೂರು ಮಾಡುತ್ತಿರುವ ಅನುದಾನ ತಡೆಹಿಡಿಯಲು ಸರ್ಕಾರಕ್ಕೆ ನಿರ್ದೇಶಿಸುವ ಅಧಿಕಾರ ಹೊಂದಿಲ್ಲ. ಜತೆಗೆ, ಪರಿಶಿಷ್ಟ ಜಾತಿಗೆ ಸೇರಿದ ಕಾರಣಕ್ಕೆ ಶಾಲೆಯ ಮಾಜಿ ಮುಖ್ಯೋಪಾಧ್ಯಾಯರಿಗೆ ಅರ್ಜಿದಾರ ಸಂಸ್ಥೆ ತಾರತಮ್ಯ ಮಾಡಿದೆ ಎಂಬ ಆರೋಪದ ಬಗ್ಗೆ ಸೂಕ್ತ ವಿಚಾರಣೆ ನಡೆಸದೇ ಅನುದಾನ ತಡೆಹಿಡಿಯಲು ಆಯೋಗ ಮಧ್ಯಂತರ ಆದೇಶ ಮಾಡಿರುವುದು ನಿಯಮ ಬಾಹಿರ ಎಂದು ಹೈಕೋರ್ಟ್ ತನ್ನ ಆದೇಶದಲ್ಲಿ ಉಲ್ಲೇಖಿಸಿದೆ.