ಬೆಂಗಳೂರು: ಸವಿತಾ ಸಮಾಜ ಅಭಿವೃದ್ಧಿ ನಿಗಮದ ಅಧ್ಯಕ್ಷ ಮತ್ತು ಸ್ವಾಮೀಜಿ ನಡುವಿನ ತಿಕ್ಕಾಟ ಮುಂದುವರಿದಿದೆ. ಈ ಹಿನ್ನೆಲೆಯಲ್ಲಿ ಇಂದು ಮಲ್ಲೇಶ್ವರಂ ಬಿಜೆಪಿ ಕಚೇರಿ ಬಳಿ ಸವಿತಾನಂದ ಸ್ವಾಮೀಜಿ ಭಿಕ್ಷಾಟನೆ ಮಾಡುವ ಮೂಲಕ ಪ್ರತಿಭಟನೆ ನಡೆಸಿದರು.
ಸವಿತಾ ಸಮಾಜ ಅಭಿವೃದ್ಧಿ ನಿಗಮದ ಅಧ್ಯಕ್ಷ ನರೇಶ್ ಬದಲಾವಣೆಗೆ ಪಟ್ಟು ಹಿಡಿದಿರುವ ಇವರು ಈಗಾಗಲೇ ನಿಗಮದ ಅಧ್ಯಕ್ಷ ನರೇಶ್ ಬದಲಾವಣೆ ಮಾಡುವಂತೆ ಮನವಿ ಸಲ್ಲಿಸಿದ್ದಾರೆ. ಸಿಎಂ ಬೊಮ್ಮಾಯಿ ಹಾಗೂ ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾನಾಗೆ ಮನವಿ ಮಾಡಿದ್ದಾರೆ. ಆದರೂ ಬದಲಾವಣೆ ಮಾಡದ ಕಾರಣ ಇದೀಗ ಭಿಕ್ಷಾಟನೆ ಮಾಡಿ ಪ್ರತಿಭಟನೆ ನಡೆಸಿದ್ದಾರೆ.
24 ಗಂಟೆಯೊಳಗೆ ನರೇಶ್ ಅವರನ್ನು ಬದಲಾವಣೆ ಮಾಡಬೇಕು. ಇಲ್ಲದೇ ಹೋದರೆ ರಾಜ್ಯದೆಲ್ಲೆಡೆ ಹಣ ಸಂಗ್ರಹ ಮಾಡಿ ಬಿಜೆಪಿ ಕಚೇರಿಗೆ ಕೊಡ್ತೀವಿ. ಆಗಲೂ ಬದಲಾವಣೆ ಮಾಡದಿದ್ರೆ ಹೋರಾಟ ಮಾಡ್ತೀವಿ. ಹಣ ಪಡೆದು ಅಧ್ಯಕ್ಷ ಸ್ಥಾನಕ್ಕೆ ನರೇಶ್ ನೇಮಕ ಮಾಡಿದ್ದಾರೆ ಅನ್ನೋ ಆರೋಪವಿದೆ. ಹಾಗಾಗಿ, ಅಧ್ಯಕ್ಷ ಸ್ಥಾನದಿಂದ ತೆಗೆಯುತ್ತಿಲ್ಲ. ಹೀಗಾಗಿ, ನಾವು ಕೂಡ ಹಣ ಕೊಡ್ತೀವಿ, ನಿಗಮದ ಅಧ್ಯಕ್ಷರ ಬದಲಾವಣೆ ಮಾಡಿ, ಬೇರೆಯವರನ್ನು ನೇಮಿಸಿ ಎಂದು ಸ್ವಾಮೀಜಿ ಹೇಳಿದರು.
ಇದನ್ನೂ ಓದಿ: ಬಿಜೆಪಿ ಪಕ್ಷ, ಸರ್ಕಾರವೇ ಗೊಂದಲದ ಗೂಡಾಗಿದೆ: ಡಿಕೆಶಿ