ಬೆಂಗಳೂರು: ಬಿಡುಗಡೆ ವಿಚಾರದಲ್ಲಿ ನನ್ನ ಅನುಮತಿ ಇಲ್ಲದೆ ಮಾಹಿತಿ ಹಕ್ಕು ಕಾಯ್ದೆ (ಆರ್ಟಿಐ) ಅಡಿ ಯಾರಿಗೂ ಮಾಹಿತಿ ನೀಡಬೇಡಿ ಎಂದು ಜೈಲಾಧಿಕಾರಿಗಳಿಗೆ ಶಶಿಕಲಾ ನಟರಾಜನ್ ಪತ್ರ ಬರೆದಿದ್ದಾರೆ.
ಇತ್ತೀಚೆಗೆ ಆರ್ಟಿಐ ಕಾರ್ಯಕರ್ತ ನರಸಿಂಹಮೂರ್ತಿ ಎಂಬವರು, ಶಶಿಕಲಾ ಜೈಲಿನಿಂದ ಯಾವಾಗ ಬಿಡುಗಡೆ ಆಗಲಿದ್ದಾರೆ ಎಂದು ಆರ್ಟಿಐ ಅಡಿ ಅರ್ಜಿ ಸಲ್ಲಿಸಿದ್ದರು. ಇದಕ್ಕೆ ಉತ್ತರ ನೀಡಿದ ಕಾರಾಗೃಹ ಇಲಾಖೆ, 2021 ಜನವರಿ 27 ರಂದು ಬಿಡುಗಡೆಯಾಗಲಿದ್ದಾರೆ. ಒಂದು ವೇಳೆ ನ್ಯಾಯಾಲಯ ವಿಧಿಸಿದ 10 ಕೋಟಿ ರೂ. ದಂಡ ಪಾವತಿಸದಿದ್ದರೆ, 2022 ರ ಜನವರಿಯಲ್ಲಿ ಬಿಡುಗಡೆಯಾಗಲಿದ್ದಾರೆ ಎಂದು ತಿಳಿಸಿತ್ತು. ಈ ಸಂಬಂಧ ಸೆ.16 ರಂದು ಜೈಲಿನಲ್ಲೇ ಪತ್ರ ಬರೆದಿರುವ ಶಶಿಕಲಾ, ನನ್ನ ಬಿಡುಗಡೆ ಮಾಡುವ ವಿಚಾರದಲ್ಲಿ ಹಾಗೂ ನನಗೆ ಸಂಬಂಧಿಸಿದ ವಿಷಯಗಳಿಗೆ ಯಾವುದೇ ರೀತಿಯಿಂದಲೂ ಮಾಹಿತಿ ನೀಡಬೇಡಿ ಎಂದು ಜೈಲಾಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದಾರೆ ಎನ್ನಲಾಗ್ತಿದೆ.

ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ ಸಾಬೀತಾದ ಹಿನ್ನೆಲೆ 2017 ರ ಫೆ. 15ರಂದು ಜಯಲಿಲಿತಾ, ಶಶಿಕಲಾ, ಇಳವರಸಿ ಹಾಗೂ ಸುಧಾಕರನ್ಗೆ ನ್ಯಾಯಾಲಯ ನಾಲ್ಕು ವರ್ಷಗಳ ಜೈಲು ಶಿಕ್ಷೆ ವಿಧಿಸಿ ಆದೇಶ ಹೊರಡಿಸಿತ್ತು. ಜಯಲಲಿತಾಗೆ 100 ಕೋಟಿ ರೂ. ದಂಡ, ಶಶಿಕಲಾ ಸೇರಿದಂತೆ ಮೂವರಿಗೆ ತಲಾ 10 ಕೋಟಿ ರೂಪಾಯಿ ದಂಡ ವಿಧಿಸಿ ನ್ಯಾ. ಮೈಕಲ್ ಖನ್ನಾ ತೀರ್ಪು ನೀಡಿದ್ದರು. ಆದರೆ ತೀರ್ಪು ಬರುವ ಮುನ್ನವೇ ಜಯಲಿಲಿತಾ ಅನಾರೋಗ್ಯದಿಂದ ಮೃತಪಟ್ಟಿದ್ದರು. ಇನ್ನುಳಿದ ಮೂವರು ಅಪರಾಧಿಗಳು 2017ರ ಫೆ. 15ರಂದು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲು ಸೇರಿದ್ದರು.
ಮುಂದಿನ ವರ್ಷ ಫೆಬ್ರವರಿಗೆ ಮೂವರಿಗೆ ನಾಲ್ಕು ವರ್ಷಗಳ ಶಿಕ್ಷೆ ಪೂರ್ಣಗೊಳ್ಳಲಿದೆ. ಜೈಲಿನಲ್ಲಿದ್ದಾಗ ಶಶಿಕಲಾ ನಡತೆ, ಪೆರೋಲ್ ರಜೆ ಇವೆಲ್ಲವನ್ನೂ ಕೂಲಂಕಷವಾಗಿ ಪರಿಶೀಲಿಸಿ, ಜನವರಿ ಅಂತ್ಯಕ್ಕೆ ಶಶಿಕಲಾ ಮತ್ತು ಅವರ ತಂಡವನ್ನು ಬಿಡುಗಡೆ ಮಾಡಲು ಜೈಲಾಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ.